ತನ್ನ ಹೆಲಿಕಾಪ್ಟರ್ ರಿಪೇರಿಗೆ ನೆರವಾಗಿ ಜನ ಮೆಚ್ಚುಗೆಗೆ ಪಾತ್ರರಾದ ರಾಹುಲ್ ಗಾಂಧಿ
ಹೊಸದಿಲ್ಲಿ, ಮೇ 11: ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ವ್ಯಸ್ತರಾಗಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಹಿಮಾಚಲ ಪ್ರದೇಶದ ಉನಾದಲ್ಲಿ ತಾಂತ್ರಿಕ ಸಮಸ್ಯೆಗೀಡಾಯಿತು. ಆಗ ಹೆಲಿಕಾಪ್ಟರ್ ದುರಸ್ತಿಗೆ ಮುಂದಾದ ಸಿಬ್ಬಂದಿಗೆ ನೆರವಾದ ರಾಹುಲ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ರಾಹುಲ್ ತನ್ನ ಹೆಲಿಕಾಪ್ಟರ್‌ಗೆ ಏನೋ ಫಿಕ್ಸ್ ಮಾಡುತ್ತಿರುವ ಫೋಟೊವನ್ನು ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊ ಭಾರೀ ವೈರಲ್ ಆಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಲಾಗಿರುವ ಫೋಟೊಕ್ಕೆ 75,000ಕ್ಕೂ ಅಧಿಕ ಮೆಚ್ಚುಗೆ ಬಂದಿದೆ.
ನಾನು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನಲ್ಲಿ ಸಮಸ್ಯೆ ಇತ್ತು. ಉತ್ತಮ ಟೀಮ್‌ವರ್ಕ್‌ನಿಂದಾಗಿ ಕೂಡಲೇ ಫಿಕ್ಸ್ ಮಾಡಿ, ಆ ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಸಮಸ್ಯೆ ಗಂಭೀರವಾಗಿರಲಿಲ್ಲ. ಎಲ್ಲರಿಗೂ ಧನ್ಯವಾದಗಳು ಎಂದು ರಾಹುಲ್ ಫೋಟೊದ ಕೆಳಗೆ ಬರೆದಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಮೇ 19 ರಂದು ಚುನಾವಣೆ ನಡೆಯಲಿದೆ. ಇದು ಏಳು ಹಂತದ ಚುನಾವಣೆಯಲ್ಲಿ ಕೊನೆಯ ಹಂತವಾಗಿದೆ. ಚುನಾವಣೆಯ ಫಲಿತಾಂಶ ಮೇ 23ಕ್ಕೆ ಪ್ರಕಟವಾಗಲಿದೆ.