×
Ad

ದೇಶವನ್ನು ಕರಿ ಬ್ರಿಟಿಷರ ಹಾಗೂ ಚೌಕೀದಾರ್‌ಗಳ ಆಡಳಿತದಿಂದ ಮುಕ್ತಗೊಳಿಸಲು ಜನತೆ ಕಟಿಬದ್ಧರಾಗಬೇಕು: ಸಿಧು

Update: 2019-05-11 22:18 IST

ಇಂದೋರ್, ಮೇ 11: ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್‌ನ ತಾರಾ ಪ್ರಚಾರಕ ನವಜೋತ್ ಸಿಂಗ್ ಸಿಧು , ದೇಶವನ್ನು ಕರಿ ಬ್ರಿಟಿಷರ ಹಾಗೂ ಚೌಕೀದಾರ್‌ಗಳ ಆಡಳಿತದಿಂದ ಮುಕ್ತಗೊಳಿಸಲು ಜನತೆ ಕಟಿಬದ್ಧರಾಗಬೇಕು ಎಂದು ಹೇಳಿದ್ದಾರೆ.

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಕಾಂಗ್ರೆಸ್ ಮಹಾತ್ಮಾ ಗಾಂಧೀಜಿ, ಮೌಲಾನಾ ಆಝಾದ್‌ರಂತವರ ಪಕ್ಷವಾಗಿದೆ. ಈ ಪಕ್ಷ ದೇಶವನ್ನು ಬ್ರಿಟಿಷರ ಆಡಳಿತದಿಂದ ಮುಕ್ತಗೊಳಿಸಿದೆ. ಇದೀಗ ಇಂದೋರ್‌ನ ಜನತೆ ಈ ದೇಶವನ್ನು ಕಪ್ಪು ಬ್ರಿಟಿಷರು(ಬಿಜೆಪಿ) ಹಾಗೂ ಚೌಕೀದಾರರ ಆಡಳಿತದಿಂದ ಮುಕ್ತಗೊಳಿಸಬೇಕು. ನಿಮ್ಮ ಮತಕ್ಕಿರುವ ಮೌಲ್ಯವನ್ನು ಕೀಳಂದಾಜಿಸಬೇಡಿ ಎಂದವರು ಹೇಳಿದರು.

ಮೋದಿಯ ಬಗ್ಗೆ ಟೀಕಾ ಪ್ರಹಾರ ಮುಂದುವರಿಸಿದ ಸಿಧು, ಇವರು ಕೇವಲ ಅಂಬಾನಿಗೆ ಮಾತ್ರ ಚೌಕೀದಾರ. ದೇಶವು 32 ಲಕ್ಷ ಕೋಟಿ ರೂ. ಸಾಲದಲ್ಲಿ ಮುಳುಗಿದ್ದು ಇದಕ್ಕೆ ಮೋದಿಯನ್ನೇ ದೂಷಿಸಬೇಕು. ರೈತನೊಬ್ಬ 2 ಲಕ್ಷ ಸಾಲ ಪಡೆಯಬೇಕಿದ್ದರೆ ಆಗ ಮೋದಿ ಆತನಿಂದ ಖಾಲಿ ಚೆಕ್ ಪಡೆಯುತ್ತಾರೆ. ಆದರೆ ಶ್ರೀಮಂತ ಉದ್ಯಮಿಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಸಿಧು ಆರೋಪಿಸಿದರು.

ಈ ಮಧ್ಯೆ, ಎಪ್ರಿಲ್ 29ರಂದು ಭೋಪಾಲ್‌ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮೋದಿ ವಿರುದ್ಧ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸಿಧುಗೆ ನೋಟಿಸ್ ಜಾರಿಗೊಳಿಸಿದೆ. ಮೋದಿ ವಿರುದ್ಧ ಟೀಕೆ ಮಾಡಿದ್ದ ಸಿಧು, ಮೋದಿ ಓರ್ವ ರಾಷ್ಟ್ರದ್ರೋಹಿಯಾಗಿದ್ದು ಸರಕಾರದ ಅಧೀನದ ಬ್ಯಾಂಕ್‌ಗಳಿಂದ ಹಣವನ್ನು ಕದಿಯುತ್ತಿದ್ದಾರೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News