×
Ad

ಆಸ್ಕರ್ ಪ್ರಶಸ್ತಿಗೆ ಅರ್ಹತೆ ಗಳಿಸಿದ ‘ಕಮಲಿ’ ಕಿರುಚಿತ್ರ

Update: 2019-05-11 23:32 IST

ಹೊಸದಿಲ್ಲಿ, ಮೇ 11: ಸ್ಕೇಟಿಂಗ್ ಕ್ರೀಡೆಯಲ್ಲಿ ಅದ್ಭುತ ಸಾಧನೆ ತೋರಿರುವ ತಮಿಳುನಾಡಿನ 9 ವರ್ಷದ ಬಾಲಕಿ ಕಮಲಿ ಮೂರ್ತಿ ಈಗ ಮತ್ತೊಂದು ಸಾಧನೆಯ ಹೊಸ್ತಿಲಲ್ಲಿದ್ದಾಳೆ. ಕಮಲಿ, ಅವಳ ತಾಯಿ ಹಾಗೂ ಅಜ್ಜಿಯ ಕುರಿತು ನಿರ್ಮಿಸಿರುವ ಕಿರುಚಿತ್ರವು ಈಗ 2020ರ ಆಸ್ಕರ್ ಪ್ರಶಸ್ತಿಗೆ ಅರ್ಹತೆ ಗಳಿಸಿಕೊಂಡಿದೆ.

ಕಮಲಿ ಎಂಬ ಹೆಸರಿನ 24 ನಿಮಿಷದ ಕಿರುಚಿತ್ರದಲ್ಲಿ ಕಮಲಿಯ ತಾಯಿ ಸುಗಂಧಿ ಪುರುಷ ಪ್ರಾಧಾನ್ಯ ಸಮಾಜ ಮತ್ತು ಸಂಪ್ರದಾಯವಾದಿಗಳ ಕಟ್ಟುಪಾಡುಗಳನ್ನು ನಿವಾರಿಸಿಕೊಂಡು ತನ್ನ ಮಗುವನ್ನು ಸ್ವತಂತ್ರವಾಗಿ ಬೆಳೆಸುವ ಹೋರಾಟಮಯ ಬದುಕಿನ ಚಿತ್ರಣವಿದೆ. ಮೀನುಗಾರಿಕೆಯನ್ನೇ ಪ್ರಧಾನ ಉದ್ಯೋಗವಾಗಿಸಿಕೊಂಡಿರುವ ತಮಿಳುನಾಡಿನ ಮಹಾಬಲಿಪುರಂನ ಏಕೈಕ ಮಹಿಳಾ ಸ್ಕೇಟಿಂಗ್ ಪಟುವಾಗಿರುವ ಕಮಲಿ, ಸ್ಕೇಟಿಂಗ್ ಕ್ರೀಡೆಗೆ ಹೆಚ್ಚಿನ ಪ್ರಚಾರ ನೀಡುವ ನಿಟ್ಟಿನಲ್ಲಿ ವೃತ್ತಿಪರ ಸ್ಕೇಟರ್‌ಗಳೊಡನೆ ದೇಶದಾದ್ಯಂತ ಪ್ರವಾಸ ಮಾಡಿದ್ದಾಳೆ. ಸಮುದ್ರದ ನೀರಿನಲ್ಲಿ ಸರ್ಫಿಂಗ್ ನಡೆಸುವುದೂ ಇವಳ ನೆಚ್ಚಿನ ಹವ್ಯಾಸವಾಗಿದ್ದು ಮುಂದೊಂದು ದಿನ ವೃತ್ತಿಪರ ಸ್ಕೇಟಿಂಗ್ ಮತ್ತು ಸರ್ಫಿಂಗ್ ಕ್ರೀಡಾಪಟುವಾಗುವ ಮಹದಾಸೆ ಹೊಂದಿದ್ದಾಳೆ.

 ಕಿರುಚಿತ್ರವನ್ನು ನ್ಯೂಝಿಲ್ಯಾಂಡ್‌ನ ಸಾಷಾ ರೈನ್‌ಬೋ ನಿರ್ದೇಶಿಸಿದ್ದು ಎಪ್ರಿಲ್‌ನಲ್ಲಿ ನಡೆದ ಅಟ್ಲಾಂಟಾ ಚಿತ್ರೋತ್ಸವದಲ್ಲಿ ಉತ್ತಮ ಸಾಕ್ಷ್ಯಚಿತ್ರ ಎಂಬ ಪುರಸ್ಕಾರಕ್ಕೆ ಪಾತ್ರವಾಗಿದೆ. ಇದರೊಂದಿಗೆ 2020ರ ಅಕಾಡೆಮಿ ಪುರಸ್ಕಾರಕ್ಕೆ ಅರ್ಹತೆ ಗಳಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News