×
Ad

ಗ್ರೇಟರ್‌ನೊಯ್ಡದಲ್ಲಿ 1,000 ಕೋ.ರೂ. ಮೌಲ್ಯದ ಡ್ರಗ್ಸ್ ವಶ

Update: 2019-05-12 13:01 IST
ಚಿತ್ರ ಕೃಪೆ: hindustantimes.com

ಹೊಸದಿಲ್ಲಿ, ಮೇ 12: ಮಾದಕ ದ್ರವ್ಯ ನಿಯಂತ್ರಣ ಕೇಂದ್ರ(ಎನ್‌ಸಿಬಿ) ಗ್ರೇಟರ್ ನೊಯ್ಡದ ಮನೆಯೊಂದರ ಮೇಲೆ ದಾಳಿ ನಡೆಸಿ 1,000 ಕೋ.ರೂ. ಮೌಲ್ಯದ 1,818 ಕೆಜಿ ಸ್ಯೂಡೊಫೆಡ್ರೈನ್ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದು, ನೈಜೀರಿಯ ದೇಶದ ಇಬ್ಬರು ಹಾಗೂ ದಕ್ಷಿಣ ಆಫ್ರಿಕದ ಓರ್ವ ಪ್ರಜೆಯನ್ನು ಬಂಧಿಸಿದ್ದಾರೆ. ಇದು ದೇಶದ ಅತ್ಯಂತ ದೊಡ್ಡ ಮಾದಕ ದ್ರವ್ಯ ಜಪ್ತಿ ಪ್ರಕರಣವಾಗಿದೆ.

ದಾಳಿಗೆ ಒಳಗಾಗಿರುವ ಮನೆ ಐಪಿಎಸ್ ಅಧಿಕಾರಿಯೊಬ್ಬರಿಗೆ ಸೇರಿದ್ದು, ಈ ಮನೆಯನ್ನು ಡ್ರಗ್ ಉತ್ಪಾದನಾ ಘಟಕವನ್ನಾಗಿ ಬಳಸಿಕೊಳ್ಳಲಾಗುತ್ತಿತ್ತು. ವಶಪಡಿಸಿಕೊಂಡ ಡ್ರಗ್ಸ್‌ನ ಅಂದಾಜು ಮೌಲ್ಯ 1,000 ಕೋ.ರೂ.ಗೆ ಅಧಿಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಭಾರತದಲ್ಲಿ ಇದೇ ಮೊದಲ ಬಾರಿ ಇಷ್ಟೊಂದು ಪ್ರಮಾಣದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ವಿಶ್ವದಲ್ಲಿ ಗರಿಷ್ಠ ಪ್ರಮಾಣದ ಸ್ಯೂಡೊಫೆಡ್ರೈನ್ ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಸಿಬಿಯ ವಲಯ ನಿರ್ದೇಶಕ ಮಾಧವ್ ಸಿಂಗ್ ಹೇಳಿದ್ದಾರೆ.

 ಗುರುವಾರ ಬೆಳಗ್ಗೆ ಕೇಂದ್ರ ಇಂಡಸ್ತ್ರಿಯಲ್ ಸೆಕ್ಯೂರಿಟಿ ಫೋರ್ಸ್(ಸಿಐಎಸ್‌ಎಫ್)ದಕ್ಷಿಣ ಆಫ್ರಿಕದ 31 ವಯಸ್ಸಿನ ಮಹಿಳಾ ಪ್ರಯಾಣಿಕೆ ನೊಮ್ಸಾ ಲುಟಾಲೊರನ್ನು ದಿಲ್ಲಿಯ ಇಂದಿರಾಗಾಂಧಿ ಇಂಟರ್‌ನ್ಯಾಶನಲ್ ಏರ್‌ಪೋರ್ಟ್‌ನಲ್ಲಿ ಬಂಧಿಸಿದ್ದರು.

 ಮಹಿಳೆಯ ಬ್ಯಾಗ್‌ನಲ್ಲಿ 24.7 ಕೆಜಿ ಸ್ಯೂಡೊಫೆಡ್ರೈನ್ ಪತ್ತೆಯಾಗಿದ್ದು, ಈ ಕುರಿತು ವಿಚಾರಣೆ ನಡೆಸಿದಾಗ ಗ್ರೇಟರ್‌ನೊಯ್ಡೆದಲ್ಲಿರುವ ನೈಜೀರಿಯದ ಇಬ್ಬರು ಪ್ರಜೆಗಳಿಗೆ ಇದನ್ನು ಸರಬರಾಜು ಮಾಡಿ ಜೋಹಾನ್ಸ್‌ಬರ್ಗ್ ತೆರಳುತ್ತಿರುವುದಾಗಿ ಹೇಳಿದ್ದರು. ಮಹಿಳೆ ನೀಡಿದ ಸುಳಿವಿನ ಮೇರೆಗೆ ಎಸಿಬಿ ತಂಡ ಗುರುವಾರ ಗ್ರೇಟರ್‌ನೊಯ್ಡಿದ ಸೆಕ್ಟರ್ ಪಿ4ರಲ್ಲಿರುವ ಮನೆ ಮೇಲೆ ದಾಳಿ ನಡೆಸಿತ್ತು. ಹೆನ್ರಿ(35) ಹಾಗೂ ಚಿಮಾಂಡೊ ಒಕೊರಾ(30) ಹೆಸರಿನ ನೈಜೀರಿಯ ಪ್ರಜೆಯನ್ನು ಬಂಧಿಸಿತ್ತು. ಮನೆಯಲ್ಲಿ ಶೋಧ ನಡೆಸಿದಾಗ 1,818 ಕೆಜಿ ತೂಕದ ಮಾದಕ ವಸ್ತು ಪತ್ತೆಯಾಗಿತ್ತು. 1.9 ಕೆಜಿ ಕೊಕೈನ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News