ಅಮೆರಿಕ ಮಾನಸಿಕ ಯುದ್ಧ ಆರಂಭಿಸಿದೆ: ಇರಾನ್ ಸೇನಾ ಮುಖ್ಯಸ್ಥ

Update: 2019-05-12 17:11 GMT

ಜಿನೆವ,ಮೇ.12: ಅಮೆರಿಕ ಮಧ್ಯ ಪ್ರಾಚ್ಯಕ್ಕೆ ಹೆಚ್ಚುವರಿ ಯುದ್ಧನೌಕೆ ಮತ್ತು ಕ್ಷಿಪಣಿಗಳನ್ನು ಕಳುಹಿಸುವ ಮೂಲಕ ಈ ಪ್ರದೇಶದಲ್ಲಿ ಮಾನಸಿಕ ಯುದ್ಧ ಆರಂಭಿಸಿದೆ ಎಂದು ಇರಾನ್‌ನ ಸೇನಾ ಮುಖ್ಯಸ್ಥ ರವಿವಾರ ಸಂಸತ್ ಅಧಿವೇಶನದಲ್ಲಿ ತಿಳಿಸಿದ್ದಾರೆ ಎಂದು ಸಂಸತ್ ವಕ್ತಾರ ಮಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮಧ್ಯ ಪ್ರಾಚ್ಯದಲ್ಲಿ ಅಮೆರಿಕನ್ ಸೇನೆಯ ಆಗಮನ ಮತ್ತು ನಿರ್ಗಮನ ಒಂದು ಸಾಮಾನ್ಯ ವಿಷಯವಾಗಿದೆ. ಹಾಗಾಗಿ ಈ ಪ್ರದೇಶದಲ್ಲಿ ಸಮರ ಸಿದ್ಧತೆ ನಡೆಸುವ ಮೂಲಕ ಅಮೆರಿಕ ಇರಾನ್ ವಿರುದ್ಧ ಮಾನಸಿಕ ಯುದ್ಧ ಆರಂಭಿಸಿದೆ ಎಂದು ಕಮಾಂಡರ್ ಸಲಾಮಿ ಅಭಿಪ್ರಾಯಿಸಿದ್ದಾರೆ ಎಂದು ಸಂಸತ್ ವಕ್ತಾರ ತಿಳಿಸಿದ್ದಾರೆ ಎಂದು ಸ್ಥಳೀಯ ಸುದ್ದಿ ಜಾಲತಾಣ ವರದಿ ಮಾಡಿದೆ. ಮಧ್ಯ ಪ್ರಾಚ್ಯಕ್ಕೆ ಈಗಾಗಲೇ ಕಳುಹಿಸಲಾಗಿರುವ ಯುದ್ಧನೌಕೆಗೆ ಬೆಂಬಲವಾಗಿ ಅಮೆರಿಕ ಯುದ್ಧವಿಮಾನ ವಾಹಕ ನೌಕೆ ಮತ್ತು ಬಿ-52 ಬಾಂಬರ್ ವಿಮಾನಗಳನ್ನು ಹೆಚ್ಚುವರಿಯಾಗಿ ಕಳುಹಿಸಿದೆ ಎಂದು ಶುಕ್ರವಾರ ಪೆಂಟಗನ್ ಹೇಳಿಕೆ ನೀಡಿತ್ತು. ಈ ಹೇಳಿಕೆಯ ಹಿನ್ನೆಲೆಯಲ್ಲಿ ಸಲಾಮಿ ತನ್ನ ಆತಂಕವನ್ನು ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮೇಜರ್ ಜನರಲ್ ಹುಸೈನ್ ಸಲಾಮಿ ಅವರನ್ನು ಕಳೆದ ತಿಂಗಳಷ್ಟೇ ಸೇನಾ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News