ಅಮೆರಿಕ ಒತ್ತಡ ಎದುರಿಸಲು ಒಗ್ಗಟ್ಟಾಗಿರುವಂತೆ ರಾಜಕೀಯ ಪಕ್ಷಗಳಿಗೆ ಕರೆ ನೀಡಿದ ಇರಾನ್ ಅಧ್ಯಕ್ಷ ರೂಹಾನಿ

Update: 2019-05-12 17:17 GMT

ದುಬೈ,ಮೇ.12: ಅಮೆರಿಕದಿಂದ ಎದುರಾಗಿರುವ ಒತ್ತಡವನ್ನು ನಿಬಾಯಿಸಲು ಇರಾನ್‌ನ ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟಿನಿಂದ ಇರಬೇಕು ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಶನಿವಾರ ಕರೆ ನೀಡಿದ್ದಾರೆ. ಇರಾನ್ ಅಮೆರಿಕದ ಕಠಿಣ ನಿರ್ಬಂಧಗಳಿಗೆ ಒಳಗಾಗಿರುವ ಕಾರಣ ದೇಶದ ಪರಿಸ್ಥಿತಿ 1980ರ ಯುದ್ಧದ ಸಮಯಕ್ಕಿಂತಲೂ ದುಸ್ತರವಾಗಬಹುದು ಎಂದು ರೂಹಾನಿ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 

ತನ್ನ ಪರಮಾಣು ಕಾರ್ಯಕ್ರಮವನ್ನು ಕೈಬಿಡುವ ಬಗ್ಗೆ ಅಮೆರಿಕ ಜೊತೆ ಮಾತನಾಡುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಇರಾನ್‌ಗೆ ಮನವಿ ಮಾಡಿದ್ದರು. ಇಲ್ಲದಿದ್ದಲ್ಲಿ ಎರಡು ದೇಶಗಳ ಮಧ್ಯೆ ಸೇನಾ ಸಂಘರ್ಷ ನಡೆಯುವ ಬಗ್ಗೆಯೂ ಅವರು ಸೂಚನೆ ನೀಡಿದ್ದರು. ಈ ತಿಂಗಳಿನಿಂದ ಇರಾನ್‌ನ ತೈಲ ರಫ್ತಿನ ಮೇಲೆ ನಿರ್ಬಂಧ ಹೇರಿರುವ ಟ್ರಂಪ್ ಇರಾನ್ ಮೇಲೆ ಆರ್ಥಿಕ ಮತ್ತು ಸೇನಾ ದಿಗ್ಭಂಧನವನ್ನು ಮತ್ತಷ್ಟು ಬಿಗುಗೊಳಿಸಿದ್ದಾರೆ. ಜೊತೆಗೆ ಮಧ್ಯ ಪ್ರಾಚ್ಯದಲ್ಲಿ ಅಮೆರಿಕನ್ ನೌಕಾಪಡೆ ಮತ್ತು ವಾಯುಪಡೆಯನ್ನು ನಿಯೋಜಿಸಿ ಯುದ್ಧಭೀತಿಯನ್ನು ಸೃಷ್ಟಿಸಿದ್ದಾರೆ. ಇಂದು 1980-88ರ ಯುದ್ಧ ಅವಧಿಗಿಂತ ಪರಿಸ್ಥಿತಿ ಉತ್ತಮವಿದೆಯೋ, ಕೆಟ್ಟದಿದೆಯೋ ಗೊತ್ತಿಲ್ಲ. ಆದರೆ ಯುದ್ಧದ ಅವಧಿಯಲ್ಲಿ ನಮ್ಮ ಬ್ಯಾಂಕ್‌ಗಳು, ತೈಲ ಮಾರಾಟ ಅಥವಾ ಆಮದು ಮತ್ತು ರಫ್ತಿಗೆ ಯಾವುದೇ ಸಮಸ್ಯೆ ಇರಲಿಲ್ಲ ಹಾಗೂ ಕೇವಲ ಶಸ್ತ್ರಾಸ್ತ್ರಗಳ ಖರೀದಿ ಮೇಲೆ ನಿರ್ಬಂಧ ಹೇರಲಾಗಿತ್ತು ಎಂದು ರೂಹಾನಿ ತಿಳಿಸಿದ್ದಾರೆ ಎಂದು ಸರಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಜಾಗತಿಕ ಶಕ್ತಿಗಳ ಜೊತೆ ಇರಾನ್‌ನ 2015ರ ಪರಮಾಣು ಒಪ್ಪಂದಿಂದ ಟ್ರಂಪ್ ತನ್ನ ದೇಶದ ಹೆಸರನ್ನು ಹಿಂಪಡೆದುಕೊಂಡ ನಂತರ ರೂಹಾನಿ ಸಾರ್ವತ್ರಿಕವಾಗಿ ಟೀಕೆಗೊಳಗಾಗಿದ್ದರು. ಈ ಕಾರಣಕ್ಕೆ ರೂಹಾನಿಯ ಮಿತ್ರಪಕ್ಷಗಳೂ ಅವರ ಕೈಬಿಟ್ಟಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News