ಒಪ್ಪಂದಕ್ಕೆ ಈಗಲೇ ಸಹಿ ಹಾಕಿ, ಇಲ್ಲವಾದಲ್ಲಿ ಪರಿಸ್ಥಿತಿ ಕೆಟ್ಟದಾಗಬಹುದು: ಚೀನಾಕ್ಕೆ ಟ್ರಂಪ್ ಎಚ್ಚರಿಕೆ

Update: 2019-05-12 17:25 GMT

ವಾಶಿಂಗ್ಟನ್,ಮೇ.12: ಈಗಲೇ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿ ಇಲ್ಲವಾದಲ್ಲಿ ನನ್ನ ಎರಡನೇ ಅವಧಿಯಲ್ಲಿ ಈ ಒಪ್ಪಂದಕ್ಕೆ ಮಾತುಕತೆ ನಡೆಸುವುದು ಬಹಳ ಕಠಿಣವಾಗಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾಕ್ಕೆ ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ಮತ್ತು ಚೀನಾ ವ್ಯಾಪಾರ ಸಮರದಲ್ಲಿ ತೊಡಗಿದ್ದು ಇದರಿಂದ ಆಮದು ವಸ್ತುಗಳ ಮೇಲಿನ ಸುಂಕ ಗಗನಕ್ಕೇರುತ್ತಿದೆ, ಜೊತೆಗೆ ಜಾಗತಿಕ ಆರ್ಥಿಕತೆಗೂ ಹಾನಿ ಮಾಡುತ್ತಿದೆ.

ಶುಕ್ರವಾರ ನಡೆದ ಮಾತುಕತೆ ಯಾವುದೇ ಒಪ್ಪಂದಕ್ಕೆ ಬರದೆ ಕೊನೆಯಾದ ನಂತರ ಮಾತನಾಡಿದ ಚೀನಾದ ಮುಖ್ಯ ಸಮಾಲೋಚಕರು, ಎರಡೂ ದೇಶಗಳ ಪ್ರಮುಖರು ಮತ್ತೊಮ್ಮೆ ಬೀಜಿಂಗ್‌ನಲ್ಲಿ ಸೇರಲಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಚೀನಾ ತನ್ನ ಪ್ರಮುಖ ತತ್ವಗಳಲ್ಲಿ ಯಾವುದೇ ರಿಯಾಯಿತಿ ಮಾಡುವುದಿಲ್ಲ ಎಂದೂ ಅವರು ಸ್ಪಷ್ಟ ಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಟ್ರಂಪ್, ಇತ್ತೀಚಿನ ಮಾತುಕತೆಯಲ್ಲಿ ಚೀನಾಕ್ಕೆ ಎಷ್ಟು ದೊಡ್ಡ ಹೊಡೆತ ಬಿದ್ದಿದೆಯೆಂದರೆ ಅವರು 2020ರ ಚುನಾವಣೆ ವರೆಗೆ ಕಾಯುವುದೇ ಒಳಿತು ಎಂದು ಭಾವಿಸಿರಬಹುದು. ಮುಂದಿನ ಬಾರಿ ಚುನಾವಣೆಯಲ್ಲಿ ಡೆಮಾಕ್ರಾಟ್ ಗೆಲುವು ಸಾಧಿಸಿದರೆ ಅಮೆರಿಕದಿಂದ ಪ್ರತಿ ವರ್ಷ 500 ಬಿಲಿಯನ್ ಡಾಲರ್ ಕೀಳಬಹುದು ಎನ್ನುವುದು ಚೀನಾದ ಅನಿಸಿಕೆ ಎಂದು ತಿಳಿಸಿದ್ದರು. ಆದರೆ ಸಮಸ್ಯೆ ಏನೆಂದರೆ ಮುಂದಿನ ಬಾರಿಯೂ ನಾನೇ ಗೆಲ್ಲುತ್ತೇನೆ ಎನ್ನುವುದು ಅವರಿಗೆ ತಿಳಿದಿದೆ. ಹಾಗಾಗಿ ಈ ಒಪ್ಪಂದವನ್ನು ನನ್ನ ಮುಂದಿನ ಅವಧಿಯಲ್ಲಿ ಚರ್ಚಿಸುವುದಾದರೆ ಅದು ಅವರ ಪಾಲಿಗೆ ಮತ್ತಷ್ಟು ಕೆಟ್ಟದಾಗಲಿದೆ. ಈಗಲೇ ಸಹಿ ಹಾಕಿದರೆ ಅವರಿಗೆ ಒಳ್ಳೆಯದು ಎಂದು ಟ್ರಂಪ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News