ರಮಝಾನ್ ಪ್ರಯುಕ್ತ ಇರಾಕ್‌ನ ಸಂತ್ರಸ್ತ ಶಿಬಿರದಲ್ಲಿ ಕುರ್ ಆನ್ ಹಂಚಿದ ಸಿಖ್ ಸೇವಾ ಸಂಸ್ಥೆ

Update: 2019-05-12 17:30 GMT

ಬಗ್ದಾದ್,ಮೇ.12: ಪವಿತ್ರ ರಮಝಾನ್ ಸಮಯದಲ್ಲಿ ಇರಾಕ್‌ನ ಸಂತ್ರಸ್ತರ ಶಿಬಿರದಲ್ಲಿ ನೆಲೆಸಿರುವವರಿಗೆ ಕುರ್ ಆನ್ ಹಂಚುವ ಮೂಲಕ ಖಾಲ್ಸಾ ಏಡ್ ಎಂಬ ಸರಕಾರೇತರ ಸಂಸ್ಥೆ ಸಾರ್ವತ್ರಿಕವಾಗಿ ಶ್ಲಾಘನೆಗೆ ಪಾತ್ರವಾಗಿದೆ. ಅಂತರ್‌ರಾಷ್ಟ್ರೀಯ ಸಿಖ್ ಸರಕಾರೇತರ ಸಂಸ್ಥೆಯಾಗಿರುವ ಖಾಲ್ಸಾ ಏಡ್ ರಮಝಾನ್ ಸಮಯದಲ್ಲಿ ಶಿಬಿರಾರ್ಥಿಗಳಿಗೆ ಇಫ್ತಾರ್ ಸಾಮಾಗ್ರಿಗಳನ್ನು ಹಂಚುತ್ತಿದ್ದರು. ಈ ವೇಳೆ ಶಿಬಿರದ ವ್ಯವಸ್ಥಾಪಕರು ಕುರ್ ಆನ್ ತಂದು ಕೊಡುವಂತೆ ಅವರಲ್ಲಿ ಮನವಿ ಮಾಡಿದ್ದರು. ಇದಕ್ಕೊಪ್ಪಿದ ಖಾಲ್ಸಾ ಏಡ್ ಕುರ್ ಆನ್ ನ ಐದು ಪ್ರತಿಗಳ ಜೊತೆಗೆ ಪ್ರಾರ್ಥನೆಗೆ ಬಳಸುವ ನೆಲಹಾಸನ್ನೂ ಒದಗಿಸಿದೆ. ಈ ಕುರಿತು ಟ್ವಿಟರ್‌ನಲ್ಲಿ ಖಾಲ್ಸಾ ಏಡ್ ಹಂಚಿದ್ದ ವೀಡಿಯೊ ವೈರಲ್ ಆಗಿದ್ದು ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.

ಖಾಲ್ಸಾ ಏಡ್ ಹಲವು ರೀತಿಯಲ್ಲಿ ಮಾನವೀಯ ಕಾರ್ಯಗಳಲ್ಲಿ ಭಾಗಿಯಾಗಿ ಜನಮನ್ನಣೆ ಗಳಿಸಿದೆ. ಇತ್ತೀಚೆಗೆ ಒಡಿಶಾಗೆ ಅಪ್ಪಳಿಸಿದ ಫನಿ ಚಂಡಮಾರುತದಿಂದ ನಿರಾಶ್ರಿತರಾದವರಿಗೆ ಉಚಿತ ಆಹಾರ ಒದಗಿಸಿತ್ತು. ಪುಲ್ವಾಮ ದಾಳಿಯ ನಂತರ ದೇಶಾದ್ಯಂತ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳ ಮೇಲೆ ಹಲ್ಲೆಗಳು ನಡೆದಾಗ ಅವರ ರಕ್ಷಣೆಗೆ ಧಾವಿಸಿತ್ತು. ಕೇರಳದ ನೆರೆಸಂತ್ರಸ್ತರಿಗೆ, ಶ್ರೀಲಂಕಾ ಮತ್ತು ನ್ಯೂಝಿಲ್ಯಾಂಡ್‌ನಲ್ಲಿ ನಡೆದ ಸ್ಫೋಟಗಳ ಸಂತ್ರಸ್ತರಿಗೂ ಖಾಲ್ಸಾ ಏಡ್ ನೆರವಿನ ಹಸ್ತ ಚಾಚಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News