ಫನಿ ಚಂಡಮಾರುತ: ಮತ್ತೆ 21 ಸಾವು ದೃಢಪಡಿಸಿದ ಒಡಿಶಾ ಸರ್ಕಾರ

Update: 2019-05-13 04:13 GMT

ಭುವನೇಶ್ವರ, ಮೇ 13: ಒಡಿಶಾ ಕರಾವಳಿಗೆ ಅಪ್ಪಳಿಸಿದ್ದ, ಇಪ್ಪತ್ತು ವರ್ಷಗಳಲ್ಲೇ ಭೀಕರ ಎನಿಸಿದ ಫನಿ ಚಂಡಮಾರುತದಿಂದ ಮತ್ತೆ 21 ಮಂದಿ ಮೃತಪಟ್ಟಿರುವುದನ್ನು ಸರ್ಕಾರ ದೃಢಪಡಿಸಿದ್ದು, ಮೃತಪಟ್ಟವರ ಸಂಖ್ಯೆ 43 ರಿಂದ 64ಕ್ಕೆ ಏರಿದೆ. ಪುರಿ ಜಿಲ್ಲೆಯೊಂದರಲ್ಲೇ 39 ಮಂದಿ ಜೀವ ಕಳೆದುಕೊಂಡಿರುವುದನ್ನು ವಿಶೇಷ ಪರಿಹಾರ ಆಯುಕ್ತರ ಪರಿಸ್ಥಿತಿ ವರದಿ ದೃಢಪಡಿಸಿದೆ. ಈ ಮೊದಲು ಪುರಿ ಜಿಲ್ಲೆಯಲ್ಲಿ 21 ಮಂದಿ ಜೀವ ಕಳೆದುಕೊಂಡಿರುವುದಾಗಿ ಸರ್ಕಾರ ಹೇಳಿತ್ತು.

ಖುರ್ದಾ ಜಿಲ್ಲೆಯಲ್ಲಿ ಮತ್ತೆ ಮೂವರು ಮೃತಪಟ್ಟಿದ್ದನ್ನು ಅಧಿಕಾರಿಗಳು ದೃಢಪಡಿಸಿದ್ದು, ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 9ಕ್ಕೆ ಏರಿದೆ. ಒಟ್ಟು 64 ಮಂದಿಯ ಪೈಕಿ 25 ಮಂದಿ ಮನೆಗಳ ಗೋಡೆ ಕುಸಿತದಿಂದ, 20 ಮಂದಿ ಮರಗಳು, ವಿದ್ಯುತ್ ಕಂಬ, ಹೋರ್ಡಿಂಗ್ ಬುಡಮೇಲಾಗುವ ವೇಳೆ ಸಿಲುಕಿ ಸತ್ತಿದ್ದಾರೆ. ಆರು ಮಂದಿ ಛಾವಣಿ ಕುಸಿತದಲ್ಲಿ ಸಮಾಧಿಯಾಗಿದ್ದಾರೆ. 13 ಸಾವುಗಳ ಬಗ್ಗೆ ಇನ್ನೂ ಕಾರಣ ದೃಢಪಡಿಸಬೇಕಾಗಿದೆ. ಇದರಿಂದಾಗಿ 1999ರ ಸೂಪರ್ ಚಂಡಮಾರುತದ ಬಳಿಕ ಇದು ಅತ್ಯಂತ ಭೀಕರ ಚಂಡಮಾರುತ ಎನಿಸಿದೆ. 1999ರಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು.

2018ರ ಅಕ್ಟೋಬರ್‌ನಲ್ಲಿ ತಿತ್ಲಿ ಚಂಡಮಾರುತಕ್ಕೆ 60 ಮಂದಿ ಬಲಿಯಾಗಿದ್ದರು. ಪೈಲಾನ್ ಚಂಡಮಾರುತಕ್ಕೆ 2013ರ ಅಕ್ಟೋಬರ್‌ನಲ್ಲಿ 44 ಮಂದಿ ಜೀವ ಕಳೆದುಕೊಂಡಿದ್ದರು. ಈ ಪೈಕಿ 21 ಮಂದಿ ಚಂಡಮಾರುತದಿಂದ ಹಾಗೂ 23 ಮಂದಿ ಪ್ರವಾಹದಿಂದ ಸಾವಿಗೀಡಾಗಿದ್ದರು. ಈ ಮಧ್ಯೆ ಫನಿಯಿಂದಾದ ಹಾನಿ ಅಂದಾಜಿಸಲು ಕೇಂದ್ರದ ಅಂತರ ಸಚಿವಾಲಯ ತಂಡ ಭುವನೇಶ್ವರ ತಲುಪಿದೆ. ಪುರಿ, ಕಟಕ್ ಹಾಗೂ ಖುರ್ದಾ ಜಿಲ್ಲೆಗಳಲ್ಲಿ ಹಾನಿಗೀಡಾದ ಪ್ರದೇಶಗಳಿಗೆ ಮುಂದಿನ ಮೂರು ದಿನಗಳ ಕಾಲ ಭೇಟಿ ನೀಡಿ ಪರಿಸ್ಥಿತಿ ಅಧ್ಯಯನ ಮಾಡಲಿದೆ.

ಚಂಡಮಾರುತದಿಂದ ಮನೆಗಳಿಗೆ ಹಾನಿಯಾಗಿದ್ದರೆ ಅಂಥ ಸಂತ್ರಸ್ತರಿಗೆ ಪಕ್ಕಾ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News