80ರ ದಶಕದಲ್ಲಿ ಇಮೇಲ್, ಡಿಜಿಟಲ್ ಕ್ಯಾಮರಾ ಬಳಸಿದ್ದೆ ಎಂದು ನಗೆಪಾಟಲಿಗೀಡಾದ ಮೋದಿ

Update: 2019-05-13 07:20 GMT

ಹೊಸದಿಲ್ಲಿ, ಮೇ 13: ಭಾರತದಲ್ಲಿ 1988ರಲ್ಲಿ ಡಿಜಿಟಲ್ ಕ್ಯಾಮರಾವನ್ನು ಬಳಸಿದ ಮೊದಲಿಗರಲ್ಲಿ ತಾನೊಬ್ಬನಾಗಿದ್ದೆ ಹಾಗೂ 1988ರಲ್ಲಿ ಇಮೇಲ್ ಬಳಕೆ ಮಾಡಿದ ಮೊದಲಿಗರಲ್ಲಿ ತಾನೊಬ್ಬನಾಗಿದ್ದೆ ಎಂದು ಪ್ರಧಾನಿ ನ್ಯೂಸ್ ನೇಷನ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿರುವ ವೀಡಿಯೋ ತುಣುಕು ಇದೀಗ ವೈರಲ್ ಆಗಿದೆ. ಹಲವರು ಪ್ರಧಾನಿಯ ಹೇಳಿಕೆಯನ್ನು ಪ್ರಶ್ನಿಸುತ್ತಿದ್ದಾರೆ. ತಾನು ಮೊದಲ ಬಾರಿ ಡಿಜಿಟಲ್ ಕ್ಯಾಮರಾ ಬಳಕೆ ಮಾಡಿದ್ದು ಹಿರಿಯ ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿಯವರ ಫೋಟೊ ಕ್ಲಿಕ್ಕಿಸಲು ಎಂದು ಮೋದಿ ಹೇಳಿದ್ದಾರೆ.

ಇದೀಗ ಹಲವಾರು ಟ್ವಿಟ್ಟರಿಗರ ಸಹಿತ ರಾಜಕಾರಣಿಗಳು, ಪತ್ರಕರ್ತರು ಹಾಗೂ ಅರ್ಥ ಶಾಸ್ತ್ರಜ್ಞರು ಪ್ರಧಾನಿಯ ಹೇಳಿಕೆಯನ್ನು ಪ್ರಶ್ನಿಸುತ್ತಿದ್ದಾರೆ.

ಪಾಶ್ಚಿಮಾತ್ಯ ದೇಶಗಳಲ್ಲೂ ಇಮೇಲ್ ಆರಂಭದಲ್ಲಿ ಕೆಲವೇ ಕೆಲವು ಜನರಿಗೆ ಮಾತ್ರ ಲಭ್ಯವಿತ್ತು ಎಂದು ಹೇಳಿರುವ ಅರ್ಥಶಾಸ್ತ್ರಜ್ಞೆ ರೂಪಾ ಸುಬ್ರಹ್ಮಣ್ಯ, “ಆದರೆ ಮೋದಿ ಅದು ಹೇಗೆ 1988ರಲ್ಲಿಯೇ ಇಮೇಲ್ ಅನ್ನು ಭಾರತದಲ್ಲಿ ಅದು ಕೂಡ ದೇಶದಲ್ಲಿ ಅದನ್ನು 1995ರಲ್ಲಿ ಪರಿಚಯಿಸುವ ಮೊದಲೇ ಬಳಸಿದ್ದಾರೆ ?'' ಎಂದು ಪ್ರಶ್ನಿಸಿದ್ದಾರೆ.

ಬಾಟಮ್‍ ಲೈನ್ಸ್ ಮ್ಯಾನ್ ಎಂಬ ಟ್ವಿಟರ್ ಹ್ಯಾಂಡಲ್ ಹೊಂದಿರುವವರೊಬ್ಬರಂತೂ, “ಈ ವ್ಯಕ್ತಿಯೊಬ್ಬ ನಂಬಲಸಾಧ್ಯ ಸುಳ್ಳುಗಾರ. 1988ರಲ್ಲಿ ಡಿಜಿಟಲ್ ಕ್ಯಾಮರಾ ಹಾಗೂ 1988ರಲ್ಲಿ ಮುಂಬೈಯಲ್ಲಿ ಇಮೇಲ್, ಈ ವ್ಯಕ್ತಿ ತಲೆಗೆ ಬಂದಿದ್ದನ್ನು ಹೇಳುತ್ತಾರೆ'' ಎಂದು ಟ್ವೀಟ್ ಮಾಡಿದ್ದಾರೆ.

ಪ್ರಧಾನಿಯ ಈ ಹೇಳಿಕೆ ‘ಭಾರತಕ್ಕೆ ಮುಜುಗರಕಾರಿ’ ಎಂದು ರಾಜಕೀಯ ವಿಶ್ಲೇಷಕ ಸಲ್ಮಾನ್ ಸೊಝ್ ಹೇಳಿದ್ದಾರೆ.

“ಅಕ್ಷರಶಃ ಏನನ್ನು ಬೇಕಾದರೂ ಹೇಳುವ ಪ್ರಧಾನಿಯನ್ನು ರಾಷ್ಟ್ರೀಯ ಭದ್ರತೆ ವಿಚಾರಗಳ ಕುರಿತಂತೆ ನಂಬುವುದು ಸಾಧ್ಯವಿಲ್ಲ,'' ಎಂದು ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್ ಒವೈಸಿ ಹೇಳಿದ್ದಾರೆ.

ವಿದ್ವಾಂಸ ಅಶೋಕ್ ಸ್ವೈನ್ ಪ್ರಧಾನಿಯ ವಿರುದ್ಧ ಕಿಡಿ ಕಾರುತ್ತಾ, ಮೋದಿ `ಗಂಭೀರ ಕಾಯಿಲೆಯಿಂದ' ಬಳಲುತ್ತಿದ್ದಾರೆ ಹಾಗೂ ಅವರಿಗೆ `ಸೂಕ್ತ ವೈದ್ಯಕೀಯ ಚಿಕಿತ್ಸೆ.' ಆಗತ್ಯವಿದೆ ಎಂದು ಹೇಳಿದ್ದಾರೆ.

"ಬಡವರಾಗಿದ್ದ ಮೋದೀ ಜಿ ಡಿಜಿಟಲ್ ಕ್ಯಾಮರಾ ಹೊಂದಿದ್ದರು ಹಾಗೂ 1987ರಲ್ಲಿ ಇಂಟರ್ನೆಟ್ ಬಳಕೆ ಮಾಡಿದ್ದರು'' ಎಂದು ಒಬ್ಬ ಟ್ವಿಟ್ಟರಿಗ ಅಣಕವಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News