×
Ad

ಪ್ರಧಾನಿಯ ‘ನ್ಯೂಸ್ ನೇಷನ್’ ಸಂದರ್ಶನದ ಪ್ರಶ್ನೆಗಳು ಪೂರ್ವನಿರ್ಧರಿತವಾಗಿತ್ತೇ?

Update: 2019-05-13 13:39 IST

ಹೊಸದಿಲ್ಲಿ, ಮೇ 13: ವಿವಾದ ಸೃಷ್ಟಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ‘ನ್ಯೂಸ್ ನೇಷನ್’ ಸಂದರ್ಶನದ ಪ್ರಶ್ನೆಗಳು ಪೂರ್ವ ನಿರ್ಧರಿತವಾಗಿತ್ತೇ ಎನ್ನುವ ಬಗ್ಗೆ ಸಂದರ್ಶನದ ವಿಡಿಯೋ ಕ್ಲಿಪ್ ಒಂದು ಚರ್ಚೆ ಹುಟ್ಟುಹಾಕಿದೆ. ಮೇ 11ರಂದು ಪ್ರಸಾರವಾದ ಈ ಸಂದರ್ಶನದಲ್ಲಿ ಪ್ರಧಾನಿ ಹಾಳೆಯೊಂದರಲ್ಲಿ ಅದಾಗಲೇ ಸಿದ್ಧವಾಗಿರುವ ಸ್ಕ್ರಿಪ್ಟ್ ಓದುತ್ತಿರುವುದು ವಿಡಿಯೋದಲ್ಲಿ ಅಚಾನಕ್ಕಾಗಿ ಕಾಣಿಸಿದೆ.

ಈ ಬಗ್ಗೆ newscentral24x7.com ವರದಿ ಮಾಡಿದೆ. ಸಾಹಿತ್ಯಿಕವಾಗಿ ಏನನ್ನಾದರೂ ಇತ್ತೀಚೆಗೆ ಬರೆದಿದ್ದೀರಾ ಎಂದು ಸಂದರ್ಶಕರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಧಾನಿ ತಾವು ಕವಿತೆಗಳನ್ನು ಬರೆಯುತ್ತಿರುವುದಾಗಿ ಹೇಳಿ ಕ್ಯಾಮರಾ ಹಿಂದಿನಿಂದ ಯಾರಿಗೋ ತಮ್ಮ ‘ಫೈಲ್’ ನೀಡುವಂತೆ ಹೇಳಿದ್ದು, ಅದನ್ನು ಅವರ ಕೈಗೆ ಯಾರೋ ತಂದಿತ್ತಿದ್ದೇ ತಡ ಅದೀಗ ಮೋದಿಗೆ ಸಮಸ್ಯೆಯಾಗಿ ಕಾಡಿದೆ.

ಕ್ಯಾಮರಾ ಮೋದಿ ಫೈಲ್ ನತ್ತ ಕಣ್ಣಾಡಿಸಿದ್ದು ಅದರಲ್ಲಿ ಪಿನ್ ಮಾಡಲ್ಪಟ್ಟ ಎ4 ಹಾಳೆಗಳಿದ್ದವು. ಅದರಲ್ಲಿ ಕವನವೊಂದರ ಕೆಲವು ಸಾಲುಗಳು, ಜತೆಗೆ ಪತ್ರಕರ್ತ ದೀಪಕ್ ಚೌರಾಸಿಯಾ ಅವರು ಕೇಳಿದ್ದ ಒಂದು ಪ್ರಶ್ನೆಯೂ ಇದ್ದುದು ಕಂಡು ಬಂತು.

ಪ್ರಧಾನಿಯ ಈ ಹಿಂದಿನ ಎಎನ್‍ಐನ, ಎಬಿಪಿ ನ್ಯೂಸ್ ಗೆ ನೀಡಿದ ಸಂದರ್ಶನಗಳೆಲ್ಲವೂ ಪೂರ್ವ ನಿರ್ಧರಿತ ಸ್ಕ್ರಿಪ್ಟ್ ಆಧರಿತ ಎಂದು ಟೀಕೆಗೊಳಗಾಗಿತ್ತಲ್ಲದೆ, ಸಂದರ್ಶಕರು ಪ್ರಧಾನಿಗೆ ಯಾವುದೇ ಕ್ಲಿಷ್ಟಕರ ಪ್ರಶ್ನೆಗಳನ್ನು ಕೇಳಿಲ್ಲ ಎಂಬ ಆರೋಪವೂ ಇತ್ತು.

ಪ್ರಧಾನಿಯ ನ್ಯೂಸ್ ನೇಷನ್ ಸಂದರ್ಶನದ  ಕುತೂಹಲಕಾರಿ ಅಂಶವನ್ನು ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಉಸ್ತುವಾರಿ ದಿವ್ಯಸ್ಪಂದನ ಕೂಡ ಟ್ವೀಟ್ ಮಾಡಿ “ಯಾವುದೇ ಪತ್ರಿಕಾಗೋಷ್ಠಿ ಅಥವಾ ರಾಹುಲ್ ಗಾಂಧಿ ಜತೆ ಚರ್ಚೆ ಏಕಿಲ್ಲ ಎಂದು ಈಗ ತಿಳಿಯುತ್ತದೆ”' ಎಂದು ಬರೆದಿದ್ದಾರೆ.

ಬಾಲಕೋಟ್ ದಾಳಿಯ ಸಂದರ್ಭ ಐಎಎಫ್ ಯುದ್ಧ ವಿಮಾನಗಳಿಗೆ ಮೋಡಗಳು ರಾಡಾರ್ ರಕ್ಷಣೆಯೊದಗಿಸುವುದೆಂದು  ತಾವು `ತಜ್ಞರಿಗೆ' ಸಲಹೆ ನೀಡಿದ್ದಾಗಿ ಪ್ರಧಾನಿ ಮೋದಿ ಸಂದರ್ಶನದಲ್ಲಿ ಹೇಳಿ ನಗೆಪಾಟಲಿಗೀಡಾಗಿದ್ದರೆಂಬುದನ್ನೂ ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News