ಎನ್ ಕೌಂಟರ್ ಖ್ಯಾತಿಯ ಆದಿತ್ಯನಾಥ್ ಗೆ ಚುನಾವಣೆ ಗೆಲ್ಲಲು ಕೊಲೆ ಆರೋಪಿ ಅತೀಖ್ ಬೇಕು!

Update: 2019-05-13 16:50 GMT

ಮೊಘಲರ ನೆನಪು ಉಳಿಸುವ ಯಾವುದೂ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ರಿಗೆ ಇಷ್ಟವಿಲ್ಲ ಎಂಬುದು ಈಗ ಎಲ್ಲರಿಗೂ ಗೊತ್ತಿದೆ. ಹಾಗಾಗಿಯೇ ಉತ್ತರ ಪ್ರದೇಶದ ಒಂದೊಂದೇ ಹೆಸರುಗಳು ಬದಲಾವಣೆಯಾಗುತ್ತಿವೆ. ಆದರೆ ತಾನು ಪ್ರಯಾಗರಾಜ್ ಎಂದು ಹೆಸರು ಬದಲಾಯಿಸಿದ ಅಲಹಾಬಾದ್ ನಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಇದೇ ಆದಿತ್ಯನಾಥ್ 'ಮೊಘಲ್ ಎ ಆಝಮ್' ಮೊರೆ ಹೋಗಿದ್ದಾರೆ.

ಈ 21ನೇ ಶತಮಾನದ 'ಮೊಘಲ್ ಎ ಆಝಮ್' ಬೇರಾರೂ ಎಲ್ಲ. ತನ್ನ ಮೇಲೆ ಕೊಲೆ, ಅಪಹರಣ ಸಹಿತ ನೂರಾರು ಗಂಭೀರ ಕ್ರಿಮಿನಲ್ ಕೇಸ್ ಗಳಿರುವ, ಸದ್ಯ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಅತೀಖ್ ಅಹ್ಮದ್ ! ಅಂದ ಹಾಗೆ ಈ ಆದಿತ್ಯನಾಥ್ ರ  ಆಪತ್ಬಾಂಧವನ ಇನ್ನೊಂದು ಅಡ್ಡ ಹೆಸರೇನು ಗೊತ್ತೇ ? ಆದಿತ್ಯನಾಥ್ ಕಾ ಲಾಡ್ಲಾ ( ಆದಿತ್ಯನಾಥ್ ರ ಮುದ್ದಿನ ಮಗ ) ಅಂತ!

ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ರ ಆಡಳಿತ ವೈಖರಿ ಹಾಗು ಕಳೆದೆರಡು ವರ್ಷಗಳ 'ಸಾಧನೆ' ಮುಂದಿಟ್ಟುಕೊಂಡು ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಂತೂ ಅವರಿಗೆ ಇದ್ದ ಹಾಗಿಲ್ಲ. ಸಾಲದ್ದಕ್ಕೆ ರಾಜ್ಯದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿ ಬೇರೆ ಮಾಡಿಕೊಂಡಿದ್ದಾರೆ. ಹಾಗಾಗಿ ಈ ಬಾರಿ ಹೇಗಾದರೂ ಸಾಕಷ್ಟು ಸ್ಥಾನಗಳನ್ನು ಗೆಲ್ಲುವ ಒತ್ತಡಕ್ಕೆ ಸಿಲುಕಿರುವ ಆದಿತ್ಯನಾಥ್ ಈಗ ಅಲಹಾಬಾದ್ ( ಈಗ ಪ್ರಯಾಗರಾಜ್ ) ನಲ್ಲಿ ಗೆಲ್ಲಲು ಅಲ್ಲಿನ ಕುಖ್ಯಾತ ಕ್ರಿಮಿನಲ್ ಅತೀಖ್ ನ ಬಾಹುಬಲದ ಮೊರೆ ಹೋಗಿದ್ದಾರೆ.

ಈ ಹಿಂದೆ ಅಲಹಾಬಾದ್ ಹೊರವಲಯದ ನೈನಿ ಜೈಲಿನಿಂದ ದಿಯೋರಿಯಾ ಜೈಲಿಗೆ ವರ್ಗಾವಣೆಯಾಗಿದ್ದ ಅತೀಖ್ ಜೈಲಿನಲ್ಲಿದ್ದೇ ಉದ್ಯಮಿಯೊಬ್ಬರನ್ನು ಅಪಹರಣ ಮಾಡಿಸಿ ಆತನನ್ನು ಜೈಲಿಗೆ ತಂದು ಆತನ ಆಸ್ತಿ ಪತ್ರಗಳಿಗೆ ಬಲವಂತದಿಂದ ಸಹಿ ಮಾಡಿಸಿದ್ದ ಪ್ರಚಂಡ ಕ್ರಿಮಿನಲ್ !. ಅದಕ್ಕಾಗಿ ಆದಿತ್ಯನಾಥ್ ಅವರೇ ಅತೀಖ್ ನನ್ನು ಬರೇಲಿ ಜೈಲಿಗೆ ವರ್ಗಾವಣೆ ಮಾಡಿದ್ದರು. ಆದರೆ ಚುನಾವಣೆಯ ಕೃಪೆಯಿಂದ ಅತೀಖ್ ನನ್ನು ಮತ್ತೆ ಆತನ ಇಷ್ಟದ ನೈನಿ ಜೈಲಿಗೆ ವರ್ಗಾವಣೆ ಮಾಡಿದ್ದಾರೆ ಎನ್ಕೌಂಟರ್ ಖ್ಯಾತಿಯ ಆದಿತ್ಯನಾಥ್ ! ಕಾರಣ ? ಅವರಿಗೆ ಅತೀಖ್ ಮೂಲಕ ಅಲಹಾಬಾದ್ ನ ಮುಸ್ಲಿಮರ ಮತ ಸೆಳೆದು ಅಥವಾ ವಿಭಜಿಸಿ ಅಲ್ಲಿ ತನ್ನ ಪಕ್ಷದ ಅಭ್ಯರ್ಥಿ ರೀಟಾ ಬಹುಗುಣ ಜೋಶಿಯವರನ್ನು ಗೆಲ್ಲಿಸಬೇಕು, ಅದಕ್ಕೆ !

ಈ ಹಿಂದೆ ಎಸ್ಪಿ ಹಾಗು ಕಾಂಗ್ರೆಸ್ ಪಕ್ಷದಲ್ಲಿದ್ದ ಪಕ್ಷಾಂತರ ಚತುರೆ ಸದ್ಯ ಆದಿತ್ಯನಾಥ್ ಸರಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ. ಅಲಹಾಬಾದ್ ಕ್ಷೇತ್ರದಿಂದ ಈಗ ಬಿಜೆಪಿ ಅಭ್ಯರ್ಥಿ. ಅಲ್ಲಿ ಸ್ಥಳೀಯ ಬಿಜೆಪಿ, ಆರೆಸ್ಸೆಸ್ ನಾಯಕರಿಗೇ ರೀಟಾ ಸ್ಪರ್ಧೆ ಬಗ್ಗೆ ಒಲವಿಲ್ಲ. ಪಕ್ಷದ ಪ್ರಭಾವಿ ನಾಯಕರು ಹಾಗು ಟಿಕೆಟ್ ವಂಚಿತ ಒಂದಿಬ್ಬರು ಸಚಿವರು ರೀಟಾ ವಿರುದ್ಧ ಕೆಲಸ ಮಾಡುವ ಕುರಿತು ಗುಸುಗುಸು ಇದೆ. ಜೊತೆಗೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ ಶುಕ್ಲ ಬಿಜೆಪಿ ನಾಯಕ ಹಾಗು ಈ ಹಿಂದೆ ಇಲ್ಲಿನ ಸಂಸದರಾಗಿದ್ದ ಮುರಳಿ ಮನೋಹರ್ ಜೋಶಿ ಅವರ ಶಿಷ್ಯ. ಹಾಗಾಗಿ ಈ ಬಾರಿ ಟಿಕೆಟ್ ವಂಚಿತ ಜೋಶಿ ತನ್ನ ಬೆಂಬಲಿಗರಿಗೆ ಕಾಂಗ್ರೆಸ್ ಗೆ ಮತ ಹಾಕಲು ಹೇಳಿದ್ದಾರೆ ಎಂಬ ಸುದ್ದಿಯೂ ಇದೆ. ಹಾಗಾಗಿ ಈ ಹಿಂದಿನ ತನ್ನ ಸೆಕ್ಯುಲರ್ ಇಮೇಜ್ ಬಳಸಿಕೊಂಡು ಒಂದಷ್ಟು ಮುಸ್ಲಿಂ ಮತ ಸೆಳೆಯಲು ರೀಟಾಗೆ ಈಗ ತುರ್ತಾಗಿ ಅತೀಖ್ ಸಹಾಯ ಬೇಕು.

ಅದಕ್ಕೆ ಆದಿತ್ಯನಾಥ್ ತಕ್ಷಣ ಕಾರ್ಯಪ್ರವೃತ್ತರಾಗಿ ಅತೀಖ್ ಜೊತೆ ಡೀಲ್ ಕುದುರಿಸಿದ್ದಾರೆ. ಆತನನ್ನು ಅಲಹಾಬಾದ್ ಹೊರವಲಯದಲ್ಲಿರುವ ನೈನಿ ಜೈಲಿಗೆ ತಂದಿದ್ದಾರೆ. ಈಗ ಅತೀಖ್ ಪತ್ನಿ ಹಾಗು ಆತನ ಬಂಟರು ಊರಿಡೀ ಸುತ್ತಿ ಮುಸ್ಲಿಮರಲ್ಲಿ ರೀಟಾಗೆ ಮತ ಹಾಕುವಂತೆ ಹೇಳುತ್ತಿದ್ದಾರೆ. ಅತೀಖ್ ಜೊತೆ ಗುರುತಿಸಿಕೊಳ್ಳಲು ಇಷ್ಟವಿಲ್ಲದ ಸ್ಥಳೀಯ ಬಿಜೆಪಿ ಹಾಗು ಆರೆಸ್ಸೆಸ್ ಮುಖಂಡರಿಗೆ ಪಕ್ಷಕ್ಕಾಗಿ ಆತನ ತಂಡದ ಜೊತೆ ಸಮನ್ವಯ ಕಾಪಾಡಿಕೊಳ್ಳುವ ಅನಿವಾರ್ಯತೆ.

ಕ್ರಿಮಿನಲ್ ಗಳನ್ನು ಸಹಿಸುವುದಿಲ್ಲವೆಂದು ಆರ್ಭಟಿಸುತ್ತಿದ್ದ ಆದಿತ್ಯನಾಥ್ ಹೀಗೆ ಮಾಡುತ್ತಾರೆ ಎಂದು ನಾವೆಂದೂ ಅಂದುಕೊಂಡಿರಲಿಲ್ಲ ಎಂದು ಆರೆಸ್ಸೆಸ್ ಹಾಗು ಬಿಜೆಪಿ ಸ್ಥಳೀಯ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಇನ್ನೊಂದು ವಿಶೇಷ ಎಂದರೆ ವಾರಾಣಸಿಯಲ್ಲಿ ಇದೇ ಅತೀಖ್ ಅಹ್ಮದ್ ಪಕ್ಷೇತರ ಅಭ್ಯರ್ಥಿ!. ಅಲ್ಲಿಯೂ ಒಂದಷ್ಟು ಮುಸ್ಲಿಮರ ಮತಗಳನ್ನು ವಿಭಜಿಸಿ ಪ್ರಧಾನಿ ಮೋದಿಯವರ ಜಯದ ಅಂತರವನ್ನು ಕಾಪಾಡಿಕೊಳ್ಳುವ ಆದಿತ್ಯನಾಥ್ ಅವರ ಲೆಕ್ಕಾಚಾರ  ಅತೀಖ್ ಸ್ಪರ್ಧೆಯ ಹಿಂದಿದೆ ಎಂದು ಹೇಳಲಾಗುತ್ತಿದೆ.

ಕೃಪೆ: telegraphindia.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News