ರಾಜಸ್ಥಾನದ ಪಠ್ಯಪುಸ್ತಕಗಳಲ್ಲಿ ಇನ್ನು ಮುಂದೆ ಸಾವರ್ಕರ್ ‘ವೀರ ಕ್ರಾಂತಿಕಾರಿ'ಯಲ್ಲ

Update: 2019-05-14 12:15 GMT

ಜೈಪುರ್, ಮೇ 14: ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಆಡಳಿತಾವಧಿಯಲ್ಲಿ ರಾಜಸ್ಥಾನ ಪಠ್ಯಪುಸ್ತಕ ಮಂಡಳಿಯು ಪಠ್ಯಪುಸ್ತಕಗಳಲ್ಲಿ ಮಾಡಿದ್ದ ಕೆಲ ಮಾರ್ಪಾಟುಗಳನ್ನು ವಾಪಸ್ ಪಡೆಯಲು ಈಗಿನ ಕಾಂಗ್ರೆಸ್ ಸರಕಾರ ನಿರ್ಧರಿಸಿದೆ. ಅದರಂತೆ  ಆರೆಸ್ಸೆಸ್ ನಾಯಕ ‘ವಿನಾಯಕ್ ಸಾವರ್ಕರ್ ವೀರ ಕ್ರಾಂತಿಕಾರಿ' ಎಂಬ ಉಲ್ಲೇಖವನ್ನು ತೆಗೆದು ಸಾವರ್ಕರ್ ಬ್ರಿಟಿಷರಿಗೆ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯ ಮಾಹಿತಿ ನೀಡಲಾಗುವುದು.

ಹತ್ತನೇ ತರಗತಿಯ ಭಾರತದ ಸ್ವಾತಂತ್ರ್ಯ ಸಂಗ್ರಾಮ ಅಧ್ಯಾಯದಲ್ಲಿ ಸಾವರ್ಕರ್ ಕುರಿತ ಮಾಹಿತಿಯಿದೆ. ವಸುಂಧರಾ ರಾಜೆ ಆಡಳಿತಾವಧಿಯಲ್ಲಿ ಪಠ್ಯದಲ್ಲಿ ಮಾರ್ಪಾಡು ಮಾಡಿ, “ಸಾವರ್ಕರ್ ಒಬ್ಬ ವೀರ ಕ್ರಾಂತಿಕಾರಿಯಾಗಿದ್ದರು ಹಾಗೂ ಎರಡು ಜೀವಾವಧಿ ಶಿಕ್ಷೆಗೆ ಒಳಗಾಗಿದ್ದರು. ವಿಭಜನೆ ತಪ್ಪಿಸಲು ಅವಿರತ ಶ್ರಮ ಪಟ್ಟಿದ್ದರು'' ಎಂದು ಬಣ್ಣಿಸಿ ನೆಹರೂ ಅವರನ್ನು ಕಡೆಗಣಿಸಲಾಗಿತ್ತು.

ಮಹಾತ್ಮ ಗಾಂಧಿ ಹತ್ಯೆ ಹಾಗೂ 2002ರ ಗುಜರಾತ್ ಹತ್ಯಾಕಾಂಡದ ಬಗ್ಗೆಯೂ ಪಠ್ಯಪುಸ್ತಕಗಳಲ್ಲಿ ಉಲ್ಲೇಖವಿರಲಿಲ್ಲ. ಮೋದಿ ಸರಕಾರದ ಅಮಾನ್ಯೀಕರಣ ನೀತಿ, ಸರ್ಜಿಕಲ್ ಸ್ಟ್ರೈಕ್ ಗಳ ಬಗ್ಗೆಯೂ ಪಠ್ಯಪುಸ್ತಕಗಳಲ್ಲಿ ಉಲ್ಲೇಖವಿತ್ತಲ್ಲದೆ ಅವುಗಳನ್ನು ಐತಿಹಾಸಿಕ ಎಂದೂ ವರ್ಣಿಸಲಾಗಿತ್ತು.

ಕಳೆದ ವರ್ಷದ ಡಿಸೆಂಬರ್ ನಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಕಾಂಗ್ರೆಸ್ ಸರಕಾರ ಪಠ್ಯಪುಸ್ತಕ ಪುನರ್ ಪರಿಶೀಲನಾ ಸಮಿತಿಯನ್ನು ರಚಿಸಿತ್ತು. ಇದೀಗ ಈ ಸಮಿತಿ ಸಾವರ್ಕರ್ ಕುರಿತಾದ ಮಾಹಿತಿಗಳನ್ನು ಪರಿಷ್ಕರಿಸುವಂತೆ ಹೇಳಿದೆ.

 ಈ ಕುರಿತಂತೆ ಸೋಮವಾರ ಮಾಹಿತಿ ನೀಡಿದ ರಾಜ್ಯ ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೊತಸರ, ಹಿಂದಿನ ಸರಕಾರ ಶಿಕ್ಷಣ ಕ್ಷೇತ್ರವನ್ನು ಆರೆಸ್ಸೆಸ್ ಪ್ರಯೋಗಶಾಲೆಯನ್ನಾಗಿಸಿತ್ತು ಹಾಗೂ ಸಾವರ್ಕರ್, ದೀನ್ ದಯಾಳ್ ಉಪಾಧ್ಯಾಯ ಅವರಂತಹವರನ್ನು ವೈಭವೀಕರಿಸಿತ್ತು ಎಂದು ಆರೋಪಿಸಿದರು.

ಆದರೆ ಈಗಿನ ಸರಕಾರದ ಕ್ರಮ ಹಿಂದುತ್ವ ವಿರೋಧಿ ಎಂದು ಮಾಜಿ ಶಿಕ್ಷಣ ಸಚಿವ ವಸುದೇವ್ ದೇವ್ನಾನಿ ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News