‘ನೀಚ ವ್ಯಕ್ತಿ’ ಹೇಳಿಕೆ ಭವಿಷ್ಯಸೂಚಕವಾಗಿತ್ತು: ಮಣಿಶಂಕರ್ ಅಯ್ಯರ್

Update: 2019-05-14 17:20 GMT

ಹೊಸದಿಲ್ಲಿ,ಮೇ.14: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ತಾನು 2017ರ ಡಿಸೆಂಬರ್‌ನಲ್ಲಿ ನೀಡಿದ ‘ನೀಚ ರೀತಿಯ ವ್ಯಕ್ತಿ’ ಹೇಳಿಕೆಯು ಭವಿಷ್ಯಸೂಚಕವಾಗಿತ್ತು ಎಂದು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಸೋಮವಾರ ತಿಳಿಸಿದ್ದಾರೆ.

2017ರ ಗುಜರಾತ್ ವಿಧಾನ ಸಭೆ ಚುನಾವಣೆಯ ಸಂದರ್ಭದಲ್ಲಿ ನೀಡಿದ ಈ ಹೇಳಿಕೆಯ ಪರಿಣಾಮವಾಗಿ ಕಾಂಗ್ರೆಸ್ ಅಯ್ಯರ್ ಅವರನ್ನು ಸುಮಾರು ಎಂಟು ತಿಂಗಳ ಕಾಲ ಪಕ್ಷದಿಂದ ಅಮಾನತುಗೊಳಿಸಿತ್ತು. “ನಾನು ಮೋದಿಯನ್ನು ನೀಚ ಮಟ್ಟದ ವ್ಯಕ್ತಿ ಎಂದು ಕರೆದಿದ್ದೆನೇ ಹೊರತು ನೀಚ ಜಾತಿಯ ವ್ಯಕ್ತಿ ಎಂದಲ್ಲ. ನಾನು ಹಿಂದಿ ಭಾಷಿಕನಲ್ಲದ ಕಾರಣ ಹಿಂದಿಯಲ್ಲಿ ಮಾತನಾಡುವಾಗಲೂ ಇಂಗ್ಲಿಷ್‌ನಲ್ಲಿ ಯೋಚಿಸುತ್ತೇನೆ. ಹಾಗಾಗಿ ನೀಚ ಎಂಬ ಶಬ್ದಕ್ಕೆ ಬೇರೆ ಅರ್ಥವಿದ್ದರೆ ಅದಕ್ಕೆ ನಾನು ಕ್ಷಮೆ ಯಾಚಿಸುತ್ತೇನೆ” ಎಂದು ಅಯ್ಯರ್ ಸ್ಪಷ್ಟಪಡಿಸಿದ್ದರು.

ಆದರೂ ಅವರ ಹೇಳಿಕೆಗೆ ಎಲ್ಲೆಡೆಯಿಂದ ಆಕ್ಷೇಪ ವ್ಯಕ್ತವಾಗಿತ್ತು. ಸೋಮವಾರದಂದು ರೈಸಿಂಗ್ ಕಾಶ್ಮೀರ್ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ, ಮೇ 23ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಪ್ರಧಾನಿ ಮೋದಿ ತನ್ನ ಅಧಿಕಾರ ಕಳೆದುಕೊಳ್ಳುತ್ತಾರೆ. ಡಿಸೆಂಬರ್ 7,2017ರಲ್ಲಿ ನಾನು ಆಡಿದ ಮಾತುಗಳು ನೆನಪಿದೆಯೇ? ಅದು ಭವಿಷ್ಯಸೂಚಕವಾಗಿತ್ತಲ್ಲವೇ? ಎಂದು ಅಯ್ಯರ್ ತಮ್ಮ ವಿವಾದಿತ ಹೇಳಿಕೆಯನ್ನು ಸಮರ್ಥಿಸಿದ್ದಾರೆ. ನಮ್ಮ ಸೇನೆ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ ಹುತಾತ್ಮರ ಬಲಿದಾನದ ಲಾಭವನ್ನು ಕೊಳಕು ಚುನಾವಣಾ ಅಭಿಯಾನದಲ್ಲಿ ಪಡೆಯಲು ಮುಂದಾಗಿರುವ ಮೋದಿಯನ್ನು ರಾಷ್ಟ್ರವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವ ವ್ಯಕ್ತಿ ಎಂದು ಘೋಷಿಸಬೇಕು ಎಂದು ಅಯ್ಯರ್ ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News