ಎಲ್‌ಟಿಟಿಇ ಮೇಲಿನ ನಿಷೇಧ ಐದು ವರ್ಷ ವಿಸ್ತರಣೆ: ಕೇಂದ್ರ

Update: 2019-05-14 17:24 GMT

ಹೊಸದಿಲ್ಲಿ,ಮೇ.14: ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಬೆದರಿಕೆ ಒಡ್ಡುತ್ತಿರುವ ಕಾರಣ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಮ್ (ಎಲ್‌ಟಿಟಿಇ) ಮೇಲಿನ ನಿಷೇಧವನ್ನು ಐದು ವರ್ಷಗಳ ಕಾಲ ವಿಸ್ತರಿಸಿರುವುದಾಗಿ ಕೇಂದ್ರ ಸರಕಾರ ಮಂಗಳವಾರ ತಿಳಿಸಿದೆ.

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ, 1967ರ ಅಡಿಯಲ್ಲಿ ಎಲ್‌ಟಿಟಿಇಯನ್ನು ನಿಷೇಧಿಸುವ 2014ರ ಅಧಿಸೂಚನೆಯನ್ನು ಸರಕಾರ ನವೀಕರಿಸಿದೆ ಎಂದು ಮೇ 14, 2019ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಎಲ್‌ಟಿಟಿಇ ಕಠಿಣ ಭಾರತ ವಿರೋಧಿ ನಿಲುವು ಮತ್ತು ಭಾರತೀಯರ ಭದ್ರತೆಗೆ ಬೆದರಿಕೆ ಒಡ್ಡುವುದನ್ನು ಮುಂದುವರಿಸಿದೆ ಎಂದು ಸಚಿವಾಲಯ ಈ ಅಧಿಸೂಚನೆಯಲ್ಲಿ ತಿಳಿಸಿದೆ.

ಶ್ರೀಲಂಕಾ ಮೂಲದ ಎಲ್‌ಟಿಟಿಇಗೆ ಭಾರತದಲ್ಲೂ ಬೆಂಬಲಿಗರಿದ್ದಾರೆ. ತಮಿಳರಿಗೆ ಪ್ರತ್ಯೇಕ ರಾಷ್ಟ್ರ ರಚಿಸುವ ಉದ್ದೇಶವನ್ನು ಹೊಂದಿರುವ ಈ ಸಂಘಟನೆ ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಬೆದರಿಕೆಯೊಡ್ಡುತ್ತದೆ. ಇದು ಕಾನೂನುಬಾಹಿರ ಚಟುವಟಿಕೆಗಳ ವ್ಯಾಪ್ತಿಯಲ್ಲಿ ಬೀಳುತ್ತದೆ. ಹಾಗಾಗಿ ಎಲ್‌ಟಿಟಿಇ ಮೇಲಿನ ನಿಷೇಧವನ್ನು ವಿಸ್ತರಿಸಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ವಿ.ಪ್ರಭಾಕರನ್ ಎಂಬಾತ 1976ರಲ್ಲಿ ಶ್ರೀಲಂಕಾದಲ್ಲಿ ತಮಿಳರ ಸ್ವಾತಂತ್ರಕ್ಕಾಗಿ ಹೋರಾಡುವ ಉದ್ದೇಶದಿಂದ ಎಲ್‌ಟಿಟಿಇ ಸ್ಥಾಪಿಸಿದ. 25 ವರ್ಷಗಳ ಸುದೀರ್ಘ ಯುದ್ದದ ನಂತರ ಅಂತಿಮವಾಗಿ ತಮಿಳು ಪ್ರತ್ಯೇಕತಾವಾದಿ ಗುಂಪುಗಳನ್ನು ಸೋಲಿಸಿದ ನಂತರ 2009ರಲ್ಲಿ ಶ್ರೀಲಂಕ ಸೇನೆ ಪ್ರಭಾಕರನ್‌ನನ್ನು ಹತ್ಯೆ ಮಾಡಿತ್ತು. ಪ್ರಭಾಕರನ್ 1991ರಲ್ಲಿ ಭಾರತದ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೆ ಆದೇಶ ನೀಡಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News