ಮೋದಿ ಚಂಡೀಗಡ ರ‍್ಯಾಲಿಗೂ ಮುನ್ನ ಪದವೀಧರ ವೇಷಧಾರಿ ಪಕೋಡ ಮಾರಾಟಗಾರರ ಬಂಧನ!

Update: 2019-05-14 18:13 GMT

ಚಂಡೀಗಡ,ಮೇ.14: ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರ ಚಂಡೀಗಡದಲ್ಲಿ ನಡೆದ  ರ‍್ಯಾಲಿಗೂ ಮುನ್ನ ಪದವೀಧರರು ಕಾಲೇಜು ಘಟಿಕೋತ್ಸವಗಳಲ್ಲಿ ತೊಡುವಂತಹ ಬಟ್ಟೆಯನ್ನು ಧರಿಸಿ ಪಕೋಡಾ ಮಾರುತ್ತ ಪ್ರತಿಭಟನೆ ನಡೆಸುತ್ತಿದ್ದ ಜನರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಪ್ರತಿಭಟನಾ ನಿರತರು ಮೋದಿ ಹೆಸರಲ್ಲಿ ಪಕೋಡಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ ಪೊಲೀಸರು ಸ್ಥಳಕ್ಕಾಗಮಿಸಿ ಅವುಗಳನ್ನು ಕಿತ್ತು ಕೊಂಡೊಯ್ದ ಪರಿಣಾಮ ಹೆಚ್ಚು ಪಕೋಡಗಳನ್ನು ಮಾರಾಟ ಮಾಡಲು ಸಾಧ್ಯವಾಗಿಲ್ಲ. ಕಳೆದ ವರ್ಷ ನಿರುದ್ಯೋಗ ಸಮಸ್ಯೆಯ ಬಗ್ಗೆ ಪ್ರಧಾನಿ ನೀಡಿದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಮಂಗಳವಾರ ಪ್ರತಿಭಟನೆ ನಡೆಸಲಾಗಿದೆ. ಓರ್ವ ವ್ಯಕ್ತಿ ಪಕೋಡ ಮಾರಿ ದಿನದ ಕೊನೆಯಲ್ಲಿ 200ರೂ. ದುಡಿದರೆ ಅದನ್ನು ಉದ್ಯೋಗ ಎಂದು ಪರಿಗಣಿಸಲಾಗುತ್ತದೆಯೇ ಇಲ್ಲವೇ? ಎಂದು ಮೋದಿ ಪ್ರಶ್ನಿಸಿದರು. ಪ್ರತಿವರ್ಷ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ 2014 ಲೋಕಸಭಾ ಚುನಾವಣೆಗೂ ಮುನ್ನ ಮೋದಿ ನೀಡಿದ ಭರವಸೆಯಲ್ಲಿ ವಿಫಲವಾಗಿರುವುದನ್ನು ಉಲ್ಲೇಖಿಸಿದಾಗ ಅವರು ಈ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News