ಮುಸ್ಲಿಮ್ ವಿರೋಧಿ ಹಿಂಸಾಚಾರ: ಓರ್ವ ಸಾವು

Update: 2019-05-15 09:21 GMT

ಕೊಲಂಬೊ, ಮೇ 14: ಶ್ರೀಲಂಕಾದಲ್ಲಿ ಸೋಮವಾರ ರಾತ್ರಿ ನಡೆದ ಮುಸ್ಲಿಮ್ ವಿರೋಧಿ ಗಲಭೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.

ರಾಷ್ಟ್ರವ್ಯಾಪಿ ಕರ್ಫ್ಯೂ ವಿಧಿಸಿರುವ ಹೊರತಾಗಿಯೂ ಉದ್ರಿಕ್ತ ಜನರ ಗುಂಪುಗಳು ದಾಂಧಲೆ ನಡೆಸಿದ್ದು, 45 ವರ್ಷದ ವ್ಯಕ್ತಿಯೊಬ್ಬನನ್ನು ಕೊಂದಿವೆ.

ರಾಜಧಾನಿ ಕೊಲಂಬೊದ ಉತ್ತರಕ್ಕಿರುವ ಮೂರು ಜಿಲ್ಲೆಗಳಿಗೆ ಕೋಮುಗಲಭೆ ವ್ಯಾಪಿಸಿದೆ.

ಪುಟ್ಟಲಮ್ ಜಿಲ್ಲೆಯಲ್ಲಿ ರವಿವಾರ ಮುಸ್ಲಿಮ್ ವಿರೋಧಿ ಗಲಭೆ ಆರಂಭಗೊಂಡಿದೆ. ಅಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದ ಬಳಿಕ ಆ ವ್ಯಕ್ತಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

‘‘ಈ ವ್ಯಕ್ತಿಯ ಬಡಗಿ ಕುಲುಮೆಯಲ್ಲಿ ದುಷ್ಕರ್ಮಿಗಳು ಅವರಿಗೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದರು. ಗಲಭೆಯಿಂದಾಗಿ ನಡೆದ ಮೊದಲ ಸಾವು ಇದಾಗಿದೆ’’ ಎಂದು ಅವರು ನುಡಿದರು.

ಅಸ್ಥಿರತೆ ತಡೆಯಲು ಕರ್ಫ್ಯೂ: ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ವಿಕ್ರಮೆಸಿಂಘೆ ಭಾಷಣ

ಅಪರಿಚಿತ ಗುಂಪುಗಳು ಕೋಮು ಹಿಂಸಾಚಾರ ನಡೆಸುವ ಮೂಲಕ ದೇಶವನ್ನು ಅಸ್ಥಿರಗೊಳಿಸುವುದನ್ನು ತಡೆಯುವುದಕ್ಕಾಗಿ ಕರ್ಫ್ಯೂ ವಿಧಿಸಲಾಗಿದೆ ಎಂದು ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮೆಸಿಂಘೆ ಹೇಳಿದ್ದಾರೆ.

‘‘ನಾತ್-ವೆಸ್ಟರ್ನ್ ಪ್ರಾಂತದ ಹಲವು ಸ್ಥಳಗಳಲ್ಲಿ ಈ ಗುಂಪುಗಳು ಸಮಸ್ಯೆಗಳನ್ನು ಸೃಷ್ಟಿಸಿವೆ ಹಾಗೂ ಸೊತ್ತುಗಳಿಗೆ ಹಾನಿ ಮಾಡಿವೆ’’ ಎಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಟೆಲಿವಿಶನ್ ಭಾಷಣದಲ್ಲಿ ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News