ಬಿಜೆಪಿ ಗೂಂಡಾಗಳಿಂದ ವಿದ್ಯಾಸಾಗರ್ ಪ್ರತಿಮೆ ಧ್ವಂಸ: ಟಿಎಂಸಿ ಆರೋಪ

Update: 2019-05-15 16:48 GMT

ಹೊಸದಿಲ್ಲಿ, ಮೇ 15: ಕೋಲ್ಕೊತ್ತಾದಲ್ಲಿ ಹಿಂಸಾಚಾರದ ಸಂದರ್ಭ ಸಾಮಾಜಿಕ ಸುಧಾರಕ ಈಶ್ವರ ಚಂದ್ರ ವಿದ್ಯಾಸಾಗರರ ಪ್ರತಿಮೆ ಧ್ವಂಸ ಮಾಡಿದ ಕುರಿತಂತೆ ಬಿಜೆಪಿಯ ವಿರುದ್ಧದ ದಾಳಿಯನ್ನು ಬುಧವಾರ ತೀವ್ರಗೊಳಿಸಿರುವ ತೃಣಮೂಲ ಕಾಂಗ್ರೆಸ್, ಪ್ರತಿಮೆಯನ್ನು ಬಿಜೆಪಿಯ ಗೂಂಡಾಗಳು ಧ್ವಂಸ ಮಾಡಿದ್ದಾರೆ ಎಂಬುದನ್ನು ಪ್ರತಿಪಾದಿಸುವ ವೀಡಿಯೊ ಬಿಡುಗಡೆ ಮಾಡಿದೆ.

ಈ ಘಟನೆ ಕುರಿತು ಡೆರಿಕ್ ಒಬ್ರಿಯಾನ್, ಸುಖ್‌ದೇವ್ ಶೇಖರ್ ರಾಯ್, ಮನೀಶ್ ಗುಪ್ತಾ, ನದೀಮುಲ್ ಹಕ್ ಅವರನ್ನು ಒಳಗೊಂಡ ತೃಣಮೂಲ ಕಾಂಗ್ರೆಸ್‌ನ ಸಂಸದೀಯ ತಂಡ ಚುನಾವಣಾ ಆಯೋಗವನ್ನು ಭೇಟಿಯಾಗಿ ತಮ್ಮ ಪ್ರತಿಪಾದನೆ ಬೆಂಬಲಿಸುವ ಪುರಾವೆಗಳನ್ನು ನೀಡಿತು.

 ಈ ಹಿಂದೆ ಇಲ್ಲಿ ಪತ್ರಿಕಾಗೋಷ್ಠಿ ನಡೆಸಿದ ತೃಣಮೂಲ ಕಾಂಗ್ರೆಸ್ ನಾಯಕ ಡೆರಿಕ್ ಒಬ್ರಿಯಾನ್, ಇದನ್ನು ಬಿಜೆಪಿ ನಡೆಸಿದೆ ಎಂಬುದನ್ನು ಮಾತ್ರ ಈ ವೀಡಿಯೊ ಸ್ಪಷ್ಟಪಡಿಸುತ್ತಿಲ್ಲ, ಬದಲಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಂಚಕ ಎಂಬುದನ್ನು ಕೂಡ ಸ್ಪಷ್ಟಪಡಿಸಿದೆ ಎಂದಿದ್ದರು.

ಪಶ್ಚಿಮಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ ಹಿಂಸಾಚಾರದಲ್ಲಿ ತೊಡಗಿಕೊಂಡಿದೆ ಹಾಗೂ ಚುನಾವಣಾ ಆಯೋಗ ಮೂಕ ಪ್ರೇಕ್ಷಕನಾಗಿದೆ ಎಂದು ಅಮಿತ್ ಶಾ ಆರೋಪಿಸಿದ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ ಈ ಪ್ರತಿಕ್ರಿಯೆ ವ್ಯಕ್ತಪಡಿಸಿದೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ಒಂದು ವೀಡಿಯೊದಲ್ಲಿ, ಪುರುಷರ ಗುಂಪೊಂದು ವಿದ್ಯಾಸಾಗರ್ ಕಾಲೇಜಿನ ಗೇಟನ್ನು ಮುರಿಯುವುದು ಹಾಗೂ ಕಾಲೇಜಿನ ಗೋಡೆ ಹಾರಿ ಕ್ಯಾಂಪಸ್ ಪ್ರವೇಶಿಸುತ್ತಿರುವುದು ಕಂಡು ಬಂದಿದೆ.

 ‘‘ಗೇಟ್‌ನ ಕೀ ಯಾರ ಬಳಿ ಇದೆ ? ಎಂದು ಎಂದು ಪ್ರಶ್ನಿಸುವುದು ಬಾಲಿಷ ವಾದ. ಪ್ರತಿಮೆಯನ್ನು ಯಾರು ಧ್ವಂಸಗೊಳಿಸಿದರು ಎಂಬುದನ್ನು ಸಂದೇಹಕ್ಕೆ ಆಸ್ಪದ ಇಲ್ಲದೆ ವೀಡಿಯೊ ದೃಢಪಡಿಸಿದೆ. ಪಕ್ಷದಲ್ಲಿ ಇದನ್ನು ಬೆಂಬಲಿಸುವ 44 ವೀಡಿಯೊಗಳು ಇವೆ’’ ಎಂದು ಒಬ್ರಿಯಾನ್ ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್ ಪಕ್ಷ ಹಾಗೂ ಪೊಲೀಸರೊಂದಿಗೆ ಹೋರಾಡಲು ಅಮಿತ್ ಶಾ ಅವರ ರೋಡ್ ಶೋಗೆ ರಾಡ್ ಹಾಗೂ ಶಸ್ತ್ರಾಸ್ತ್ರಗಳೊಂದಿಗೆ ಬನ್ನಿ ಎಂದು ಬಿಜೆಪಿ ಬೆಂಬಲಿಗರು ಜನರನ್ನು ಆಗ್ರಹಿಸಿದ್ದಾರೆ ಎಂದು ಹೇಳಲಾದ ವೀಡಿಯೊ ಹಾಗೂ ವ್ಯಾಟ್ಸ್‌ಆ್ಯಪ್ ಸಂದೇಶವನ್ನು ಪಕ್ಷ ಪ್ರದರ್ಶಿಸಿತು.

 ಹಿಂಸಾಚಾರದ ಸಂದರ್ಭದ ‘ವಿದ್ಯಾಸಾಗರ್ ಖತಂ, ಜೋಸ್ ಎಲ್ಲ್ಲಿದೆ’ ಎಂಬಂತಹ ಘೋಷಣೆಗಳ ಅಡಿಯೊ ಸಂಗ್ರಹಿಸಲು ಹಾಗೂ ಅದರ ಸಾಚಾತ ದೃಢಪಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಪಶ್ಚಿಮಬಂಗಾಳದಲ್ಲಿ ನಿಯೋಜಿಸಲಾಗಿದ್ದ ಕೇಂದ್ರ ಮೀಸಲು ಪಡೆ ‘ಪಿಸುಗುಟ್ಟುವ ಅಭಿಯಾನ’ ನಡೆಸಿ ಬಿಜೆಪಿಗೆ ಮತ ಹಾಕಿ ಎಂದು ಜನರಲ್ಲಿ ಮನವಿ ಮಾಡಿದೆ ಎಂದು ಒಬ್ರಿಯಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News