ರೇಸ್‌ಕೋರ್ಸ್ ರಸ್ತೆ ಅಥವಾ ಸಂಸತ್ತಿನಲ್ಲಿ ಚರ್ಚೆಗೆ ಬನ್ನಿ: ಮೋದಿಗೆ ರಾಹುಲ್ ಸವಾಲು

Update: 2019-05-15 17:44 GMT

ಹೊಸದಿಲ್ಲಿ, ಮೇ 15: ತನ್ನೊಂದಿಗೆ ಚರ್ಚೆಗೆ ಬಂದರೆ ಕೇವಲ 15 ನಿಮಿಷದಲ್ಲಿ ಪ್ರಧಾನಿ ಮೋದಿಯನ್ನು ನಿರುತ್ತರನಾಗಿಸುತ್ತೇನೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೊಮ್ಮೆ ಸವಾಲು ಹಾಕಿದ್ದಾರೆ.

“ಚರ್ಚೆಗೆ ಬರಲು ಪ್ರಧಾನಿ ಮೋದಿಗೆ ಸವಾಲು ಹಾಕುತ್ತಿದ್ದೇನೆ. ಅವರು ಬಯಸಿದಲ್ಲಿ ಚರ್ಚೆ ನಡೆಯಲಿ. ರೇಸ್‌ಕೋರ್ಸ್ ರಸ್ತೆ(ಪ್ರಧಾನಿ ಮೋದಿಯ ಸರಕಾರಿ ನಿವಾಸವಿರುವ ಲೋಕಕಲ್ಯಾಣ ಮಾರ್ಗವನ್ನು ಈ ಹಿಂದೆ ರೇಸ್‌ಕೋರ್ಸ್ ರಸ್ತೆ ಎಂದು ಕರೆಯಲಾಗುತ್ತಿತ್ತು) ಅಥವಾ ಸಂಸತ್ತು. ಎಲ್ಲಿ ಬೇಕಾದರಲ್ಲಿ ಚರ್ಚೆಗೆ ನಾನು ರೆಡಿ. ಮೋದಿ ಬೇಕಾದರೆ 3 ಗಂಟೆ ಮಾತಾಡಲಿ, ಆದರೆ ನಾನು ಕೇವಲ 15 ನಿಮಿಷ ಮಾತಾಡಿದರೆ ಸಾಕು, ಅವರ ಬಂಡವಾಳ ಬಯಲಾಗುತ್ತದೆ. ಇದೇ ಹೆದರಿಕೆಯಿಂದ ಅವರು ನನ್ನೊಡನೆ ಚರ್ಚೆಗೆ ಮುಂದಾಗುತ್ತಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

 ಪಂಜಾಬ್‌ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಈ ಸವಾಲೆಸೆದರು. ಮಂಗಳವಾರ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, “ಮೋದಿ ಸದಾ ದ್ವೇಷದ ಮಾತನ್ನೇ ಆಡುತ್ತಿರುತ್ತಾರೆ. ಅವರು ನನ್ನ ತಂದೆ, ಅಜ್ಜಿ, ಮುತ್ತಜ್ಜರನ್ನು ಅವಮಾನ ಮಾಡಿದ್ದಾರೆ. ಆದರೆ ನಾನು ಸತ್ತರೂ ಮೋದಿಯ ಕುಟುಂಬದ ಬಗ್ಗೆ ಮಾತನಾಡುವುದಿಲ್ಲ. ಅವರ ತಂದೆ, ತಾಯಿಯನ್ನು ಅವಮಾನಿಸುವುದಿಲ್ಲ” ಎಂದು ಹೇಳಿದ್ದರು. ಪಂಜಾಬ್‌ನ 13 ಲೋಕಸಭಾ ಕ್ಷೇತ್ರಗಳಿಗೆ ಮೇ 19ರಂದು ಮತದಾನ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News