‘ಸಂವಿಧಾನದ ಕಾಲಾಳು’: ತೀಸ್ತಾ ಸೆಟಲ್ವಾಡ್ ನೆನಪುಗಳು

Update: 2019-05-16 06:39 GMT

ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರಿಗೆ ಚಿರಪರಿಚಿತ ಹೆಸರು ತೀಸ್ತಾ ಸೆಟಲ್ವಾಡ್. ಮುಂಬೈನ ವಕೀಲರ ಕುಟುಂಬಕ್ಕೆ ಸೇರಿದ ತೀಸ್ತಾ ಕಾನೂನು ಮತ್ತು ಸಂವಿಧಾನದ ಮೌಲ್ಯಗಳನ್ನೇ ಉಸಿರಾಗಿಸಿಕೊಂಡು ಬೆಳೆದವರು. ತಂದೆ, ತಾತ ಮತ್ತು ಮುತ್ತಾತ ದೇಶದ ಪ್ರಸಿದ್ಧ ವಕೀಲರಾಗಿ ಪಡೆದಿದ್ದ ಶ್ರೇಯಸ್ಸಿನ ನೆರಳಲ್ಲೇ ಸಾಗಿದ ತೀಸ್ತಾ ನ್ಯಾಯದಾನಕ್ಕಾಗಿ ಆರಿಸಿಕೊಂಡಿದ್ದು ಪತ್ರಿಕೋದ್ಯಮವನ್ನು. ವೃತ್ತಿಯ ಆರಂಭದಲ್ಲೇ ಕೋಮುಗಲಭೆಯ ವರದಿಗಾರಿಕೆ ಮಾಡಬೇಕಾಗಿ ಬರುತ್ತದೆ. ಅಲ್ಲಿ ಕಂಡ ಮಾನವ ಹಕ್ಕುಗಳ ದಮನ, ದ್ವೇಷದ ರಾಜಕೀಯ, ರಾಜಸತ್ತೆಯ ದಮನಕಾರಿ ಪ್ರವೃತ್ತಿಗಳು ಅವರನ್ನು ಆ್ಯಕ್ಟಿವಿಸ್ಟ್ ಆಗಿ ರೂಪಿಸುತ್ತದೆ. ಪತ್ರಿಕೋದ್ಯಮದಲ್ಲೇ ಬಾಳ ಸಂಗಾತಿ ಜಾವೇದ್ ಆನಂದ್ ಅವರನ್ನೂ ಭೇಟಿ ಮಾಡುವ ತೀಸ್ತಾ ಮುಂದೆ ಪ್ರಮುಖ ವಾಹಿನಿ ಪತ್ರಿಕೆಗಳಿಂದ ಭ್ರಮನಿರಸನಗೊಂಡು ‘ಕಮ್ಯುನಲಿಸಂ ಕಾಂಬ್ಯಾಟ್’ ಎನ್ನುವ ಪತ್ರಿಕೆಯನ್ನು ಆರಂಭಿಸಿದರು. ಕೋಮುವಾದದ ವಿರುದ್ಧ ಸಾಮಾಜಿಕ, ರಾಜಕೀಯ ಹಾಗೂ ಕಾನೂನು ಹೋರಾಟಗಳನ್ನು ನಡೆಸುತ್ತಾ ಬಂದಿರುವ ಈ ಪತ್ರಿಕೆಯು ಜಗತ್ತಿನಲ್ಲೇ ವಿಶಿಷ್ಟ ಎನ್ನಲಾಗಿದೆ.
1984 ಹಾಗೂ 1992-93 ಮುಂಬೈ ಗಲಭೆಗಳು ಹಾಗೂ 2002ರ ಗುಜರಾತ್ ಹತ್ಯಾಕಾಂಡದಲ್ಲಿ ನೊಂದು ಬೆಂದವರಿಗೆ ನ್ಯಾಯ ದೊರಕಿಸಿಕೊಡಲು ಅನವರತ ಶ್ರಮಿಸುತ್ತಿರುವ ತೀಸ್ತಾ ಇಂದು ಭಾರತದ ಪ್ರಮುಖ ಮಾನವಹಕ್ಕು ಹೋರಾಟಗಾರ್ತಿಯಾಗಿದ್ದಾರೆ. ತಮ್ಮ ಸತತ ಹೋರಾಟದಿಂದ ಗುಜರಾತ್ ಹತ್ಯಾಕಾಂಡದಲ್ಲಿ 117 ಜನರಿಗೆ ಶಿಕ್ಷೆಯಾಗುವಂತೆ ಶ್ರಮವಹಿಸಿದವರು ತೀಸ್ತಾ. ಇವರ ಹೋರಾಟದಿಂದ ಎದೆಗುಂದಿದ ಗುಜರಾತ್ ಸರಕಾರ ಇವರ ಮೇಲೆ ಅನೇಕ ರೀತಿಯ ದೈಹಿಕ, ಮಾನಸಿಕ ಮತ್ತು ಕಾನೂನು ದಾಳಿಗಳನ್ನು ನಡೆಸಿದರೂ ಎದೆ ಗುಂದದೆ ನ್ಯಾಯಕ್ಕಾಗಿ ಹೋರಾಡುತ್ತಿರುವ ಅಪರೂಪದ ವ್ಯಕ್ತಿ ತೀಸ್ತಾ, ದಮನಿತರ ನಿಜವಾದ ಸಂಗಾತಿ.
ತಮ್ಮ ಬಾಲ್ಯ, ಯೌವನ ಹಾಗೂ ನಂತರದ ಹೋರಾಟದ ಬದುಕನ್ನು ದಾಖಲಿಸಿರುವ ಹೊತ್ತಿಗೆಯೇ ‘ಸಂವಿಧಾನದ ಕಾಲಾಳು’ ಪುಸ್ತಕ. ಇದನ್ನು ಇಂಗ್ಲಿಷ್ ಮೂಲದಲ್ಲಿ ದಿಲ್ಲಿಯ ‘ಲೆಫ್ಟ್‌ವರ್ಡ್ಸ್’ ಪ್ರಕಟಿಸಿದ್ದು, ಸಂವಹನ ಸಮಾಲೋಚಕಿ ಸತ್ಯಾ ಎಸ್. ಇದನ್ನು ಕನ್ನಡಕ್ಕೆ ತಂದಿದ್ದಾರೆ. ಅದನ್ನು ಕ್ರಿಯಾ ಮಾಧ್ಯಮ ಮೇ 18ರಂದು ಬಿಡುಗಡೆ ಮಾಡಲಿದೆ.
ಪುಸ್ತಕದಿಂದ ಆಯ್ದ ಎರಡು ಭಾಗಗಳನ್ನು ಇಲ್ಲಿ ಪ್ರಕಟಿಸಲಾಗಿದೆ:

1992-93ರ ಮುಂಬೈ ಗಲಭೆಗಳನ್ನು ‘ಬಿಸಿನೆಸ್ ಇಂಡಿಯಾ’ ಪತ್ರಿಕೆಗೆ ವರದಿ ಮಾಡುತ್ತಿದ್ದ ಸಂದರ್ಭ. ಸುದ್ದಿ ಸಂಗ್ರಹಣೆ ಮಾಡುತ್ತಾ ಬೀದಿಗಳಲ್ಲಿ ಅಲೆದಾಡುತ್ತಿದ್ದೆ. 1993ರ ಜನವರಿ 10ರಿಂದ 18ರವರೆಗೆ ಕೆಲವು ಮುಸ್ಲಿಂ ಯುವಕರ ನೆರವಿನಿಂದ ಪೊಲೀಸರ ವಯರ್‌ಲೆಸ್ ಸಂದೇಶಗಳನ್ನು ಆಲಿಸಿದೆವು. ಅದು ಸಂಚಾರಿ ಪೊಲೀಸ್‌ವ್ಯಾನ್ ಮತ್ತು ಪೊಲೀಸ್ ಕಂಟ್ರೋಲ್ ರೂಂ ನಡುವೆ ನಡೆಯುತ್ತಿದ್ದ ಸಂಭಾಷಣೆಯಾಗಿತ್ತು. ಅದರ ಫ್ರೀಕ್ವೆನ್ಸಿಯನ್ನು ಹೇಗೋ ಪತ್ತೆ ಮಾಡಿ, ಧ್ವನಿ ಮುದ್ರಣವನ್ನೂ ಮಾಡಿಕೊಂಡು ದಾಖಲೆಯಾಗಿ ಸಂಗ್ರಹಿಸಿದೆವು.
ಆ ಸಂಭಾಷಣೆಗಳಲ್ಲಿ ಮುಸ್ಲಿಮರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಪೊಲೀಸರು, ಮುಸ್ಲಿಮರ ಪ್ರದೇಶಗಳಿಗೆ ಹೋಗದಂತೆ ಪರಿಹಾರ ತಂಡಗಳಿಗೆ ಸೂಚನೆಯನ್ನು ಕೊಡುತ್ತಿದ್ದರು. ಅವರ ಮಾತುಗಳಲ್ಲಿ ಮುಸ್ಲಿಮರ ಬಗ್ಗೆ ತಿರಸ್ಕಾರ ಮತ್ತು ದ್ವೇಷದ ಭಾವನೆಗಳಿದ್ದವು.
ತನಿಖಾ ವರದಿಯು ಸಿಎನ್‌ಎನ್, ಬಿಬಿಸಿ, ನ್ಯೂಸ್ ಟ್ರ್ಯಾಕ್ ಹಾಗೂ ಐ ವಿಟ್ನೆಸ್ ಚಾನೆಲ್‌ಗಳಲ್ಲಿ ಪ್ರಸಾರವಾಯಿತು. ಪೊಲೀಸರ ಈ ನಡೆ ಎಲ್ಲ ಕಡೆ ತೀಕ್ಷ್ಣ ಚರ್ಚೆಗೆ ಗುರಿಯಾಯಿತು. ರಕ್ಷಣೆ ಮಾಡಬೇಕಾದ ಪೊಲೀಸರಲ್ಲೇ ಇರುವ ಈ ಕೋಮುಭಾವನೆ, ದ್ವೇಷ ನನ್ನನ್ನು ಸದಾ ಚಿಂತೆಗೆ ಗುರಿ ಮಾಡಿದೆ.
ಇದು ಮತ್ತೆ ಗುಜರಾತಿನಲ್ಲೂ, ಇನ್ನಷ್ಟು ತೀವ್ರತೆಯಿಂದ, ಇನ್ನಷ್ಟು ದ್ವೇಷಪೂರಿತವಾಗಿ, ಇನ್ನಷ್ಟು ವ್ಯಾಪಕವಾಗಿ ವ್ಯಕ್ತಗೊಂಡಿತು.
ಭಾರತದ ಕಾನೂನು ಅನುಷ್ಠಾನ ಸಂಸ್ಥೆಗಳು (ಪೊಲೀಸ್), ಗುಪ್ತಚರ ಇಲಾಖೆ ಹಾಗೂ ಇತರ ಹಲವಾರು ಆಡಳಿತ ಸಂಸ್ಥೆಗಳಲ್ಲಿ ತೂರಿಕೊಂಡಿರುವ ಕೋಮುವಾದಿ ಮತ್ತು ಬಹುಸಂಖ್ಯಾತ ಜನರ ಪರವಾದ ಮನೋಭಾವಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿರುವುದನ್ನು ನನ್ನ ಪತ್ರಿಕೋದ್ಯಮದ ಬರವಣಿಗೆಯುದ್ದಕ್ಕೂ ಮತ್ತು ಸಾಮಾಜಿಕ ಕಾರ್ಯಗಳಲ್ಲೂ ನಿರಂತರ ಪ್ರಸ್ತಾಪಿಸುತ್ತಾ ಬಂದಿರುವೆ.
ರಾಷ್ಟ್ರೀಯ ಪೊಲೀಸ್ ಆಯೋಗದ ಎಂಟನೇ ವರದಿಯು (1979-81) ಈ ತರತಮದ ಬಗ್ಗೆ ಪ್ರಸ್ತಾಪ ಮಾಡಿದ್ದರೂ, ಅದನ್ನು ಒಪ್ಪಿಕೊಳ್ಳಲು ನಮ್ಮ ಆಡಳಿತ ವ್ಯವಸ್ಥೆ ಹಿಂಜರಿಯುತ್ತಿದೆ.

***

ಬಹಳಷ್ಟು ಜನರಿಗೆ ಗುಜರಾತಿನ ಈ ಪ್ರಕರಣವು ತನಿಖೆಗಳ ಭಾರದಲ್ಲಿ ಕಳೆದುಹೋದ ಅಧ್ಯಾಯದಂತೆ ಕಂಡುಬರಬಹುದು. ಆದರೆ, ದಾಖಲೆಗಳನ್ನು ಕೆದಕುತ್ತಾ ಹೋದರೆ, ಸರ್ವಕಾಲಕ್ಕೂ ಎಚ್ಚರಿಸುವಂತಹ ಮಾಹಿತಿಗಳು ದೊರೆಯುತ್ತವೆ. ಅಂತಹುದರಲ್ಲಿ ಒಂದು ದಾಖಲೆ 2002ರ ಜೂನ್ 1ರಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಬರೆದ ಪತ್ರ. ಗೋಧ್ರಾ ಘಟನೆ ಮತ್ತು ಗೋಧ್ರಾ ನಂತರದ ಘಟನೆ ಸಂಭವಿಸಿ ಮೂರು ತಿಂಗಳ ನಂತರ ಬರೆದ ಈ ಪತ್ರದಲ್ಲಿ ವಾಜಪೇಯಿ ಅವರು ಗುಜರಾತಿನಲ್ಲಿ ಇರುವ ಸೂಕ್ಷ್ಮ ಕೋಮು ವಾತಾವರಣದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ; ಕೋಮು ಗಲಭೆಗೆ ಬಲಿಯಾದ ಜನರ ಹಿತರಕ್ಷಣೆಯ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಯಾದವರು ತನ್ನ ಜನರನ್ನು ಜಾತಿ, ಧರ್ಮ, ಪಂಗಡಗಳ ಆಧಾರದ ಮೇಲೆ ತಾರತಮ್ಯ ಮಾಡದೆ, ರಾಜಧರ್ಮ ಪಾಲಿಸಬೇಕು ಎಂದು ವಾಜಪೇಯಿ ಅವರು ಖುದ್ದಾಗಿ ಮೋದಿಗೆ ಹೇಳಿದ ಎರಡು ತಿಂಗಳ ನಂತರ ಈ ಪತ್ರ ಬರೆಯಲಾಗಿದೆ. ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಪಡೆಯಲಾದ ಈ ಪತ್ರದಲ್ಲಿ, ಸಾಧಾರಣವಾಗಿ ದೀರ್ಘ ಪತ್ರಗಳನ್ನು ಬರೆಯದಿರುವ ವಾಜಪೇಯಿ ಅವರು ಗುಜರಾತಿನ ಮುಖ್ಯಮಂತ್ರಿಗೆ ಸುದೀರ್ಘ ಪತ್ರ ಬರೆದಿರುವುದನ್ನು ಕಾಣ ಬಹುದು. ಹತ್ಯಾಕಾಂಡದ ಸಂತ್ರಸ್ತರಿಗೆ ಪರಿಹಾರ ಒದಗಿಸಲು, ರಕ್ಷಣೆ ಒದಗಿಸಲು, ಭರವಸೆ ನೀಡಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿಲ್ಲ ಎನ್ನುವ ಕಾಳಜಿ ಈ ಪತ್ರದಲ್ಲಿ ಧ್ವನಿಸುತ್ತದೆ. ಗಲಭೆಯಲ್ಲಿ ಮನೆಗಳಿಗೆ ಆಗಿರುವ ಹಾನಿಯ ಬಗ್ಗೆ ರಾಜ್ಯ ಸರಕಾರ ನೀಡಿದ ಅಂಕಿಅಂಶಗಳು ಸತ್ಯಕ್ಕೆ ದೂರವಾಗಿದೆ ಎಂಬ ಅಂಶವನ್ನು ವಾಜಪೇಯಿ ಅವರು ಮೋದಿ ಅವರ ಗಮನಕ್ಕೆ ತಂದಿದ್ದಾರೆ.
‘‘ಅನೇಕ ಕಾರಣಗಳಿಂದಾಗಿ ಹಾನಿಯನ್ನು ಅಂದಾಜು ಮಾಡಲು ನಿಯೋಜಿಸಿರುವ ತಂಡವು ಹಾನಿಯನ್ನು ಸರಿಯಾಗಿ ಗ್ರಹಿಸದೆ ಹೋಗಿರುವ ಸಾಧ್ಯತೆಗಳಿವೆ. ಎಲ್ಲರಿಗೂ ನ್ಯಾಯ ದೊರಕುವಂತೆ ಎಚ್ಚರವಹಿಸಲು ಅಲ್ಲಲ್ಲಿ ಈ ಹಾನಿ ಅಂದಾಜು ಪ್ರಕ್ರಿಯೆಯನ್ನು ಮರುಪರೀಕ್ಷೆಗೆ ಒಳಪಡಿಸಬೇಕು. ಈ ಮರುಪರೀಕ್ಷೆಯಲ್ಲಿ ಹಾನಿಯ ಅಂದಾಜು ಎಲ್ಲಾದರೂ ಕಡಿಮೆ ಇರುವುದು ಕಂಡು ಬಂದರೆ, ಮರುಪರೀಕ್ಷೆಗೆ ಆದೇಶಿಸಬೇಕು’’ ಎಂದಿದ್ದಾರೆ. ಪರಿಹಾರ ಕಾರ್ಯಗಳಿಗೆ ಹೆಚ್ಚಿನ ಆರ್ಥಿಕ ನೆರವು ಬೇಕಾದಲ್ಲಿ ಕೇಂದ್ರದಿಂದ ಅದನ್ನು ಒದಗಿಸುವ ಭರವಸೆಯನ್ನೂ ನೀಡಿದ್ದಾರೆ. ‘‘ಹತ್ಯೆಗೊಳಗಾದ ಜನರ ಗುರುತು ಪತ್ತೆ ಹಚ್ಚುವ ಕೆಲಸ ಮತ್ತು ಹತ್ಯೆಗೊಳಗಾದವರ ಕುಟುಂಬಗಳಿಗೆ ಪರಿಹಾರ ಧನ ನೀಡುವ ಕೆಲಸ ವಿಳಂಬವಾಗಿರುವುದರ ಬಗ್ಗೆ ಅನೇಕ ದೂರುಗಳು ಬಂದಿವೆ. ಕಾಣೆಯಾದವರನ್ನು ಪತ್ತೆ ಮಾಡುವ ಕೆಲಸವೂ ನಿಧಾನಗತಿಯಲ್ಲಿ ಸಾಗಿದೆ ಎಂದು ತಿಳಿದುಬಂದಿದೆ. ಪರಿಹಾರ ಧನ ನೀಡುವ ಕೆಲಸದಲ್ಲಿ ಆಗುತ್ತಿರುವ ವಿಳಂಬವು ತೀವ್ರ ಕಾಳಜಿಗೆ ಕಾರಣವಾಗಿದೆ.’’ ಡಿಎನ್‌ಎ ಮಾದರಿಗಳ ಮೂಲಕ ಗುರುತು ಪತ್ತೆಹಚ್ಚುವುದು ಬಹಳ ಸಮಯ ಬೇಡುವ ವಿಧಾನವಾಗಿದೆ ಎಂದಿರುವ ಅವರು, ‘‘ಇದು ಪರಿಹಾರ ಕಾರ್ಯಗಳನ್ನು ಮತ್ತಷ್ಟು ವಿಳಂಬ ಮಾಡುತ್ತದೆ’’ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಜನರ ಮುಖದ ಮೇಲೆ ತಾಂಡವವಾಡುತ್ತಿದ್ದ ಭೀತಿ, ಅಸುರಕ್ಷತೆಯ ಭಾವದ ಬಗ್ಗೆ ಹೀಗೆ ಬರೆದಿದ್ದಾರೆ- ‘‘ಬರ್ಬರ ಹಲ್ಲೆಗಳು ನಡೆದ ಪ್ರದೇಶಗಳಿಗೆ ಹಿಂದಿರುಗಿ, ಅಲ್ಲೇ ನೆಲೆಸಲು ಜನರು ನಿರಾಕರಿಸುವುದು ಸಹಜ. ಆದರೆ, ಅಂತಹ ಪ್ರದೇಶಗಳಲ್ಲಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡು ಜನರು ತಮ್ಮ ಊರಿಗೆ ಭಯ ಭೀತಿ ಇಲ್ಲದೆ ಹಿಂದಿರುಗುವಂತೆ ಮಾಡುವ, ಸುರಕ್ಷತೆಯ ಭಾವನೆಯನ್ನು ಮೂಡಿಸುವ ಕೆಲಸ ಮಾಡಬೇಕು. ನರೋಡ ಪಾಟಿಯಾ, ಲುನಾವಾಡ ಮೊದಲಾದ ತೀವ್ರ ಗಲಭೆ ಪೀಡಿತ ಪ್ರದೇಶಗಳ ಜನರನ್ನು ಸ್ಥಳಾಂತರ ಮಾಡದೆ ಬೇರೆ ದಾರಿಯೇ ಇಲ್ಲ ಎನ್ನುವುದಾದರೆ, ಈ ಸ್ಥಳಾಂತರದ ಪ್ರಕ್ರಿಯೆಯನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಇಲ್ಲವಾದರೆ ಸಮಾಜಘಾತುಕ ಶಕ್ತಿಗಳು ಈ ಸಂದರ್ಭದ ಲಾಭ ಪಡೆಯುವ ಸಾಧ್ಯತೆಗಳಿವೆ. ಆ ಶಕ್ತಿಗಳು ಈಗಾಗಲೇ ಸಂಕೀರ್ಣವಾಗಿರುವ ಪರಿಸ್ಥಿತಿಯನ್ನು ಮತ್ತಷ್ಟು ವಿಷಮಯ ಮಾಡುವ ಅಪಾಯವಿದೆ’’ ಎಂದಿದ್ದಾರೆ. ಗುಜರಾತಿನಲ್ಲಿ ನಡೆದಿದ್ದ ಹತ್ಯಾಕಾಂಡದಿಂದ ವಿಚಲಿತರಾಗಿದ್ದ ವಾಜಪೇಯಿ ಅವರು, ಬದುಕುಳಿದಿರುವ ಜನರ ಬದುಕುಗಳನ್ನು ಕಟ್ಟುವ ಬಗ್ಗೆ ನೈಜ ಕಾಳಜಿಯಿಂದ ಸ್ವತಃ ತಾವೇ ಬರೆದ ಪತ್ರ ಇದಾಗಿದೆ ಹಾಗೂ ರಾಜ್ಯ ಸರಕಾರವೊಂದು ತನ್ನ ಜವಾಬ್ದಾರಿ ನಿರ್ವಹಿಸದೆ ಇದ್ದಾಗ ಅನಿವಾರ್ಯವಾಗಿ ಮಧ್ಯ ಪ್ರವೇಶಿಸಿ, ಪರಿಹಾರ ಕೆಲಸಗಳನ್ನು ಹೇಗೆ ಮಾಡಬೇಕೆಂದು ಸೂಚನೆಗಳನ್ನು ನೀಡಿದ್ದಾರೆ. ಪ್ರಧಾನಿಯೊಬ್ಬರು ರಾಜ್ಯ ಸರಕಾರಕ್ಕೆ ತನ್ನ ಕೆಲಸವನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ಸೂಚನೆ ನೀಡಿರುವುದು ಇದೇ ಮೊದಲ ಸಲವಾಗಿದೆ. ಆದರೆ, ಈ ಪತ್ರ, ಇದು ಸ್ಫುರಿಸುವ ಭಾವ ಹಾಗೂ ಇದರ ಮಹತ್ವವನ್ನು ಭಾರತ ಇಂದು ಮರೆತಿದೆ.
ಝಕಿಯಾ ಜಾಫ್ರಿ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೀಗೆ ದಾಖಲೆಗಳನ್ನು ಹುಡುಕುತ್ತಾ ಹೋದಂತೆ ಮತ್ತೊಂದು ಮಾಹಿತಿ ಎದ್ದು ಬಂದಿತು. ಗಲಭೆಗಳ ನಿಯಂತ್ರಣಕ್ಕೆಂದು ನಿಯೋಜಿಸಲಾಗಿದ್ದ ಸೇನೆಯ ಮುಖ್ಯಸ್ಥರು ಸಲ್ಲಿಸಿದ್ದ ‘ಆಪರೇಷನ್ ಅಮನ್’ ಎಂಬ ವರದಿಯಲ್ಲಿ ಮೋದಿ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲಾಗಿದೆ. ಇದರ ಬೆನ್ನು ಹತ್ತಿ ಮತ್ತೊಂದು ಪಯಣಕ್ಕೆ ಹೊರಟೆವು. ಆದರೆ ಅದೀಗ ಮಾಹಿತಿ ಆಯೋಗದ ಆಯುಕ್ತರ ಕಚೇರಿಯಲ್ಲಿ ತಡೆಯಾಗಿದೆ. ಏನಾದರಾಗಲಿ ನಾನು ಈ ನನ್ನ ಹೋರಾಟವನ್ನು ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ನನ್ನ ನಿಲುವು ನನಗೆ ಅಪಾರ ಕಷ್ಟಗಳನ್ನು, ನನ್ನ ಕುಟುಂಬಕ್ಕೆ ಚಿಂತೆಯನ್ನೂ ತಂದೊಡ್ಡಿದೆ.
ಝಕಿಯಾ ಜಾಫ್ರಿ ಪ್ರಕರಣವು ಸಾಕ್ಷಿ-ಪುರಾವೆಗಳನ್ನು ಹುಡುಕಿ, ಸಂಗ್ರಹಿಸುವ ವಿಚಾರದಲ್ಲಿ ಒಂದು ಮೈಲಿಗಲ್ಲಾಗಿದೆ. ಗುಪ್ತಚರ ಇಲಾಖೆಯ ದಾಖಲೆಗಳು, ಪೊಲೀಸ್ ಕಂಟ್ರೋಲ್ ರೂಮಿನ ದಾಖಲೆಗಳು, ಅಗ್ನಿ ಶಾಮಕ ದಳದ ದಾಖಲೆಗಳೂ ಸೇರಿದಂತೆ 23,000 ಪುಟಗಳಷ್ಟಿರುವ ಪುರಾವೆಗಳು ಆಡಳಿತದ ಲೋಪಗಳನ್ನು ಮಾತ್ರವಲ್ಲದೆ, ಆಡಳಿತ ವ್ಯವಸ್ಥೆಯು ಹತ್ಯಾಕಾಂಡದಲ್ಲಿ ಶಾಮೀಲಾಗಿರುವುದನ್ನೂ ದೃಢಪಡಿಸುತ್ತವೆ.

ಪ್ರಜಾಪ್ರಭುತ್ವದ ಉಳಿವಿಗಾಗಿನ ಸಂಘರ್ಷದ ಅನುಭವದ ಕಣಜ

ಪ್ರಜಾಪ್ರಭುತ್ವದ ಉಳಿವಿಗಾಗಿ, ಅನ್ಯಾಯಗಳ ವಿರುದ್ಧ ಈ ದೇಶದಲ್ಲಿ ಹಲವು ತೆರನ ಹೋರಾಟಗಳು, ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಲೇ ಇವೆ. ಎಲ್ಲರನ್ನೂ ಸಮಾನವಾಗಿ ಕಾಣಬೇಕೆನ್ನುವ, ಎಲ್ಲರಿಗೂ ಸಮಪಾಲು ಸಿಗಬೇಕೆನ್ನುವ ಸಮಾನತೆಯ ಅಡಿಪಾಯದ ಮೇಲೆ ಈ ಸಮಾಜವನ್ನು ನಿರ್ಮಿಸುವ ಆಶಯದೊಂದಿಗೆ ಚಾಲ್ತಿಯಲ್ಲಿರುವ ಸಂವಿಧಾನವೇ ಅಪಾಯವನ್ನೆದುರಿಸುತ್ತಿರುವ ಸಂದರ್ಭವಿದು. ಈ ಹೊತ್ತಿನಲ್ಲಿ ಪತ್ರಕರ್ತೆಯಾಗಿ, ಕೋಮುಹಿಂಸಾಚಾರಕ್ಕೆ ಬಲಿಯಾದವರ ಪರ ಹೋರಾಟ ಮಾಡುತ್ತ, ಸ್ವತಃ ಹಲವು ರೀತಿಯ ಅಪಾಯಗಳನ್ನೆದುರಿಸುತ್ತಿದ್ದರೂ ಎದೆಗುಂದದೇ ನೊಂದವರ ಬಾಳಿನ ಆಶಾಕಿರಣದಂತೆ ಕೆಲಸ ಮಾಡುತ್ತಿರುವ ತೀಸ್ತಾ ಸೆಟಲ್ವಾಡ್ಅವರ ಬದುಕಿನ ಪುಟಗಳು, ನೆನಪಿನ ಬುಟ್ಟಿಯಿಂದ ಅಕ್ಷರಕ್ಕಿಳಿದ ಅನುಭವ ಕಥನ ‘ಫುಟ್ ಸೋಲ್ಜರ್ ಆಫ್ ದಿ ಕಾನ್ಸ್ಟಿಟ್ಯೂಷನ್’ ಇಂಗ್ಲಿಷ್ ಪುಸ್ತಕದ ಅನುವಾದ-‘‘ಸಂವಿಧಾನದ ಕಾಲಾಳು’’ ಹೆಸರಿನಲ್ಲಿ ಸತ್ಯಾ ಎಸ್. ಅವರಿಂದ ಅನುವಾದಗೊಂಡು ಬಿಡುಗಡೆಯಾಗುತ್ತಿದೆ.
ಇದನ್ನು ತೀಸ್ತಾ ಅವರ ಬದುಕಿನ ಪುಟಗಳು ಎನ್ನುವುದಕ್ಕಿಂತ ಪ್ರಜಾಪ್ರಭುತ್ವ ಮತ್ತು ನ್ಯಾಯದ ಉಳಿವಿಗಾಗಿ ನಡೆಸುತ್ತಿರುವ ಹೋರಾಟಗಳ ಒಂದು ಅತ್ಯುತ್ತಮ ದಾಖಲೆ ಎನ್ನಬೇಕು. ಅವರ ಈ ಅನುಭವ ಕಥಾನಕದಲ್ಲಿ ಪತ್ರಕರ್ತೆಯಾಗಿ, ಸಾಮಾಜಿಕ ಕಳಕಳಿಯ ಹೋರಾಟಗಾರ್ತಿಯಾಗಿ ತಾನು ಕಣ್ಣಾರೆ ಕಂಡ ಸತ್ಯಗಳನ್ನು, ಭಯಂಕರವಾದ ಸನ್ನಿವೇಶಗಳನ್ನು ದಾಖಲಿಸುತ್ತಲೇ ನಮ್ಮ ಸುತ್ತಲಿನ ಜಗತ್ತಿಗೆ ಎಲ್ಲರೂ ಮನುಷ್ಯರಾಗಿ ಬದುಕುವ ಅಗತ್ಯವನ್ನು ತಿಳಿಸುತ್ತಾರೆ.
ಇಷ್ಟೊತ್ತಿಗಾಗಲೇ ಹಲವರ ನೆನಪಿನಿಂದ ಮಾಸಿ ಹೋಗಿರಬಹುದಾದ 1984ರ ಭಿವಂಡಿ ಕೋಮುಗಲಭೆ ತನ್ನ ಮೇಲೆ ಎಂದಿಗೂ ಮರೆಯಲಾರದ ಪರಿಣಾಮ ಬೀರಿದ್ದನ್ನು ನೆನಪಿಸಿಕೊಳ್ಳುತ್ತಲೇ ಅದು ಹೇಗೆ ತನ್ನನ್ನು ಒಬ್ಬ ಪತ್ರಕರ್ತೆಯನ್ನಾಗಿ ರೂಪಿಸಿತು ಎಂಬುದರ ಮೂಲಕ ಈ ನೆನಪುಗಳನ್ನು ನಮ್ಮೆದುರಿಗೆ ಹಂಚಿಕೊಳ್ಳುತ್ತಾರೆ ತೀಸ್ತಾ.
ರಾಜಕೀಯ ಪಕ್ಷವೊಂದರ ಧ್ಯೇಯ ಧೋರಣೆಗಳು ದೇಶದ ಜನರ ಹಿತಕ್ಕಿಂತ ಬೇರೆಯಾಗಿರಲು ಸಾಧ್ಯವಿಲ್ಲ, ಅದರಲ್ಲಿಯೂ ಭಾರತದಂತಹ ದೇಶದಲ್ಲಿ ಯಾವ ರಾಜಕೀಯ ಪಕ್ಷವೇ ಅಧಿಕಾರಕ್ಕೆ ಬಂದರೂ ಇಲ್ಲಿನ ಬಹುತ್ವದ ನೆಲೆಯಲ್ಲಿ ಎಲ್ಲರೂ ಒಟ್ಟಿಗೆ ಬದುಕಿ ಬಾಳಿ ನಿರ್ಮಿಸಿದ ಇತಿಹಾಸವನ್ನು ಬದಿಗೊತ್ತಿ, ತನ್ನ ಅಧಿಕಾರದ ಬಲದ ಮೇಲೆ ಒಂದು ಧರ್ಮದವರು ತಮ್ಮ ಸಂಖ್ಯಾಬಲದ ಆಧಾರದಲ್ಲಿ ಇನ್ನೊಂದು ಧರ್ಮದವರನ್ನು ತಮ್ಮ ಅಧೀನರಂತೆ ಬದುಕಬೇಕೆನ್ನುವ ಹುಕೂಮತ್ ಹೊರಡಿಸುವಂತಹ ನಿಯಮಗಳನ್ನು ಹೊರಿಸಲು ಸಾಧ್ಯವಿಲ್ಲ. ಇದು ಈ ದೇಶದ ಮೂಲ ಆಶಯ. ಆದರೆ 1984ರ ಭಿವಂಡಿ ಕೋಮು ಗಲಭೆಗಳು, 92-93 ಮುಂಬೈ ಗಲಭೆಗಳು, 2002ರ ಗುಜರಾತ್ ಗಲಭೆಗಳು ಮತ್ತು ಮುಂದುವರಿದ ಹೃದಯ ತಲ್ಲಣಿಸುವ ಬದಲಾವಣೆಗಳನ್ನು ದಾಖಲಿಸುತ್ತ ಈ ನೆಲದ ಮೂಲ ಆಶಯ ತಪ್ಪಿದ ದಾರಿಯ ಜಾಡನ್ನು ಓದುಗರಿಗೆ ತೋರಿಸುತ್ತಾರೆ. ಅಧಿಕಾರದಲ್ಲಿರುವವರು ಬಯಸಿದರೆ ಎಂತಹ ಹೀನ ಕ್ರೌರ್ಯವೂ ದಾಖಲೆಯೇ ಇಲ್ಲದೇ ಮುಚ್ಚಿಹೋಗಿ ಬಿಡಬಹುದೆನ್ನುವುದನ್ನು 1983ರ ಫೆಬ್ರವರಿಯಲ್ಲಿ ಅಸ್ಸಾಂನ ನೆಲ್ಲಿಯಲ್ಲಿ ಕೋಮು ಗಲಭೆಗೆ ಬಲಿಯಾದವರ ಅಂಕಿ ಸಂಖ್ಯೆಗಳು ದಾಖಲೆಗೇ ಸಿಗದಂತೆ ಕಾಣೆಯಾಗಿರುವುದನ್ನು ಉಲ್ಲೇಖಿಸುತ್ತಾರೆ.
ಗುಜರಾತ್ ರಾಜ್ಯದ ಜನಸಂಖ್ಯೆಯಲ್ಲಿ ಶೇ. 10 ಇರುವ ಮುಸಲ್ಮಾನರು ಹೇಗೆ ಪರಿಸ್ಥಿತಿಯ ಕೈಗೊಂಬೆಗಳಾಗಿ ಬದುಕುವ ಹಂತಕ್ಕೆ ತಲುಪಿದ್ದಾರೆ ಮತ್ತು ವಿಚಿತ್ರವಾದ ನಿಯಂತ್ರಿತ ಅಸ್ತಿತ್ವದಲ್ಲಿ ಬದುಕುತ್ತಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಾರೆ.
ಇದರ ಜೊತೆಯೇ ಈ ನೆಲದಲ್ಲಿ ಹುಟ್ಟಿದ, ನೆಲವನ್ನು ನೆಲದ ಮೂಲ ಆಶಯದೊಂದಿಗೆ ಪ್ರೀತಿಸುವವರಿಗೆ ಇನ್ನೂ ಇಲ್ಲಿ ಉಳಿದಿರುವ ಭರವಸೆಯ ಬೆಳಕಿರಣಗಳನ್ನು ತೋರಿಸಲು ಮರೆಯುವುದಿಲ್ಲ. ಅಂತಹುದರಲ್ಲಿ ಒಂದು: ‘‘2006ರ ಮಾರ್ಚ್ 7ರಂದು ಹೋಳಿ ಹಬ್ಬದ ಒಂದು ವಾರ ಮೊದಲು ಗಂಗಾನದಿಯ ತೀರದ ಕಾಶಿ ನಗರದಲ್ಲಿ ಎರಡು ಕಡೆ ಬಾಂಬ್ ಸ್ಫೋಟವಾಗಿತ್ತು. ಇಡೀ ದೇಶ ಬೆಚ್ಚಿ ಬಿದ್ದಿತ್ತು. 23 ಜನರು ಬಾಂಬ್ ಸ್ಫೋಟಕ್ಕೆ ಬಲಿಯಾದರು. ಜನತೆ ಮುಂದಾಗುವುದನ್ನು ನೆನೆದು ತತ್ತರಿಸಿತ್ತು. ಆದರೆ ಸಂಗೀತ, ಕಾವ್ಯ, ಭಕ್ತಿ ಮತ್ತು ಧಾರ್ಮಿಕತೆಗೆ ಪ್ರಸಿದ್ಧವಾದ ಕಾಶಿಯಲ್ಲಿ ಪ್ರತೀಕಾರ ಭುಗಿಲೇಳಲಿಲ್ಲ. ಬಾಂಬ್ ಸ್ಫೋಟವಾದ 40 ನಿಮಿಷಗಳಲ್ಲಿ ಭಕ್ತರು ಅದೇ ಸಂಕಟ ವಿಮೋಚನ ದೇವಾಲಯದಲ್ಲಿ ತಮ್ಮ ದೇವರ ದರ್ಶನವನ್ನು ಮುಂದುವರಿಸಿದರು. ದೇವಾಲಯದ ಮಹಂತರು ಸಮಚಿತ್ತದಿಂದ, ಶಾಂತರೀತಿಯಲ್ಲಿ ದೇವಾಲಯದ ನಿತ್ಯ ಕೆಲಸಗಳನ್ನು ಮುಂದುವರಿಸಿ ಜಾತಿ ಧರ್ಮದ ಬೇದವಿಲ್ಲದೇ ಎಲ್ಲ ಭಕ್ತರಿಗೂ ದರ್ಶನಕ್ಕೆ ಅವಕಾಶ ಕಲ್ಪಿಸಿದರು. ಬಾಂಬ್ ಸ್ಫೋಟದ ಹಿಂದಿನ ಉದ್ದೇಶವನ್ನು ವಿಫಲಗೊಳಿಸಿದರು. ಆ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬರಲು ಪ್ರಯತ್ನಿಸಿದ ಧಾರ್ಮಿಕ ಮತ್ತು ರಾಜಕೀಯ ನಾಯಕರನ್ನು ದೂರ ಇರಿಸಿದರು. ಶಾಂತಿ ಮತ್ತು ಸಮಾಧಾನ ಕಾಯ್ದುಕೊಳ್ಳುವಂತೆ ಮಹಂತರು ನೀಡಿದ ಕರೆಯು ಇಡೀ ದೇಶದಲ್ಲಿ ಉಬ್ಬರವನ್ನು ಇಳಿಸಿಬಿಟ್ಟಿತು. ಕಾಶಿ ಬಾಂಬ್ ಸ್ಫೋಟದ ನಂತರ ಸಿಟಿಝನ್ಸ್ ಫಾರ್ ಜಸ್ಟೀಸ್ ಸಂಸ್ಥೆಯು ಮಹಂತರನ್ನು ಮುಂಬೈಗೆ ಆಹ್ವಾನಿಸಿತ್ತು. ಅಲ್ಲಿ ಅವರು ಮತ್ತು ಪಂಜಾಬಿನ ಮಫ್ತಿ ಅವರು ಜಂಟಿಯಾಗಿ ಬಾಂಬ್ ಸ್ಫೋಟ, ಗುಂಪು ಗಲಭೆ ಮತ್ತು ದ್ವೇಷಪೂರಿತ ಹಿಂಸಾಚಾರವನ್ನು ಕೊನೆಗೊಳಿಸುವಂತೆ ಗಟ್ಟಿ ಸ್ವರದಲ್ಲಿ ಕರೆ ನೀಡಿದ್ದರು. ಒಂದು ದೇಶದ ಪ್ರಜೆಯಾಗುವುದು ಎಂದರೆ ಇದೇ, ಸಂವಿಧಾನದ ಅನುಸಾರವೇ ಆಡಳಿತ ನಡೆಯುವಂತೆ ಎಚ್ಚರ ವಹಿಸುವುದು, ಆಗ್ರಹಿಸುವುದು ಹಾಗೂ ಅದಕ್ಕೆ ಬೇಕಾದ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುವುದು’’ ಈ ಘಟನೆಯನ್ನು ತಮ್ಮ ಪುಸ್ತಕದಲ್ಲಿ ತೀಸ್ತಾ ದಾಖಲಿಸುತ್ತಾರೆ ಮತ್ತು ನಮ್ಮೆದೆಯೊಳಗೆ ಭರವಸೆಯ ಬೆಳಕು ನಂದದಂತೆ ಕಂದೀಲು ಹಚ್ಚುತ್ತಾರೆ.
ಗಾಂಧಿ ಹುಟ್ಟಿದ ನಾಡಿನಲ್ಲಿ ಹಿಂಸೆ ವಿಜೃಂಭಿಸಿದ ವಿಷಯ ಅಚಾನಕ್ ಸಂಭವಿಸಿದುದಲ್ಲ ಎಂಬುದನ್ನು ಅದನ್ನು ಸೂಕ್ಷ್ಮವಾಗಿ ಗಮನಿಸಿದವರು ಅರ್ಥ ಮಾಡಿಕೊಳ್ಳಬಲ್ಲರು. ಹಾಗೆ ಅರ್ಥ ಮಾಡಿಕೊಂಡ ಮತ್ತು ಪ್ರಭುತ್ವವೇ ಪ್ರಾಯೋಜಿಸಿದ ಹಿಂಸಾಕಾಂಡಕ್ಕೆ ಬಲಿಯಾದವರನ್ನು ಪ್ರತ್ಯಕ್ಷ ಕಂಡದ್ದನ್ನು ಕಂಡ ಹಾಗೆ ವರದಿ ಮಾಡಿದ್ದಷ್ಟೇ ಅಲ್ಲದೇ ಸಾಮೂಹಿಕ ಹತ್ಯಾಕಾಂಡಕ್ಕೆ ನ್ಯಾಯ ಒದಗಿಸಲು ಕಡು ಕಷ್ಟಗಳ ಮಧ್ಯೆಯೇ ಹೆಣಗುತ್ತಿರುವ ತೀಸ್ತಾ ನಮ್ಮೆದುರಿನ ಭರವಸೆಯ ಬೆಳಕು. ತಾನೊಬ್ಬಳು ಪತ್ರಕರ್ತೆ, ತನ್ನ ಕೆಲಸ ವರದಿ ಮಾಡುವುದಷ್ಟೆ, ಅಲ್ಲಿಯೂ ಅಪರಾಧ ಮಾಡಿದವರಿಗೆ ಹೆಚ್ಚು ಮುಜುಗರವಾಗದಂತೆ ತೆಳುವಾಗಿ ಒಂದಿಷ್ಟು ದಾಖಲಿಸಿದರಾಯಿತೆನ್ನುವ ಹಗುರ ಧೋರಣೆಯನ್ನು ಎಲ್ಲಿಯೂ ಅನುಸರಿಸದೆ, ವಸ್ತುನಿಷ್ಠ ಮತ್ತು ಸತ್ಯನಿಷ್ಠ ವರದಿಗಾರಿಕೆಯನ್ನು ಮಾಡಿದ್ದಷ್ಟೇ ಅಲ್ಲದೇ ತಾವೇ ಹೊರತಂದ ‘ಕಮ್ಯುನಲಿಸಂ ಕಾಂಬ್ಯಾಟ್’ ನಿಯತಕಾಲಿಕದ ಮೂಲಕ ಹಿಂಸಾಕಾಂಡದ ಬೇರುಗಳನ್ನೇ ಜಗತ್ತಿನ ಮುಂದಿಟ್ಟರು. ಇದರಿಂದಾಗಿ ಜೀವ ಬೆದರಿಕೆಯೂ ಸೇರಿದಂತೆ ಹಲವು ರೀತಿಯ ಕಿರುಕುಳಗಳನ್ನು ಎದುರಿಸುತ್ತಲೇ ಮುನ್ನುಗ್ಗುತ್ತಿದ್ದಾರೆ. ಈ ಕೃತಿ ಹೊರಬರುವ ಹೊತ್ತಿನಲ್ಲಿಯೆ ಗುಜರಾತ್ ಕೋಮುಗಲಭೆಗಳ ದಿನಗಳಲ್ಲಿ ಸಾಮೂಹಿಕ ಅತ್ಯಾಚಾರಕ್ಕೀಡಾಗಿದ್ದ ಬಿಲ್ಕಿಸ್ ಬಾನು ಎಂಬ ಮಹಿಳೆಗೆ 50 ಲಕ್ಷ ರೂಪಾಯಿಗಳ ಪರಿಹಾರ ಮತ್ತು ವಾಸಕ್ಕೆ ಅವಳ ಆಯ್ಕೆಯ ಪ್ರದೇಶದಲ್ಲಿ ಅನುಕೂಲ ಕಲ್ಪಿಸಿ ಕೊಡಲು ಗುಜರಾತ್ ಸರಕಾರಕ್ಕೆ ಸರ್ವೋಚ್ಛ ನ್ಯಾಯಾಲಯದ ಆದೇಶ ಹೊರ ಬಿದ್ದಿದೆ. ಇದೂ ಒಂದು ಸಣ್ಣ ಸಮಾಧಾನ ನೀಡುವ ಸಂಗತಿಯೇ.
ಈ ಕಥಾನಕವನ್ನು ಪ್ರಜಾಪ್ರಭುತ್ವದ ಉಳಿವಿಗಾಗಿನ ಸಂಘರ್ಷದ ದಾಖಲೆಯೆನ್ನಬೇಕು. ಅಂತಹ ಒಂದು ಅನುಭವದ ಕಣಜ ‘‘ಸಂವಿಧಾನದ ಕಾಲಾಳು’’ ಮೇ 18 ಬುದ್ಧ ಪೂರ್ಣಿಮೆಯಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಕ್ಸೇವಿಯರ್ ಹಾಲ್, ಸೈಂಟ್ ಜೋಸೆಫ್ಸ್ ಕಾಲೇಜ್, ಪಿ. ಜಿ. ಬ್ಲಾಕ್, ಶಾಂತಿನಗರದಲ್ಲಿ ಬಿಡ�

Writer - ವಿಮಲಾ ಕೆ. ಎಸ್.

contributor

Editor - ವಿಮಲಾ ಕೆ. ಎಸ್.

contributor

Similar News

ಜಗದಗಲ
ಜಗ ದಗಲ