ಬಗ್ದಾದ್ ರಾಯಭಾರ ಕಚೇರಿ ತೆರವಿಗೆ ಆದೇಶ: ಇರಾನ್-ಅಮೆರಿಕ ನಡುವಿನ ಉದ್ವಿಗ್ನತೆ ತಾರಕಕ್ಕೆ

Update: 2019-05-15 18:35 GMT

ವಾಶಿಂಗ್ಟನ್, ಮೇ 15: ಇರಾಕ್ ರಾಜಧಾನಿ ಬಗ್ದಾದ್‌ನಲ್ಲಿರುವ ತನ್ನ ರಾಯಭಾರ ಕಚೇರಿ ಮತ್ತು ಅರ್ಬಿಲ್‌ನಲ್ಲಿರುವ ಕೌನ್ಸುಲೇಟ್ ಕಚೇರಿಯನ್ನು ತುರ್ತು ಸೇವೆಗಳ ಸಿಬ್ಬಂದಿಯನ್ನು ಹೊರತುಪಡಿಸಿ ಇತರ ಎಲ್ಲ ಸಿಬ್ಬಂದಿ ತೆರವುಗೊಳಿಸುವಂತೆ ಅಮೆರಿಕದ ವಿದೇಶಾಂಗ ಇಲಾಖೆ ಬುಧವಾರ ಆದೇಶ ಹೊರಡಿಸಿದೆ.

ಇರಾಕ್‌ನ ನೆರೆಯ ದೇಶ ಇರಾನ್ ಮತ್ತು ಅಮೆರಿಕಗಳ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ ಈ ಬೆಳವಣಿಗೆ ನಡೆದಿದೆ.

ವಲಯದಲ್ಲಿ ದಾಳಿ ನಡೆಸಲು ಇರಾನ್ ಸಿದ್ಧತೆ ನಡೆಸುತ್ತಿದೆ ಎಂಬುದಾಗಿ ಆರೋಪಿಸಿರುವ ಅಮೆರಿಕ, ಇತ್ತೀಚಿನ ದಿನಗಳಲ್ಲಿ ಆ ದೇಶದ ಮೇಲಿನ ಒತ್ತಡವನ್ನು ಹೆಚ್ಚಿಸುತ್ತಿದೆ. ಅದೇ ವೇಳೆ, ಮಧ್ಯಪ್ರಾಚ್ಯದಲ್ಲಿ ಅಮೆರಿಕವು ತನ್ನ ಸೇನಾ ಉಪಸ್ಥಿತಿಯನ್ನು ಹೆಚ್ಚಿಸಿದೆ. ಇತ್ತೀಚೆಗೆ ಅದು ವಿಮಾನವಾಹಕ ಯುದ್ಧ ನೌಕೆ ‘ಯುಎಸ್‌ಎಸ್ ಅಬ್ರಹಾಂ ಲಿಂಕನ್’ ಮತ್ತು ಬಿ-52 ಬಾಂಬರ್ ವಿಮಾನಗಳನ್ನು ಈ ವಲಯದಲ್ಲಿ ನಿಯೋಜಿಸಿರುವುದನ್ನು ಸ್ಮರಿಸಬಹುದಾಗಿದೆ.

‘‘ಹಲವಾರು ಭಯೋತ್ಪಾದಕ ಮತ್ತು ಬಂಡುಕೋರ ಗುಂಪುಗಳು ಇರಾಕ್‌ನಲ್ಲಿ ಸಕ್ರಿಯವಾಗಿವೆ ಹಾಗೂ ಇರಾಕ್ ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ನಿಯಮಿತವಾಗಿ ದಾಳಿ ನಡೆಸುತ್ತಿವೆ’’ ಎಂಬುದಾಗಿ ಅಮೆರಿಕ ಹೊರಡಿಸಿರುವ ಪ್ರಯಾಣ ಸಲಹೆಯೊಂದು ತಿಳಿಸಿದೆ.

‘‘ಅಮೆರಿಕ ವಿರೋಧಿ ಜನಾಂಗೀಯವಾದಿ ಬಂಡುಕೋರರು ಕೂಡ ಇರಾಕ್‌ನಾದ್ಯಂತ ಅಮೆರಿಕ ನಾಗರಿಕರು ಮತ್ತು ಪಾಶ್ಚಾತ್ಯ ಕಂಪೆನಿಗಳಿಗೆ ಬೆದರಿಕೆಯಾಗಬಹುದು’’ ಎಂದು ಅದು ಎಚ್ಚರಿಸಿದೆ.

ಇರಾನ್ ಬೆಂಬಲಿತ ಶಕ್ತಿಗಳು ಪರೋಕ್ಷ ಯುದ್ಧದಲ್ಲಿ ತೊಡಗಿವೆ ಎಂದು ಆರೋಪಿಸಿ ಕಳೆದ ವರ್ಷ ಅಮೆರಿಕವು ದಕ್ಷಿಣ ಇರಾಕ್‌ನ ಬಸ್ರಾ ನಗರದಲ್ಲಿರುವ ತನ್ನ ಕೌನ್ಸುಲೇಟ್ ಕಚೇರಿಯನ್ನು ಮುಚ್ಚಿತ್ತು ಹಾಗೂ ಯಾವುದೇ ಹಾನಿ ನಡೆದರೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಅದು ಎದುರಾಳಿಗೆ ಎಚ್ಚರಿಕೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News