ಗರಿಷ್ಠ ಮೊತ್ತದ ಹಣಾಹಣಿಯಲ್ಲಿ ಇಂಗ್ಲೆಂಡ್ ಗೆ ಒಲಿದ ಜಯ

Update: 2019-05-16 03:55 GMT

ಬ್ರಿಸ್ಟೋಲ್, ಮೇ 15: ಜಾನ್ ಬೈರ್‌ಸ್ಟೋವ್ ಸಿಡಿಸಿದ ಭರ್ಜರಿ ಶತಕದ ಸಹಾಯದಿಂದ ಆತಿಥೇಯ ಇಂಗ್ಲೆಂಡ್ ತಂಡ ಪಾಕಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು ಆರು ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಇಂಗ್ಲೆಂಡ್ ಟಾಸ್ ಜಯಿಸಿದರೆ ಸಾಮಾನ್ಯವಾಗಿ ಬ್ಯಾಟಿಂಗ್ ಮಾಡಲು ಮೊದಲ ಆದ್ಯತೆ ನೀಡುತ್ತದೆ. ಆದರೆ, ನಾಯಕ ಇಯಾನ್ ಮೊರ್ಗನ್ ಮಂಗಳವಾರ ಇಲ್ಲಿ ಟಾಸ್ ಜಯಿಸಿ ಪಾಕಿಸ್ತಾನವನ್ನು ಬ್ಯಾಟಿಂಗ್‌ಗೆ ಇಳಿಸಿದರು. ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್ ತಂಡ ಇಮಾಮ್‌ವುಲ್ ಹಕ್ ಜೀವನಶ್ರೇಷ್ಠ ಬ್ಯಾಟಿಂಗ್(151)ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 358 ರನ್ ಗಳಿಸಲು ಶಕ್ತವಾಯಿತು. ಎರಡನೇ ಏಕದಿನ ಪಂದ್ಯದಲ್ಲಿ ಔಟಾಗದೆ 110 ರನ್ ಗಳಿಸಿದ್ದ ಜೋಸ್ ಬಟ್ಲರ್‌ಗೆ ವಿಶ್ರಾಂತಿ ನೀಡಿದ್ದ ಇಂಗ್ಲೆಂಡ್‌ಗೆ ಆರಂಭದಲ್ಲಿ ಈ ಮೊತ್ತ ಕಠಿಣವಾಗಿ ಕಂಡಿದ್ದು ಸುಳ್ಳಲ್ಲ. ಆದರೆ, ಬೈರ್‌ಸ್ಟೋವ್(128) ಆರಂಭಿಕ ಜೊತೆಗಾರ ಜೇಸನ್ ರಾಯ್(76)ಅವರೊಂದಿಗೆ 18 ಓವರ್‌ನೊಳಗೆ 159 ರನ್ ಕಲೆ ಹಾಕಿ ರನ್ ಚೇಸಿಂಗ್‌ಗೆ ಭದ್ರ ಬುನಾದಿ ಹಾಕಿಕೊಟ್ಟರು. ಇಂಗ್ಲೆಂಡ್‌ಗೆ ಗೆಲುವಿನ ಆಸೆ ಮೂಡಿಸಿದರು.

43 ರನ್ ಗಳಿಸಿದ ಟೆಸ್ಟ್ ನಾಯಕ ಜೋ ರೂಟ್ ಇನ್ನೂ 31 ಎಸೆತಗಳು ಬಾಕಿ ಇರುವಾಗಲೇ ಇಂಗ್ಲೆಂಡ್‌ನ್ನು ಗೆಲುವಿನ ದಡ ಸೇರಿಸಿದರು. ಇಂಗ್ಲೆಂಡ್ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಬ್ಯಾಟಿಂಗ್‌ನಲ್ಲಿ ದ್ವಿತೀಯ ಗರಿಷ್ಠ ಮೊತ್ತ ಕಲೆಹಾಕಿ ಗೆಲುವಿನ ನಗೆ ಬೀರಿತು. 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಂಪಾದಿಸಿತು.

ಪಾಕಿಸ್ತಾನದ ಅನನುಭವಿ ಬೌಲಿಂಗ್ ದಾಳಿಯನ್ನು ಚೆನ್ನಾಗಿ ದಂಡಿಸಿದ ಬೈರ್‌ಸ್ಟೋವ್ 74 ಎಸೆತಗಳಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಹಾಯದಿಂದ 7ನೇ ಏಕದಿನ ಶತಕ ಪೂರೈಸಿದರು. ಪಾಕ್ ವಿರುದ್ಧ ಮೊದಲ ಬಾರಿ ಶತಕ ಗಳಿಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡ ಕ್ರಿಸ್ ವೋಕ್ಸ್ ದಾಳಿಗೆ ಸಿಲುಕಿ 27 ರನ್‌ಗೆ 2 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ ತಂಡಕ್ಕೆ ಆಸರೆಯಾದ ಎಡಗೈ ಆರಂಭಿಕ ಆಟಗಾರ ಇಮಾಮ್ ತಾನಾಡಿದ 27ನೇ ಪಂದ್ಯದಲ್ಲಿ 97 ಎಸೆತಗಳಲ್ಲಿ 6ನೇ ಶತಕ ಸಿಡಿಸಿದರು. ಇಂಗ್ಲೆಂಡ್ ಎದುರು ಚೊಚ್ಚಲ ಶತಕ ಗಳಿಸಿದರು.

 23ರ ಹರೆಯದ ಇಮಾಮ್ 151 ರನ್ ಗಳಿಸಿ ಸ್ಯಾಮ್ ಕರನ್‌ಗೆ ವಿಕೆಟ್ ಒಪ್ಪಿಸಿದರು. ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಪಾಕ್ ಆಟಗಾರ ಎನಿಸಿಕೊಂಡರು. ಸೌಥಾಂಪ್ಟನ್‌ನಲ್ಲಿ 138 ರನ್ ಗಳಿಸಿದ್ದ ಸಹ ಆಟಗಾರ ಫಾಕರ್ ಝಮಾನ್ ದಾಖಲೆಯನ್ನು ಮುರಿದರು.

10 ಓವರ್‌ಗಳಲ್ಲಿ 67 ರನ್‌ಗೆ 4 ವಿಕೆಟ್‌ಗಳನ್ನು ಉರುಳಿಸಿದ ಕ್ರಿಸ್ ವೋಕ್ಸ್ ಮುಂಬರುವ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಅಂತಿಮ-15ರ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ವಿಶ್ವಾಸ ಹೆಚ್ಚಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News