ಕರ್ಫ್ಯೂ ಉಲ್ಲಂಘಿಸಿ ನೆರೆಮನೆಯ ಗರ್ಭಿಣಿಯನ್ನು ಆಸ್ಪತ್ರೆಗೆ ತಲುಪಿಸಿದ ಮಕ್ಬೂಲ್ ಹುಸೇನ್ !

Update: 2019-05-16 06:02 GMT
ಫೋಟೊ ಕೃಪೆ: hindustantimes

ಗುವಾಹತಿ: ಕೋಮು ಸಂಘರ್ಷದ ಉದ್ವಿಗ್ನ ಪರಿಸ್ಥಿತಿಯಲ್ಲಿ ಕರ್ಫ್ಯೂ ಉಲ್ಲಂಘಿಸಿ, ಆಟೊ ಚಾಲನೆ ಮಾಡಿಕೊಂಡು ಹೋಗಿ ನೆರೆಮನೆಯ ಹಿಂದೂ ಗರ್ಭಿಣಿಯನ್ನು ಸಕಾಲಕ್ಕೆ ಆಸ್ಪತ್ರೆಗೆ ಸೇರಿಸಿ ತಾಯಿ ಹಾಗೂ ಮಗುವಿನ ಪ್ರಾಣ ರಕ್ಷಿಸಿದ ಮಕ್ಬೂಲ್ ಹುಸೇನ್ ಸರ್ವತ್ರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ಘಟನೆ ಕಳೆದ ವಾರ ಅಸ್ಸಾಂನ ಹೈಲಕಂಡಿಯಲ್ಲಿ ನಡೆದಿದ್ದು, ತಮ್ಮ ಪ್ರಾಣ ಪಣಕ್ಕಿಟ್ಟು ನೆರೆಮನೆಯ ವ್ಯಕ್ತಿ ಹಾಗೂ ಆತನ ತುಂಬು ಗರ್ಭಿಣಿ ಪತ್ನಿಯನ್ನು ಆಟೊದಲ್ಲಿ ಕುಳ್ಳಿರಿಸಿಕೊಂಡು ಚಾಲನೆ ಮಾಡಿಕೊಂಡು ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ಸೇರಿಸುವ ಮೂಲಕ ಮಕ್ಬೂಲ್ ಹುಸೇನ್ ಲಸ್ಕರ್ ಕೋಮು ಸಾಮರಸ್ಯಕ್ಕೆ ಹೊಸ ಭಾಷ್ಯ ಬರೆದಿದ್ದಾರೆ.

ರವಿವಾರ ನಡೆದ ಈ ಘಟನೆ ಬುಧವಾರ ಸಂಜೆ ತಡವಾಗಿ ಬೆಳಕಿಗೆ ಬಂದಿದೆ. ಈ ವಿಷಯ ತಿಳಿದ ಹೈಲಕಂಡಿ ಜಿಲ್ಲಾ ಅಧಿಕಾರಿಗಳು ಈ ಅದೃಷ್ಟವಂತ ಪೋಷಕರ ಮನೆಗೆ ಭೇಟಿ ನೀಡಿದ್ದಾರೆ. ಕರ್ಫ್ಯೂ ಇದ್ದ ಸಂದರ್ಭದಲ್ಲಿ ಪತ್ನಿ ನಂದಿತಾಗೆ ಹೆರಿಗೆ ನೋವು ಕಾಣಿಸಿಕೊಂಡಾಗ ರುಬಾನ್ ದಾಸ್ ಆತಂಕಕ್ಕೆ ಒಳಗಾದರು. ಪತ್ನಿಯನ್ನು ರಾಜೇಶ್ವರಪುರ ಗ್ರಾಮದಿಂದ ಪಟ್ಟಣದ ಎಸ್.ಕೆ.ರಾಯ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲು ಯಾವ ಅಂಬುಲೆನ್ಸ್ ಸೇವೆ ಕೂಡಾ ಇರಲಿಲ್ಲ.

ಬಂಧುಗಳು, ಸಂಬಂಧಿಗಳಿಗೆ ಕರೆ ಮಾಡಿದಾಗಲೂ ಯಾವ ನೆರವೂ ಸಿಗಲಿಲ್ಲ. ಈ ವಿಷಯ ಪಕ್ಕದ ಮನೆಯ ಸ್ನೇಹಿತ ಮಕ್ಬೂಲ್ ಹುಸೇನ್ ಲಸ್ಕರ್ ಕಿವಿಗೆ ಬಿತ್ತು. ಕ್ಷಣ ಮಾತ್ರವೂ ಯೋಚಿಸದೇ ತಮ್ಮ ಜೀವ ಪಣಕ್ಕಿಟ್ಟು, ರುಬಾನ್ ಹಾಗೂ ಅವರ ಪತ್ನಿಯನ್ನು ತಮ್ಮ ಆಟೊದಲ್ಲಿ ಕರೆದೊಯ್ಯುವ ಹೊಣೆಯನ್ನು ಲಸ್ಕರ್ ಹೊತ್ತುಕೊಂಡರು.

"ಸಂಜೆ 5ರ ಸುಮಾರಿಗೆ 20 ನಿಮಿಷ ಪ್ರಯಾಣದ ಬಳಿಕ ಆಸ್ಪತ್ರೆಗೆ ತಲುಪಿದೆವು. ಆಸ್ಪತ್ರೆ ತಲುಪಿ 10 ನಿಮಿಷಗಳಲ್ಲಿ ಹೆರಿಗೆಯಾಯಿತು" ಎಂದು ಮಕ್ಬೂಲ್ ವಿವರಿಸಿದರು. ಮಕ್ಬೂಲ್ ನೆರವಿಗೆ ಯಾವ ರೀತಿ ಕೃತಜ್ಞತೆ ಸಲ್ಲಿಸಬೇಕು ಎಂದೇ ತೋಚದ ರುಬಾನ್, ಸ್ನೇಹಿತನನ್ನು ಆಲಂಗಿಸಿಕೊಂಡು ಕೃತಜ್ಞತೆ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಕ್ಬೂಲ್, ಕೃತಜ್ಞತೆ ಹೇಳಬೇಕಾದ್ದು ದೇವರಿಗೆ ಎಂದು ಹೇಳಿದರು. ಕರ್ಫ್ಯೂ ಸಂದರ್ಭದಲ್ಲಿ ಹುಟ್ಟಿದ ಮಗುವಿಗೆ ರುಬಾನ್ ಹಾಗೂ ಪತ್ನಿ ಶಾಂತಿ ಎಂದು ನಾಮಕರಣ ಮಾಡಿದ್ದಾರೆ. ಇದು ಹಿಂದೂ- ಮುಸ್ಲಿಂ ಬ್ರಾತೃತ್ವಕ್ಕೆ ಒಳ್ಳೆಯ ನಿದರ್ಶನ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಭಾಸ್ಕರ್ ದಾಸ್ ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News