4 ರನ್ ಗಳಿಗೆ ಆಲೌಟ್ ಆದ ತಂಡ: ಎಲ್ಲರ ಸ್ಕೋರ್ ‘0’!

Update: 2019-05-16 06:48 GMT

ಕೊಚ್ಚಿ, ಮೇ 16: ಮಲಪ್ಪುರಂನ ಪೆರಿಂದಲ್ ಮನ್ನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಅಂತರ್ ಜಿಲ್ಲಾ ಕ್ರಿಕೆಟ್ ಪಂದ್ಯದಲ್ಲಿ ವಯನಾಡ್ ತಂಡದ ದಾಳಿಗೆ ಸಿಲುಕಿ ಕಾಸರಗೋಡು ಅಂಡರ್ -19 ಯುವತಿಯರ ತಂಡ  4 ರನ್ ಗಳಿಗೆ ಆಲೌಟಾಗಿದೆ.

ತಂಡವೊಂದು ಗರಿಷ್ಠ ರನ್ ಸಂಪಾದಿಸಿ ದಾಖಲೆ ನಿರ್ಮಿಸುವುದು ಸಹಜ. ಆದರೆ ಕಾಸರಗೋಡಿನ  ತಂಡ ಕಳಪೆ ಪ್ರದರ್ಶನದೊಂದಿಗೆ ದಾಖಲೆ ಮಾಡಿದೆ. ವಯನಾಡು ತಂಡ ಎದುರಾಳಿ ಕಾಸರಗೋಡು ತಂಡವನ್ನು 4 ರನ್ ಗಳಿಗೆ  ಆಲೌಟ್ ಮಾಡಿ ಹೊಸ ದಾಖಲೆ ನಿರ್ಮಿಸಿದೆ.

ಕಾಸರಗೋಡಿನ ಆಟಗಾರ್ತಿಯರಿಗೆ ತಮ್ಮ ವೈಯಕ್ತಿಕ ಖಾತೆಗೆ 1 ರನ್ ನ್ನು ಸೇರಿಸಲು ಸಾಧ್ಯವಾಗಲಿಲ್ಲ. ಆದರೆ ಇತರೆ 4 ರನ್ ಗಳನ್ನು ವಯನಾಡು ಆಟಗಾರ್ತಿಯರು ಬಿಟ್ಟುಕೊಟ್ಟರು. 0,0, 0, 0, 0, 0, 0,0, 0,0 ಹೀಗೆ ಆಟಗಾರ್ತಿಯರು  ಖಾತೆ ತೆರೆಯದೆ ಪೆವಿಲಿಯನ್ ಸೇರಿದರು. ಓರ್ವ ಆಟಗಾರ್ತಿ ಖಾತೆ ತೆರೆಯದೆ ಅಜೇಯರಾಗಿ ಉಳಿದರು.

ಈ ಕಾರಣದಿಂದಾಗಿ ವಯನಾಡು ತಂಡ ಗೆಲುವಿಗೆ 5 ರನ್ ಗಳ ಸವಾಲು ಪಡೆದಿತ್ತು. ಒಂದೇ ಓವರ್ ನಲ್ಲಿ ವಿಕೆಟ್ ನಷ್ಟವಿಲ್ಲದೆ ವಯನಾಡು ತಂಡ ಗೆಲುವಿನ ದಡ ಸೇರಿತು.

ಕಾಸರಗೋಡು ತಂಡದ ನಾಯಕಿ ಎಸ್ .ಅಕ್ಷತಾ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಇನಿಂಗ್ಸ್ ಆರಂಭಿಸಿದ ಕೆ.ವೀಕ್ಷೀತಾ ಮತ್ತು ಎಸ್.ಚೈತ್ರಾ ಎರಡು ಓವರ್ ಗಳನ್ನು ಎದುರಿಸಿದರೂ, ರನ್ ಜಮೆಯಾಗಲಿಲ್ಲ. ಮೂರನೇ ಓವರ್ ನಲ್ಲಿ ವಯನಾಡು ತಂಡದ ನಾಯಕಿ ನಿತ್ಯಾ ಲೋರ್ಡ್ 3 ವಿಕೆಟ್ ಗಳನ್ನು ಉಡಾಯಿಸುವ ಮೂಲಕ ಕಾಸರಗೋಡು ತಂಡದ ಆಟಗಾರ್ತಿಯರ ಪೆವಿಲಿಯನ್ ಪರೇಡ್ ಆರಂಭಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News