ಪ್ರಧಾನಿ ರ್ಯಾಲಿಗೆ ಅನುಮತಿ ನೀಡಿದ ಚು.ಆಯೋಗ ಬೇರೆಯವರ ಪ್ರಚಾರಕ್ಕೆ ನಿಷೇಧ ಹೇರಿದ್ದೇಕೆ: ಮಮತಾ, ಯೆಚೂರಿ ಪ್ರಶ್ನೆ

Update: 2019-05-16 08:24 GMT

ಕೊಲ್ಕತ್ತಾ, ಮೇ 16: ಮಂಗಳವಾರ ಸಂಜೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ರೋಡ್ ಶೋ ಸಂದರ್ಭ ಉಂಟಾದ ಹಿಂಸಾಚಾರದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಗುರುವಾರ ರಾತ್ರಿ 10 ಗಂಟೆಯಿಂದ ಪಶ್ಚಿಮ ಬಂಗಾಳದಲ್ಲಿ ಪ್ರಚಾರ ಕಾರ್ಯ ನಿಷೇಧಿಸಿರುವುದನ್ನು ಪ್ರಶ್ನಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ “ಪ್ರಧಾನಿ ನರೇಂದ್ರ ಮೋದಿಯ ಎರಡು ರ್ಯಾಲಿಗಳನ್ನು ಅನುಮತಿಸಲೆಂದೇ ಪ್ರಚಾರ ಕಾರ್ಯದ ಅಂತಿಮ ಗಡುವನ್ನು ಇಂದು ರಾತ್ರಿ 10 ಗಂಟೆಗೆ ನಿಗದಿ ಪಡಿಸಲಾಗಿದೆಯೇ?'' ಎಂದು ಪ್ರಶ್ನಿಸಿದ್ದಾರೆ.

“ನಿಷೇಧ 72 ಗಂಟೆಗಳಿಗೆ ಅನ್ವಯವಾಗಬೇಕೆಂದಿದ್ದರೆ ಅದೇಕೆ ಇಂದು ರಾತ್ರಿ 10 ಗಂಟೆಯಿಂದ ಅನ್ವಯವಾಗುತ್ತದೆ?, ಚುನಾವಣಾ ಆಯೋಗ ಮೊತ್ತ ಮೊದಲು ಹಿಂಸಾಚಾರಕ್ಕೆ ಕಾರಣರಾದ ಬಿಜೆಪಿಯ ಮತ್ತು ಟಿಎಂಸಿಯ ಕೆಲವೊಂದು ಮಂದಿಯ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು ?, ಕ್ರಮವೇಕೆ ಕೈಗೊಳ್ಳಲಾಗಿಲ್ಲ ?'' ಎಂದು ಯಚೂರಿ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

“ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಹಾಗೂ ಕಾನೂನು ಸುವ್ಯವಸ್ಥೆಯು ವೈಫಲ್ಯದ ಬಗ್ಗೆ ನಾವು ನೀಡಿದ ಹಲವು ದೂರುಗಳು ಹಾಗೂ ಪತ್ರಗಳಿಗೆ ಯಾವುದೇ ಪ್ರತಿಕ್ರಿಯೆಯಿರಲಿಲ್ಲ'' ಎಂದೂ ಅವರು ಆರೋಪಿಸಿದ್ದಾರೆ.

ಈ ಕುರಿತಂತೆ ಬುಧವಾರವೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆಯಿಲ್ಲ. ಚುನಾವಣಾ ಆಯೋಗದ ಕ್ರಮ ಅಸಂವಿಧಾನಿಕ'' ಎಂದಿದ್ದರಲ್ಲದೆ ಚುನಾವಣಾ ಆಯೋಗ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಪರ ಇದೆ ಎಂದು ಆರೋಪಿಸಿದ್ದರು.

“ಪಶ್ಚಿಮ ಬಂಗಾಳದ ಸ್ಥಿತಿ ಅಭೂತಪೂರ್ವವೆಂದು ಹೇಳುವ ಚುನಾವಣಾ ಆಯೋಗ ಪ್ರಧಾನಿ ತಮ್ಮ ಸಾರ್ವಜನಿಕ ಸಭೆಗಳನ್ನು  ಪೂರ್ಣಗೊಳಿಸಲು ಕಾಯುವುದು  ಅಭೂತಪೂರ್ವವಲ್ಲವೇ?'' ಎಂದು ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಪ್ರತಿಕ್ರಿಯಿಸಿ, “ಚುನಾವಣಾ ಆಯೋಗ 324 ವಿಧಿ ಪ್ರಯೋಗಿಸಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಇಂದು ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಕರಾಳ ದಿನ'' ಎಂದು ಟ್ವೀಟ್ ಮಾಡಿದ್ದಾರೆ.

ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಪ್ರತಿಕ್ರಿಯಿಸಿ ಚುನಾವಣಾ ಆಯೋಗ ಒತ್ತಡದಲ್ಲಿ ಕಾರ್ಯಾಚರಿಸುತ್ತಿದೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News