ಮಧ್ಯಪ್ರದೇಶ: ಕುದುರೆ ಮೇಲೇರಿ ಬಂದ ದಲಿತ ವರನಿಗೆ ಥಳಿತ

Update: 2019-05-16 15:34 GMT
ಸಾಂದರ್ಭಿಕ ಚಿತ್ರ

ಭೋಪಾಲ, ಮೇ 16: ವಿವಾಹ ದಿಬ್ಬಣದ ಸಂದರ್ಭ ದಲಿತ ಯುವಕ ಕುದುರೆ ಮೇಲೇರಿ ಬಂದಿರುವುದು ಮತ್ತು ದಿಬ್ಬಣದಲ್ಲಿ ಪಟಾಕಿ ಸಿಡಿಸಿರುವುದನ್ನು ಆಕ್ಷೇಪಿಸಿದ ಮೇಲ್ವರ್ಗದ ಜನರ ತಂಡವೊಂದು ವರನ ಮೇಲೆ ಹಲ್ಲೆ ನಡೆಸಿರುವ ಘಟನೆ ಅಂಬೇಡ್ಕರ್ ಅವರ ಹುಟ್ಟೂರು ಭೋಪಾಲದ ಮಹೂ ನಗರದಲ್ಲಿ (ಅಂಬೇಡ್ಕರ್ ನಗರದಲ್ಲಿ ನಡೆದಿದೆ)

   ಗುಜರಾತ್‌ನ ಮೆಹ್ಸಾನಾದಲ್ಲಿ ದಲಿತ ಸಮುದಾಯದ ವರ ಕುದುರೆ ಮೇಲೇರಿ ದಿಬ್ಬಣ ಬಂದ ಹಿನ್ನೆಲೆಯಲ್ಲಿ ದಲಿತರಿಗೆ ಸಾಮಾಜಿಕ ಬಹಿಷ್ಕಾರದ ಬೆದರಿಕೆ ಒಡ್ಡಿರುವ ಘಟನೆ ನಡೆದ ಕೆಲವೇ ದಿನಗಳಲ್ಲಿ ಇದೇ ರೀತಿಯ ಘಟನೆ ಅಂಬೇಡ್ಕರ್ ಹುಟ್ಟೂರಿನಲ್ಲಿ ನಡೆದಿರುವುದಾಗಿ ಸಿಮ್ರೋಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರೋಹನ್ ಚೌಹಾಣ್ ಎಂಬ ದಲಿತ ಯುವಕನ ಮದುವೆಯ ಹಿನ್ನೆಲೆಯಲ್ಲಿ ಆತ ದಿಬ್ಬಣದಲ್ಲಿ ಕುದುರೆ ಮೇಲೇರಿ ಹೊರಟಿದ್ದ. ಇದನ್ನು ಆಕ್ಷೇಪಿಸಿದ್ದ ಮೇಲ್ಜಾತಿಯ ಕೆಲವರು ತಮ್ಮ ಮನೆ ಎದುರು ಪಟಾಕಿ ಸಿಡಿಸಬಾರದು ಎಂದು ಆತನಿಗೆ ಎಚ್ಚರಿಸಿದ್ದಾರೆ. ಬಳಿಕ ಸುಮಾರು 25 ಮಂದಿಯ ತಂಡವು ದಿಬ್ಬಣದ ಮೇಲೆ ಆಕ್ರಮಣ ನಡೆಸಿ ವರನ ಸಹಿತ ಹಲವರ ಮೇಲೆ ದೊಣ್ಣೆ ಮತ್ತು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಚೌಹಾಣ್ ಸಮೀಪದಲ್ಲಿದ್ದ ಸಿಮ್ರೋಲ್ ಪೊಲೀಸ್ ಠಾಣೆಗೆ ಓಡಿ ಆಶ್ರಯ ಪಡೆದಿದ್ದಾನೆ. ಬಳಿಕ ಪೊಲೀಸ್ ಭದ್ರತೆಯಲ್ಲಿ ವಿವಾಹದ ದಿಬ್ಬಣ ಸಾಗಿದೆ. ಮರುದಿನ ಭೀಮ್ ಸೇನೆಯ ಕಾರ್ಯಕರ್ತರೊಂದಿಗೆ ಪೊಲೀಸ್ ಠಾಣೆಗೆ ತೆರಳಿದ ಚೌಹಾಣ್ ತಪ್ಪಿತಸ್ತರ ವಿರುದ್ಧ ಎಸ್ಸಿ/ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾನೆ. ಅದರಂತೆ ಪೊಲೀಸರು ರಜಪೂತ ಸಮುದಾಯದ ನಾಲ್ವರನ್ನು ಬಂಧಿಸಿ ಎಸ್ಸಿ/ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News