ಅಮೆರಿಕದ ಪ್ರತಿಕ್ರಿಯೆ ನೋಡಿ ಖಶೋಗಿ ನೊಂದುಕೊಳ್ಳುತ್ತಿದ್ದರು: ಗೆಳತಿ ಹಾಟಿಸ್ ಸೆಂಗಿಝ್‌

Update: 2019-05-16 17:23 GMT

ವಾಶಿಂಗ್ಟನ್, ಮೇ 16: ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆಗೆ ಅಮೆರಿಕ ಪ್ರತಿಕ್ರಿಯಿಸಿದ ರೀತಿಯನ್ನು ಅವರ ಗೆಳತಿ ಹಾಟಿಸ್ ಸೆಂಗಿಝ್ ಬುಧವಾರ ಟೀಕಿಸಿದ್ದಾರೆ. ಈ ಅಪರಾಧದ ಅರ್ಥಪೂರ್ಣ ಪರಿಣಾಮಗಳನ್ನು ನಿವಾರಿಸಿಕೊಳ್ಳಲು ಸೌದಿ ಅರೇಬಿಯಕ್ಕೆ ಸಹಾಯ ಮಾಡುವ ಮೂಲಕ ಅಮೆರಿಕದ ಟ್ರಂಪ್ ಆಡಳಿತವು ಅಮೆರಿಕನ್ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ.

''ಖಶೋಗಿ ಯಾವತ್ತೂ ಅಮೆರಿಕವನ್ನು ಉನ್ನತ ಸ್ಥಾನದಲ್ಲಿಟ್ಟಿದ್ದರು. ಅದು ಯಥಾಸ್ಥಿತಿಯನ್ನು ಪ್ರಶ್ನಿಸಬಹುದಾದ ಹಾಗೂ ಸತ್ಯವನ್ನು ಹೇಳಿ ಜಯಿಸಬಹುದಾದ ಸ್ಥಳ ಎಂಬುದಾಗಿ ಹೇಳುತ್ತಿದ್ದರು'' ಎಂದು 'ವಾಶಿಂಗ್ಟನ್ ಪೋಸ್ಟ್' ಪತ್ರಿಕೆಯ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಹೇಳಿದರು. ಸೌದಿ ಅರೇಬಿಯ ತೊರೆದು ಅಮೆರಿಕಕ್ಕೆ ಪಲಾಯನಗೈದಿದ್ದ ಖಶೋಗಿ 'ವಾಶಿಂಗ್ಟನ್ ಪೋಸ್ಟ್' ಪತ್ರಿಕೆಗೆ ಅಂಕಣಗಳನ್ನು ಬರೆಯುತ್ತಿದ್ದರು.''ಅಮೆರಿಕದ ಪ್ರತಿಕ್ರಿಯೆಯನ್ನು ನೋಡಿ ಜಮಾಲ್‌ಗೆ ಭಾರೀ ನಿರಾಶೆಯಾಗುತ್ತಿತ್ತು'' ಎಂದು ಸೆಂಗಿಝ್ ಅಭಿಪ್ರಾಯಪಟ್ಟರು.  ಜಮಾಲ್ ಹತ್ಯೆಗೆ ಟ್ರಂಪ್ ಆಡಳಿತದ ತಣ್ಣನೆ ಪ್ರತಿಕ್ರಿಯೆ ಬಗ್ಗೆ ಸೆಂಗಿಝ್ ಈವರೆಗೆ ನೀಡಿದ ಹೇಳಿಕೆಗಳಲ್ಲೇ ಇದು ಅತ್ಯಂತ ಕಟು ಹೇಳಿಕೆಯಾಗಿದೆ. ಕಳೆದ ವರ್ಷದ ಅಕ್ಟೋಬರ್ 2ರಂದು ಟರ್ಕಿಯ ಇಸ್ತಾಂಬುಲ್ ನಗರದಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ನಡೆದ ಖಶೋಗಿಯ ಭೀಕರ ಹತ್ಯೆಯನ್ನು ಅಂತರ್‌ರಾಷ್ಟ್ರೀಯ ಸಮುದಾಯ ತೀವ್ರವಾಗಿ ಖಂಡಿಸಿದೆ. ಅದು ಪತ್ರಿಕಾ ಸ್ವಾತಂತ್ರದು ಮೇಲಿನ ದಾಳಿಯಾಗಿದೆ ಹಾಗೂ ಮಾನವಹಕ್ಕುಗಳ ಸಾರಾಸಗಟು ಉಲ್ಲಂಘನೆಯಾಗಿದೆ ಎಂಬುದಾಗಿ ಅದು ಬಣ್ಣಿಸಿದೆ.

ಕಠಿಣ ರಾಜಕೀಯ ಕಾಲ ಘಟ್ಟದಲ್ಲಿ ಅಮೆರಿಕಖಶೋಗಿ ನಾಪತ್ತೆಯ ಬಳಿಕ ನಾನು ಅಮೆರಿಕದಲ್ಲಿ ವಾಸ್ತವ್ಯ ಹೂಡಲು ಯೋಚಿಸಿದ್ದೆ ಎಂದು ಸೆಂಗಿಝ್ ಹೇಳಿದರು.ಅವರು ಈಗ ಲಂಡನ್‌ನಲ್ಲಿ ವಾಸಿಸುತ್ತಿದ್ದು ಡಾಕ್ಟರೇಟ್ ಪದವಿ ಅಧ್ಯಯನ ಮಾಡುತ್ತಿದ್ದಾರೆ. ''ಆದರೆ, ಬಳಿಕ ಲಂಡನ್‌ನಲ್ಲಿ ನೆಲೆಸಲು ನಿರ್ಧರಿಸಿದೆ. ಅಮೆರಿಕ ಈಗ ಕಠಿಣ ರಾಜಕೀಯ ಕಾಲ ಘಟ್ಟದ ಮೂಲಕ ಹಾದು ಹೋಗುತ್ತಿರುವುದು ಇದಕ್ಕೆ ಒಂದು ಕಾರಣ ಎಂದರು. ಖಶೋಗಿ ಹತ್ಯೆ ಕಾರ್ಯಾಚರಣೆಗೆ ಸೌದಿ ಯುವರಾಜ ಆದೇಶ ನೀಡಿದ್ದರು ಎಂಬ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ತೀರ್ಮಾನವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಶ್ನಿಸಿರುವುದನ್ನು ಸ್ಮರಿಸಬಹುದಾಗಿದೆ. ಅದೂ ಅಲ್ಲದೆ, ಈ ವಿಷಯದಲ್ಲಿ ಮಧ್ಯಪ್ರಾಚ್ಯದ ಮಿತ್ರ ದೇಶದ ವಿರುದ್ಧ ಕಠಿಣ ದಂಡನಾ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಅವರು ವಿರೋಧಿಸಿದ್ದರು. ಸೌದಿ ಅರೇಬಿಯದಿಂದ ಬಂದ 15 ಸದಸ್ಯರ ತಂಡವೊಂದು ಮದುವೆ ದಾಖಲೆಗಳನ್ನು ಪಡೆಯಲು ಕೌನ್ಸುಲೇಟ್ ಕಚೇರಿಗೆ ಬಂದಿದ್ದ ಖಶೋಗಿಯನ್ನು ಬರ್ಬರವಾಗಿ ಕೊಂದು ಹಾಕಿತ್ತು. ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಆದೇಶದಂತೆ ಈ ಹತ್ಯೆ ನಡೆಸಲಾಗಿದೆ ಎಂಬುದಾಗಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News