ಪ್ರಾಣಿಗಳ ಮೃತದೇಹ ವಿಲೇವಾರಿಗೆ ಒಪ್ಪದ ದಲಿತರಿಗೆ ಸಾಮಾಜಿಕ ಬಹಿಷ್ಕಾರ!

Update: 2019-05-16 17:52 GMT

ಗಾಂಧೀನಗರ, ಮೇ 16: ಯಾವುದೇ ಹಣ ಪಡೆಯದೆ ಪ್ರಾಣಿಗಳ ಮೃತದೇಹವನ್ನು ವಿಲೇವಾರಿ ಮಾಡುತ್ತಿದ್ದ ಗುಜರಾತ್‌ನ ಲ್ಹೋರ್ ಗ್ರಾಮದ ದಲಿತರು ಈ ಕೊಳಕು ಕಾರ್ಯದಿಂದಾಗಿ ತಮ್ಮ ಬಗ್ಗೆ ತಾರತಮ್ಯ ತೋರಲಾಗುತ್ತಿದೆ ಎಂಬ ಕಾರಣಕ್ಕೆ ಈ ಕೆಲಸ ಮಾಡದಿರಲು ನಿರ್ಧರಿಸಿದ್ದರಿಂದ ಅವರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂದು ವರದಿಯಾಗಿದೆ.

ಸಾಂಪ್ರದಾಯಿಕವಾಗಿ ತಾವು ಮಾಡಿಕೊಂಡು ಬರುತ್ತಿದ್ದ ಕಾರ್ಯವು ಹಣ ಪಡೆಯದೆ ನಡೆಸುವ ಕೊಳಕು ಕೆಲಸವಾಗಿದೆ ಎಂಬ ಕಾರಣಕ್ಕೆ ಪ್ರಾಣಿಗಳ ಮೃತದೇಹ ವಿಲೇವಾರಿ ಮಾಡದಿರಲು ನಿರ್ಧರಿಸಿದ್ದೇವೆ ಎಂದು ದಲಿತರು ಹೇಳಿದ್ದಾರೆ. ಮೇ 8ರಂದು ವಿವಾಹ ದಿಬ್ಬಣದಲ್ಲಿ ದಲಿತ ಯುವಕ (ಮದುಮಗ) ಕುದುರೆ ಮೇಲೇರಿ ಬಂದಿರುವುದನ್ನು ಆಕ್ಷೇಪಿಸಿದ ಮೇಲ್ವರ್ಗದ ಜನರು ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದರು. ಇದಕ್ಕೆ ಪ್ರತಿಯಾಗಿ ದಲಿತರು ಪ್ರಾಣಿಗಳ ಮೃತದೇಹ ವಿಲೇವಾರಿ ಮಾಡದಿರಲು ನಿರ್ಧರಿಸಿದ್ದಾರೆ ಎಂಬುದು ಊರಿನ ಕೆಲವರ ವಾದವಾಗಿದೆ.

ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಗ್ರಾಮದ ಸರಪಂಚನೂ ಸೇರಿದಂತೆ ಮೇಲ್ವರ್ಗದ ಐದು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

 “ಸಾಮಾಜಿಕ ಅನಿವಾರ್ಯತೆಯಿಂದ ಮತ್ತು ಸಂಘರ್ಷಕ್ಕೆ ಆಸ್ಪದ ನೀಡಬಾರದೆಂದು ನಾವು ಈ ಕೆಲಸ ಮಾಡುತ್ತಿದ್ದೆವು(ಪ್ರಾಣಿಗಳ ಮೃತದೇಹದ ವಿಲೇವಾರಿ). ಆದರೆ ಈ ಕೆಲಸ ಮಾಡಿದಾಗ ನಮ ಬಗ್ಗೆ ಮೇಲ್ವರ್ಗದವರು ಅಸಹ್ಯ ಪಟ್ಟುಕೊಳ್ಳುತ್ತಿದ್ದರು” ಎಂದು 81 ವರ್ಷದ ಭಿಕಾಬಾಯ್ ಪರ್ಮಾರ್ ಹೇಳಿದ್ದಾರೆ. “ನಮ್ಮ ಹಿರಿಯರು ನೂರಾರು ವರ್ಷದಿಂದ ಈ ಕೆಲಸ ಮಾಡುತ್ತಿದ್ದು ಇದು ಸಂಪ್ರದಾಯ ಎಂದು ಭಾವಿಸಲಾಗಿದೆ. ಇದಕ್ಕಾಗಿ ನಮಗೆ ಕೂಲಿ ನೀಡುವುದಿಲ್ಲ. ಪ್ರಾಣಿಗಳ ಮೃತದೇಹ ವಿಲೇವಾರಿ ಮಾಡುವುದು ದಲಿತರ ಕೆಲಸ ಎಂಬಂತೆ ಭಾವಿಸಲಾಗುತ್ತಿದೆ” ಎಂದು ಮುಕೇಶ್ ಶ್ರೀಮಲಿ ಎಂಬ ದಲಿತ ಯುವಕ ಹೇಳಿದ್ದಾನೆ. ದಲಿತರು ಮತ್ತು ಮೇಲ್ವರ್ಗದವರ ನಡುವೆ ರಾಜಿ ಮಾತುಕತೆ ನಡೆದ ಸಂದರ್ಭ ದಲಿತರು ಪ್ರಾಣಿಗಳ ಮೃತದೇಹ ವಿಲೇವಾರಿ ಮಾಡಲು ನಿರಾಕರಿಸುವುದಕ್ಕೆ ಮೇಲ್ವರ್ಗದವರು ಅಸಹನೆ ವ್ಯಕ್ತಪಡಿಸಿದ್ದಾರೆ ಎಂದು ಲ್ಹೋರ್‌ನ ಕಂದಾಯ ವಿಭಾಗದ ಸಿಬ್ಬಂದಿ ವರ್ಷಾ ಠಾಕೂರ್ ಹೇಳಿದ್ದಾರೆ. ಆದರೆ ಇದನ್ನು ನಿರಾಕರಿಸಿರುವ ಠಾಕೂರ್ ಸಮುದಾಯದ ಹಿರಿಯ ಮುಖಂಡ ಪ್ರಹ್ಲಾದ್ ಠಾಕೂರ್, ಪ್ರಾಣಿಗಳ ಮೃತದೇಹ ವಿಲೇವಾರಿ ಮಾಡುವುದು ದಲಿತರಿಗೆ ಬಿಟ್ಟ ವಿಷಯ. ಇದಕ್ಕೂ ಸಾಮಾಜಿಕ ಬಹಿಷ್ಕಾರಕ್ಕೂ ಸಂಬಂಧವಿಲ್ಲ ಎಂದಿದ್ದಾರೆ.

ಆದರೆ ಪ್ರಾಣಿಗಳ ಮೃತದೇಹದ ವಿಲೇವಾರಿಗೆ ನಿರಾಕರಿಸಿರುವ ಪ್ರಕರಣ ಲ್ಹೋರ್ ನಗರದಲ್ಲಿ ಮಾತ್ರವಲ್ಲ, ಗುಜರಾತ್‌ನ ಹಲವೆಡೆ ವರದಿಯಾಗಿದೆ. ಉನಾದಲ್ಲಿ 2016ರಲ್ಲಿ ತಥಾಕಥಿತ ಗೋರಕ್ಷಕರು ದಲಿತರ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿದ ಘಟನೆಯ ಬಳಿಕ ಗುಜರಾತ್‌ನ ಸುಮಾರು 30 ಗ್ರಾಮಗಳಲ್ಲಿ ದಲಿತರು ಪ್ರಾಣಿಗಳ ಮೃತದೇಹ ವಿಲೇವಾರಿ ಮಾಡಲು ನಿರಾಕರಿಸಿದ್ದಾರೆ. ಯಾವುದೇ ಸಂದರ್ಭದಲ್ಲೂ ರಾಜಿಯಾಗದಿರಲು ದಲಿತ ಯುವಕರು ನಿರ್ಧರಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಮಾರ್ಟಿನ್ ಮಕ್ವಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News