ರಾಜಕೀಯ ಭಾಷಣಗಳಲ್ಲಿ ಸೇನೆಯ ಪ್ರಸ್ತಾಪ ಹೆಚ್ಚುತ್ತಿರುವುದು ಕಳವಳಕಾರಿ:ಲೆ.ಜ.ಹೂಡಾ

Update: 2019-05-16 18:28 GMT

ಚಂಡಿಗಡ,ಮೇ 16: ರಾಜಕೀಯ ಭಾಷಣಗಳಲ್ಲಿ ಸೇನೆಯ ಪ್ರಸ್ತಾಪ ಹೆಚ್ಚುತ್ತಿರುವುದು ಮತ್ತು ರಾಜಕೀಯ ವಾದಗಳನ್ನು ಗೆಲ್ಲಲು ಅದನ್ನು ಬಳಸಿಕೊಳ್ಳುತ್ತಿರುವುದು ಕಳವಳಕಾರಿಯಾಗಿದೆ ಎಂದು 2016ರ ಸರ್ಜಿಕಲ್ ದಾಳಿಗಳ ರೂವಾರಿ ಲೆ.ಜ.(ನಿವೃತ್ತ) ಡಿ.ಎಸ್.ಹೂಡಾ ಅವರು ಗುರುವಾರ ಇಲ್ಲಿ ಹೇಳಿದರು.

ಸೇನೆಯ ರಾಜಕೀಯಕರಣ ಕುರಿತು ಕೇಳಿಬರುತ್ತಿರುವ ಮಾತುಗಳು ಅತಿರಂಜಿತ ರೀತಿಯಲ್ಲಿವೆ ಎಂದೂ ಅವರು ಹೇಳಿದರು.

  ‘ರಾಷ್ಟ್ರೀಯ ಭದ್ರತೆ ಕುರಿತು ಸಂವಾದ’ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು,ರಾಜಕೀಯ ಭಾಷಣಗಳಲ್ಲಿ ಸೇನೆಯನ್ನು ಎಳೆದು ತರುವ ಪ್ರವೃತ್ತಿಯು ಹೆಚ್ಚುತ್ತಿದೆ,ರಾಜಕೀಯ ವಾದಗಳನ್ನು ಗೆಲ್ಲಲು ಸೇನೆಯನ್ನು ಬಳಸಿಕೊಳ್ಳಲಾಗತ್ತಿದೆ. ಅದು ಚುನಾವಣೆಗಳನ್ನು ಗೆಲ್ಲುವ ಸಾಧನವಾಗಿ ಬಳಕೆಯಾಗುತ್ತಿದೆ. ಇದು ಕಳವಳಕಾರಿಯಾಗಿದೆ ಎಂದು ಹೇಳಿದರು.

ಉದಾಹರಣೆಗೆ ಇತ್ತೀಚಿಗೆ ‘‘ನನ್ನ ಗಡಿಯಾಚೆಯ ದಾಳಿಗಳು ವಿರುದ್ಧ ನಿಮ್ಮ ಸರ್ಜಿಕಲ್ ದಾಳಿಗಳು’ ಕುರಿತು ಚರ್ಚೆಗೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ಅಂತಿಮವಾಗಿ ಆಗಿದ್ದೇನು? ಸೇನೆಯ ಕೇಂದ್ರಕಚೇರಿಯು ಏನು ಹೇಳುತ್ತಿದೆ ನೋಡಿ ಎಂದು ಹೇಳಲು ಆರ್‌ಟಿಐ ಉತ್ತರದಲ್ಲಿ ದಾಖಲೆಯೊಂದನ್ನು ಪಡೆದುಕೊಳ್ಳಲಾಯಿತು. ಸೇನೆಯ ಕುರಿತು ಅತಿಯಾದ ರಾಜಕೀಯ ಚರ್ಚೆ ಆರಂಭಗೊಂಡಾಗ ಅದು ಕಳವಳದ ವಿಷಯವಾಗುತ್ತದೆ ಎಂದರು.

 ಕಳೆದ ವರ್ಷ ಸುದ್ದಿಸಂಸ್ಥೆ ಪಿಟಿಐ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ನೀಡಿದ್ದ ಉತ್ತರದಲ್ಲಿ ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕರು,2016,ಸೆ.29(ಸರ್ಜಿಕಲ್ ದಾಳಿ ನಡೆದಿದ್ದ ದಿನ)ಕ್ಕೆ ಮೊದಲು ಯಾವುದೇ ಸರ್ಜಿಕಲ್ ದಾಳಿ ನಡೆದಿರುವ ಬಗ್ಗೆ ಯಾವುದೇ ದಾಖಲೆ ಸೇನೆಯ ಬಳಿಯಿಲ್ಲ ಎಂದು ತಿಳಿಸಿದ್ದರು.

 ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳು ಸೇನೆಯನ್ನು ರಾಜಕೀಯ ಭಾಷಣಗಳಿಂದ ಹೊರಗಿಟ್ಟರೆ ಒಳ್ಳೆಯದು. ಆದರೆ ಜನರು ಚುನಾವಣಾ ಗೆಲುವಿಗಳಿಗಾಗಿ ಸೇನೆಯ ಹೆಸರು ಬಳಸಿಕೊಂಡು ಯಶಸ್ಸಿನ ರುಚಿಯನ್ನು ಕಂಡಿರುವುದರಿಂದ ಇದು ಆಗುತ್ತದೆಯೇ ಎನ್ನುವುದು ನನಗೆ ಗೊತ್ತಿಲ್ಲ ಎಂದೂ ಮೇ.ಜ.ಹೂಡಾ ಹೇಳಿದರು.

ಸಶಸ್ತ್ರ ಪಡೆಗಳ ರಾಜಕೀಯಕರಣ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು,ಈ ಬಗ್ಗೆ ಬಹಳಷ್ಟು ಮಾತುಗಳು ಕೇಳಿಬರುತ್ತಿವೆ. ಆದರೆ ಇವೆಲ್ಲ ಒಂದು ರೀತಿಯ ಉತ್ಪ್ರೇಕ್ಷೆ ಎಂದು ನಾನು ಭಾವಿಸಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News