ಮಧ್ಯಪ್ರದೇಶ ಅರಣ್ಯದಲ್ಲಿ 11 "ಹೊಸ ಅತಿಥಿಗಳು" ಪತ್ತೆ

Update: 2019-05-17 03:48 GMT

ಭೋಪಾಲ್: ಕಳೆದ ಒಂದು ವರ್ಷದಲ್ಲಿ 14 ಹುಲಿಗಳ ಸಾವಿನ ಕುಖ್ಯಾತಿಗೆ ಒಳಗಾದ ಮಧ್ಯಪ್ರದೇಶದ ಹುಲಿಧಾಮಗಳಿಂದ ಇದೀಗ ಶುಭ ಸುದ್ದಿ ಬಂದಿದೆ.

ಕಳೆದ ಒಂದು ವಾರದಲ್ಲಿ ಒಟ್ಟು 11 ಹುಲಿಮರಿಗಳನ್ನು ಪತ್ತೆ ಮಾಡಲಾಗಿದೆ. ಪನ್ನಾ ಹುಲಿಧಾಮದಲ್ಲಿ ಐದು, ನೌರದೇಹಿ ಹಾಗೂ ರಾತಪಾನಿ ಧಾಮದಲ್ಲಿ ತಲಾ ಮೂರು ಹುಲಿಮರಿಗಳು ಪತ್ತೆಯಾಗಿವೆ.

ದಮೋಹ್ ಮತ್ತು ಸಾಗರ್ ಜಿಲ್ಲೆಗಳಲ್ಲಿ ಹರಡಿರುವ ನೌರದೇಹಿ ವನ್ಯಧಾಮದಲ್ಲಿ ಈ ವರ್ಷ ಮೊದಲ ಬಾರಿಗೆ ಹುಲಿಮರಿ ಹುಟ್ಟಿರುವ ಬಗ್ಗೆ ಅರಣ್ಯಾಧಿಕಾರಿಗಳು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ಇದು ರಾಧಾ ಹಾಗೂ ಕೃಷ್ಣ ಹುಲಿಗಳ ಮೊದಲ ಮರಿ. ರಾಧಾ ಹಾಗೂ ಕೃಷ್ಣ ಹುಲಿಗಳನ್ನು ಕನ್ಹಾ ಮತ್ತು ಭಂದವ್‌ಗಢ ರಾಷ್ಟ್ರೀಯ ಉದ್ಯಾನವನಗಳಿಂದ ಸ್ಥಳಾಂತರಿಸಲಾಗಿತ್ತು. ಮೂರು ಹುಲಿಗಳನ್ನು ಮೇ 9ರಂದು ಪತ್ತೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇವನ್ನು ತೀರಾ ಅಮೂಲ್ಯ ಎಂದು ಪರಿಗಣಿಸಲಾಗಿದ್ದು, ಅವುಗಳ ರಕ್ಷಣೆಗಾಗಿ ಸುತ್ತಲೂ ಪೊಲೀಸ್ ಕಾವಲು ವ್ಯವಸ್ಥೆಗೊಳಿಸಲಾಗಿದೆ.
ಪನ್ನಾ ಹುಲಿಧಾಮದಲ್ಲಿ ಎರಡು ಹೆಣ್ಣುಹುಲಿಗಳು ಐದು ಮರಿಗಳಿಗೆ ಜನ್ಮ ನೀಡಿವೆ. ಟಿ-6 ಎರಡು ಮರಿಗಳಿಗೆ ಜನ್ಮ ನೀಡಿದ್ದರೆ, ಮತ್ತೊಂದು ಹುಲಿಗೆ 3 ಮರಿಗಳು ಹುಟ್ಟಿವೆ ಎಂದು ಕ್ಷೇತ್ರ ನಿರ್ದೇಶಕ ಕೆ.ಎಸ್.ಭಡೋರಿಯಾ ಹೇಳಿದ್ದಾರೆ.

ಧಾಮದಲ್ಲಿ ಹುಲಿಗಳ ಸಂಖ್ಯೆ 52ಕ್ಕೆ ತಲುಪಿದೆ. ಭೋಪಾಲ್ ಹೊರವಲಯದಿಂದ ಕೇವಲ 20 ಕಿಲೋಮೀಟರ್ ದೂರದಲ್ಲಿರುವ ಒಬೇದುಲ್ಲಾಗಂಜ್‌ನಲ್ಲಿ ಅರಣ್ಯ ಅಧಿಕಾರಿಗಳು ಮೂರು ಮರಿಗಳನ್ನು ಪತ್ತೆ ಮಾಡಿದ್ದಾರೆ. 824 ಚದರ ಕಿಲೋಮೀಟರ್ ವಿಸ್ತೀರ್ಣದ ರಾತಪಾನಿ ಅರಣ್ಯದಲ್ಲಿ ಈಗಾಗಲೇ 20 ಹುಲಿಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News