ಸಿಂಹಳೀಯರಿಗೆ ಒಲಿದ ಮೊದಲ ವಿಶ್ವಕಪ್

Update: 2019-05-17 06:26 GMT

1996ರಲ್ಲಿ ಮತ್ತೊಮ್ಮೆ ಉಪ ಖಂಡದಲ್ಲಿ ವಿಶ್ವಕಪ್ ಕ್ರಿಕೆಟ್ ಉತ್ಸವ. ಭಾರತ -ಪಾಕಿಸ್ತಾನ - ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆದ ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿಶ್ವ ಚಾಂಪಿಯನ್ ಆಗಿ ಪ್ರಶಸ್ತಿ ಬಾಚಿಕೊಳ್ಳುವುದರೊಂದಿಗೆ ಉಪಖಂಡಕ್ಕೆ ಮತ್ತೊಮ್ಮೆ ವಿಶ್ವ ಚಾಂಪಿಯನ್ ಪಟ್ಟ ದೊರೆಯಿತು.

12 ತಂಡಗಳು ಭಾಗವಹಿಸಿದ್ದ ವಿಶ್ವಕಪ್ ಕೂಟದಲ್ಲಿ ಕೀನ್ಯ , ಹಾಲೆಂಡ್ ಮತ್ತು ಯುನೈಟೆಡ್ ಅರಬ್ ಎಮಿರೆಟ್ಸ್ ಆಡುವ ಅರ್ಹತೆ ಗಿಟ್ಟಿಸಿಕೊಂಡಿದ್ದವು.

 ಆರನೇ ಆವೃತ್ತಿಯ ಈ ಟೂರ್ನಮೆಂಟ್ ಆರಂಭಗೊಳ್ಳುವ ಹೊತ್ತಿಗೆ ಹಲವು ವಿವಾದಗಳು ಹುಟ್ಟಿಕೊಂಡವು. ವಿಶ್ವಕಪ್ ಟೂರ್ನಮೆಂಟ್ ಪ್ರಾರಂಭವಾಗುವ ಸ್ವಲ್ಪ ಮೊದಲು ಶ್ರೀಲಂಕಾದಲ್ಲಿ ಎಲ್‌ಟಿಟಿಇ ಬಾಂಬ್ ದಾಳಿಯಿಂದಾಗಿ ಸಹಸ್ರಾರು ಮಂದಿ ನಾಗರಿಕರು ಮೃತಪಟ್ಟಿದ್ದರು. ಈ ಕಾರಣದಿಂದಾಗಿ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯ ತನ್ನ ರಾಷ್ಟ್ರೀಯ ತಂಡಗಳನ್ನು ಶ್ರೀಲಂಕಾಕ್ಕೆ ಕಳುಹಿಸಲು ಹಿಂದೇಟು ಹಾಕಿದವು. ಶ್ರೀಲಂಕಾ ತಂಡ ಇದರ ಲಾಭವನ್ನು ಬಾಚಿಕೊಂಡಿತು.

ಸೆಮಿಫೈನಲ್:  

ಭಾರತ ಮತ್ತು ಶ್ರೀಲಂಕಾ ನಡುವೆ ಕೋಲ್ಕತಾದ ಈಡನ್ ಗಾರ್ಡನ್‌ನಲ್ಲಿ ಮಾರ್ಚ್ 13, 1996ರಂದು ನಡೆದ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ 1,10,000 ಮಂದಿ ಪ್ರೇಕ್ಷಕರು ಪಾಲ್ಗೊಂಡಿದ್ದರು. ಇದೊಂದು ದಾಖಲೆಯಾಗಿದೆ. ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 251 ರನ್ ಗಳಿಸಿತ್ತು. ಆದರೆ ಭಾರತ ಕಳಪೆ ಪ್ರದರ್ಶನ ನೀಡಿ 34.1 ಓವರ್‌ಗಳಲ್ಲಿ 120 ರನ್ ಸೇರಿಸುವ ಹೊತ್ತಿಗೆ 8 ವಿಕೆಟ್‌ಗಳನ್ನು ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತ್ತು. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಕ್ರೀಡಾಂಗಣಕ್ಕೆ ಬಾಟ್ಲಿ, ಕಲ್ಲು,ಇಟ್ಟಿಗೆ ತುಂಡುಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಆಟ ನಿಂತಿತು. ಅಂತಿಮವಾಗಿ ಮ್ಯಾಚ್ ರೆಫರಿ ಕ್ಲೈವ್ ಲಾಯ್ಡಾ ಶ್ರೀಲಂಕಾ ತಂಡವನ್ನು ವಿಜಯಿ ತಂಡ ಎಂದು ಘೋಷಿಸಿ ಫೈನಲ್‌ಗೆ ತೆರಳಲು ಅವಕಾಶ ಮಾಡಿ ಕೊಟ್ಟರು.

ಲಾಹೋರ್‌ನಲ್ಲಿ ಮಾರ್ಚ್ 17ರಂದು ಶ್ರೀಲಂಕಾ ಮತ್ತು ಆಸ್ಟ್ರೇಲಿಯ ನಡುವಿನ ಫೈನಲ್ ಪಂದ್ಯದ ವೇಳೆ ಇನ್ನೊಂದು ವಿವಾದ ಹುಟ್ಟಿಕೊಂಡಿತು.ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಬೌಲಿಂಗ್ ಶೈಲಿಯ ಬಗ್ಗೆ ಅಂಪಾಯರ್ ತಕರಾರು ಎತ್ತಿದರು. ಆದರೆ ಶ್ರೀಲಂಕಾ ತಂಡದ ಅದೃಷ್ಟ ನೆಟ್ಟ ಗಿತ್ತು. ಅರ್ಜುನ್ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಆಸ್ಟ್ರೇಲಿಯವನ್ನು 7 ವಿಕೆಟ್‌ಗಳಿಂದ ಬಗ್ಗು ಬಡಿದು ವಿಶ್ವ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

 ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 241 ರನ್ ಗಳಿಸಿತ್ತು (ನಾಯಕ ಟೇಲರ್ 74, ರಿಕಿ ಪಾಂಟಿಂಗ್ 45, ಬೆವೆನ್ 36; ಅರವಿಂದ ಡಿ ಸಿಲ್ವ 42ಕ್ಕೆ 3). ಇದಕ್ಕೆ ಉತ್ತರವಾಗಿ ಶ್ರೀಲಂಕಾ 46.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 245(ಅಸಂಕ ಗುರುಸಿಂಗ 65, ಅರವಿಂದ ಡಿ ಸಿಲ್ವ ಔಟಾಗದೆ 107, ಅರ್ಜುನ್ ರಣತುಂಗ ಔಟಾಗದೆ 47) ರನ್ ಸಂಪಾದಿಸಿ 6 ವಿಕೆಟ್‌ಗಳ ಜಯ ಸಾಧಿಸಿತು.

ಶತಕ ಸಿಡಿಸಿದ ಶ್ರೀಲಂಕಾದ ಅರವಿಂದ ಡಿ’ ಸಿಲ್ವ ಪಂದ್ಯಶ್ರೇಷ್ಠ ಮತ್ತು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಸನತ್ ಜಯಸೂರ್ಯ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News