ಸ್ವಿಝರ್ ಲ್ಯಾಂಡ್ ನೀಡಿದ ಕಪ್ಪುಹಣದ ಮಾಹಿತಿ ಬಹಿರಂಗಪಡಿಸಲು ನಿರಾಕರಿಸಿದ ಕೇಂದ್ರ

Update: 2019-05-17 10:57 GMT

ಹೊಸದಿಲ್ಲಿ, ಮೇ 17: ಗೌಪ್ಯತೆಯ ನೆಪವೊಡ್ಡಿ ಸ್ವಿಝರ್ ಲ್ಯಾಂಡ್ ನಿಂದ ಪಡೆದ ಕಪ್ಪುಹಣ ಕುರಿತಾದ ಮಾಹಿತಿಯನ್ನು ಬಹಿರಂಗ ಪಡಿಸಲು ಕೇಂದ್ರ ಸರಕಾರ ನಿರಾಕರಿಸಿದೆ.

ಆರ್‍ಟಿಐ ಅರ್ಜಿಯೊಂದಕ್ಕೆ ಉತ್ತರಿಸಿದ ಕೇಂದ್ರ ವಿತ್ತ ಸಚಿವಾಲಯ, ನವೆಂಬರ್ 22, 2016ರಲ್ಲಿ ಸಹಿ ಹಾಕಲಾದ ಜಂಟಿ ಘೋಷಣೆಯನ್ವಯ ಭಾರತ ಮತ್ತು ಸ್ವಿಝರ್ ಲ್ಯಾಂಡ್ ಪ್ರತಿ ಪ್ರಕರಣದ ತನಿಖೆಯ ಮಾಹಿತಿಗಳನ್ನು ಪರಸ್ಪರ ಹಂಚಿಕೊಳ್ಳುತ್ತವೆ ಎಂದು ಹೇಳಿದೆ. “ಇದೊಂದು ನಿರಂತರ ಪ್ರಕ್ರಿಯೆ, ಆದರೆ ಸ್ವಿಝರ್ ಲ್ಯಾಂಡ್ ನೀಡಿದ ಮಾಹಿತಿ ಗೌಪ್ಯತಾ ಕಾಯಿದೆಯ ವ್ಯಾಪ್ತಿಯಲ್ಲಿ ಬರುತ್ತದೆ'' ಎಂದು  ಉತ್ತರದಲ್ಲಿ ತಿಳಿಸಲಾಗಿದೆ.

ಕಾಳ ಧನ ಪ್ರಕರಣಗಳ ಮಾಹಿತಿ ಜತೆಗೆ ಸಂಸ್ಥೆ ಯಾ ವ್ಯಕ್ತಿಗಳ ಹೆಸರು ಹಾಗೂ ಕ್ರಮ ಕೈಗೊಂಡ ಮಾಹಿತಿಯನ್ನು ಆರ್‍ ಟಿಐ ಅರ್ಜಿ ಮೂಲಕ ಕೇಳಲಾಗಿತ್ತು. “ಈ ವರ್ಷದಿಂದ ಭಾರತೀಯ ನಿವಾಸಿಗಳು ಸ್ವಿಝರ್ ಲ್ಯಾಂಡ್ ನಲ್ಲಿ ಆರ್ಥಿಕ ವರ್ಷ 2018 ಹಾಗೂ ಮುಂದಿನ ವರ್ಷಗಳಲ್ಲಿ ಹೊಂದಿರುವ ಖಾತೆಗಳ ಮಾಹಿತಿಯನ್ನು ಭಾರತ  ಪಡೆಯಲಿದೆ'' ಎಂದು ಸಚಿವಾಲಯ ತನ್ನ ಉತ್ತರದಲ್ಲಿ ತಿಳಿಸಿದೆ.

ದೇಶದೊಳಗೆ ಚಲಾವಣೆಯಲ್ಲಿರುವ ಕಾಳಧನ ಹಾಗೂ ದೇಶದ ಹೊರಗೆ ಭಾರತೀಯರು ಹೊಂದಿರುವ ಕಾಳಧನ ಬಗ್ಗೆ  ಯಾವುದೇ ಅಂದಾಜು ಮಾಡಲಾಗಿಲ್ಲ ಎಂದೂ ಸಚಿವಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News