ಮಹಾತ್ಮ ಗಾಂಧೀಜಿ ‘ಪಾಕಿಸ್ತಾನದ ರಾಷ್ಟ್ರಪಿತ' ಎಂದ ಬಿಜೆಪಿ ವಕ್ತಾರ!

Update: 2019-05-17 11:53 GMT

ಭೋಪಾಲ್, ಮೇ 17: ‘ಮಹಾತ್ಮ ಗಾಂಧಿ ಪಾಕಿಸ್ತಾನದ ರಾಷ್ಟ್ರಪಿತ' ಎಂದು ಹೇಳಿದ ಮಧ್ಯ ಪ್ರದೇಶದ ಬಿಜೆಪಿ ವಕ್ತಾರ ಅನಿಲ್ ಸೌಮಿತ್ರ ಅವರನ್ನು ಪಕ್ಷ ತನ್ನ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿದೆ.

ಮಹಾತ್ಮ ಗಾಂಧಿ ಹಂತಕ ನಾಥೂರಾಂ ಗೋಡ್ಸೆ `ದೇಶಭಕ್ತ' ಎಂದು ಭೋಪಾಲದ ಪಕ್ಷದ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕುರ್ ಹೇಳಿಕೆ ಎಬ್ಬಿಸಿದ ವಿವಾದ ತಣ್ಣಗಾಗುವ ಮೊದಲೇ ಸೌಮಿತ್ರ ಅವರ ಈ ಹೇಳಿಕೆ ಪಕ್ಷಕ್ಕೂ ಆಘಾತ ಸೃಷ್ಟಿಸಿದೆ.

“ಅವರು (ಮಹಾತ್ಮ ಗಾಂಧಿ) ಪಾಕಿಸ್ತಾನದ ರಾಷ್ಟ್ರಪಿತ ಆಗಿದ್ದರು. ಭಾರತ ಅವರಂತಹ ಕೋಟಿಗಟ್ಟಲೆ ಪುತ್ರರನ್ನು ಸೃಷ್ಟಿಸಿದೆ, ಕೆಲವರು ಒಳ್ಳೆಯವರು ಹಾಗೂ ಕೆಲವರು ಕೆಟ್ಟವರು'' ಎಂದು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಸೌಮಿತ್ರ ಹೇಳಿದ್ದರು. ಏಳು ದಿನಗಳೊಳಗಾಗಿ ಈ ಹೇಳಿಕೆಗೆ ವಿವರಣೆ ನೀಡಬೇಕೆಂದು ಅವರಿಗೆ ಪಕ್ಷ ನೋಟಿಸ್ ಜಾರಿಗೊಳಿಸಿದೆ.

ಪ್ರಜ್ಞಾ ಠಾಕುರ್ ತಮ್ಮ ಹೇಳಿಕೆಗೆ ಈಗಾಗಲೇ ಕ್ಷಮೆ ಯಾಚಿಸಿದ್ದರೆ ಸೌಮಿತ್ರ ಮಾತ್ರ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. “ಭಾರತೀಯ ಸಂಸ್ಕೃತಿಯಲ್ಲಿ ‘ರಾಷ್ಟ್ರಪಿತ’ ಎಂಬ ಪರಿಕಲ್ಪನೆಯೇ ಇಲ್ಲ. ನಾವೆಲ್ಲರೂ ಭಾರತ ಮಾತೆಯ ಪುತ್ರರು. ರಾಷ್ಟ್ರಪಿತ ಎಂಬ ಶಬ್ದವನ್ನು ಕಾಂಗ್ರೆಸ್ ಸೃಷ್ಟಿಸಿತ್ತು ಹಾಗೂ ಅದು ಈಗಲೂ ಮುಂದುವರಿದಿದೆ'' ಎಂದು ಅವರು ಹೇಳಿಕೊಂಡಿದ್ದಾರೆ.

“ಮಹಾತ್ಮ ಗಾಂಧಿ ಪಾಕಿಸ್ತಾನದ ರಾಷ್ಟ್ರಪಿತ ಎಂಬ ತಮ್ಮ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಗಾಂಧೀಜಿ ಪಾಕಿಸ್ತಾನ ರಚನೆಗೆ ಸಹಕರಿಸಿದ್ದರು ಹಾಗೂ ಜವಾಹರಲಾಲ್ ನೆಹರು ಮತ್ತು ಮುಹಮ್ಮದ್ ಆಲಿ ಜಿನ್ನಾ ಇಬ್ಬರಿಗೂ ಸಹಾಯ ಮಾಡಿದ್ದರು'' ಎಂದಿದ್ದಾರೆ.

ಸೌಮಿತ್ರ ಹೇಳಿಕೆಯಿಂದ ದೂರ ಸರಿದು ನಿಂತ ಬಿಜೆಪಿ ವಕ್ತಾರ ಹಿತೇಶ್ ಬಾಜಪೇಯಿ, “ಪಕ್ಷ ಇಂತಹ ಹೇಳಿಕೆಗಳ ವಿರುದ್ಧವಾಗಿದೆ ಎಂದು ಪಕ್ಷಾಧ್ಯಕ್ಷ ಅಮಿತ್ ಶಾ ಈಗಾಗಲೇ ಹೇಳಿದ್ದಾರೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News