ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ನಡುವಿನ ಸಂಬಂಧ ನಿಮಗೆ ತಿಳಿದಿರಲಿ

Update: 2019-05-17 18:35 GMT

ಮಾನವ ಶರೀರದ ಒಳಗೆ ಮತ್ತು ಹೊರಗೆ ಅಗತ್ಯವಾಗಿರುವುದು ಸರಿಯಾದ ಪ್ರಮಾಣದಲ್ಲಿದ್ದರೆ ಎಲ್ಲವೂ ಒಳ್ಳೆಯದೇ, ವಿಶೇಷವಾಗಿ ಆರೋಗ್ಯದ ಬಗ್ಗೆ ಹೇಳುವುದಾದರೆ ಎಲ್ಲವೂ ಸಹಜ ಸ್ಥಿತಿಯಲ್ಲಿಯೇ ಇರಬೇಕು. ಶರೀರದಲ್ಲಿ ಏನಾದರೂ ವ್ಯತ್ಯಾಸವಾದರೆ ಸಮಸ್ಯೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ ಅಧಿಕ ರಕ್ತದೊತ್ತಡ ಅಥವಾ ಮಧುಮೇಹದ ಪ್ರಕರಣ ಸಂಪೂರ್ಣ ವಿಭಿನ್ನವಾಗಿದೆ. ಅಧಿಕ ರಕ್ತದೊತ್ತಡವನ್ನು ಸೂಚಿಸುವ ಯಾವುದೇ ನಿರ್ದಿಷ್ಟ ಲಕ್ಷಣಗಳಿಲ್ಲ.

 ಹೃದಯದ ಸ್ನಾಯು ಸಂಕುಚಿತಗೊಂಡು ರಕ್ತವನ್ನು ಪಂಪ್ ಮಾಡಿದಾಗ ರಕ್ತದೊತ್ತಡವು ಹೆಚ್ಚುತ್ತದೆ,ಇದನ್ನು ಸಿಸ್ಟೋಲಿಕ್ ಅಥವಾ ಸಂಕೋಚನ ಒತ್ತಡ ಎನ್ನುತ್ತಾರೆ. ಸಾಮಾನ್ಯ ಸ್ಥಿತಿಯಲ್ಲಿ ಇದು 120 ಎಂಎಂಎಚ್‌ಜಿಗಳಷ್ಟು ಇರುತ್ತದೆ. ಹೃದಯದ ಸ್ನಾಯು ಸಡಿಲಗೊಂಡಾಗ ಹೃದಯದಲ್ಲಿ ಮತ್ತೆ ರಕ್ತವು ತುಂಬಿಕೊಳ್ಳುತ್ತದೆ ಮತ್ತು ರಕ್ತದೊತ್ತಡವು ಇಳಿಯುತ್ತದೆ,ಇದನ್ನು ಡಯಾಸ್ಟೋಲಿಕ್ ಅಥವಾ ವ್ಯಾಕೋಚನ ಒತ್ತಡ ಎನ್ನುತ್ತಾರೆ. ಸಾಮಾನ್ಯ ಸ್ಥಿತಿಯಲ್ಲಿ ಇದು 80 ಎಂಎಂಎಚ್‌ಜಿಗಳಷ್ಟು ಇರುತ್ತದೆ. ಸಿಸ್ಟೋಲಿಕ್ ಮೇಲಿನ ಮತ್ತು ಡಯಾಸ್ಟೋಲಿಕ್ ಕೆಳಗಿನ ಸಂಖ್ಯೆಯಾಗಿದೆ. ಸಿಸ್ಟೋಲಿಕ್ 140 ಎಂಎಂಎಚ್‌ಜಿಗಿಂತ ಹೆಚ್ಚು ಮತ್ತು ಡಯಾಸ್ಟೋಲಿಕ್ 90 ಎಂಎಂಎಚ್‌ಜಿಗಿಂತ ಹೆಚ್ಚಿದ್ದರೆ ವ್ಯಕ್ತಿಯು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾನೆ ಎಂದು ಅರ್ಥ.

ಟೈಪ್ 2 ಮಧುಮೇಹದಿಂದ ಬಳಲುತ್ತಿರುವವರು ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಹೊಂದಿರುವ ಸಾಧ್ಯತೆಯು ಹೆಚ್ಚಿರುತ್ತದೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ನಡುವೆ ಇಂತಹ ಮಹತ್ವದ ಸಂಬಂಧ ಏಕಿರುತ್ತದೆ ಎನ್ನುವುದು ಗೊತ್ತಿಲ್ಲವಾದರೂ,ಬೊಜ್ಜು,ಕೊಬ್ಬು ಮತ್ತು ಸೋಡಿಯಂ ಅತಿಯಾಗಿರುವ ಆಹಾರ,ದೀರ್ಘಕಾಲಿಕ ಉರಿಯೂತ ಮತ್ತು ಚಟುವಟಿಕೆಯಿಲ್ಲದಿರುವುದು ಇವೆರಡೂ ಸ್ಥಿತಿಗಳಿಗೆ ತಮ್ಮ ಕೊಡುಗೆಗಳನ್ನು ಸಲ್ಲಿಸುತ್ತವೆ ಎಂದು ಪರಿಗಣಿಸಲಾಗಿದೆ. ಅಧಿಕ ರಕ್ತದೊತ್ತಡದ ಜೊತೆಗೆ ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಗಳು ಹೃದಯ ವೈಫಲ್ಯ ಅಥವಾ ಪಾರ್ಶ್ವವಾಯುವಿಗೆ ಗುರಿಯಾಗುವ ಸಾಧ್ಯತೆಗಳು ಹೆಚ್ಚು ಎನ್ನುವುದನ್ನು ವಿವಿಧ ಅಧ್ಯಯನಗಳು ತೋರಿಸಿವೆ. ಇವೆರಡೂ ಒಟ್ಟಿಗಿದ್ದರೆ ಮೂತ್ರಪಿಂಡ ರೋಗ ಮತ್ತು ರೆಟಿನೋಪತಿಯಂತಹ ಮಧುಮೇಹಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಮಧುಮೇಹದಿಂದುಂಟಾಗುವ ರೆಟಿನೋಪತಿಯು ದೃಷ್ಟಿಯ ಮೇಲೆ ಪರಿಣಾಮವನ್ನು ಬೀರುತ್ತದೆ ಮತ್ತು ಸಂಪೂರ್ಣ ಅಂಧತ್ವಕ್ಕೂ ಕಾರಣವಾಗಬಹುದು. ಅಧಿಕ ರಕ್ತದೊತ್ತಡವೂ ಅಲ್ಝೀಮರ್ಸ್ ಕಾಯಿಲೆ ಮತ್ತು ಡಿಮೆನ್ಶಿಯಾ(ಬುದ್ಧಿಮಾಂದ್ಯತೆ)ದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಆಹ್ವಾನ ನೀಡುತ್ತದೆ.

ಮಧುಮೇಹವು ಅಧಿಕ ರಕ್ತದೊತ್ತಡಕ್ಕೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುವ ಏಕೈಕ ಕಾರಣವಲ್ಲ. ಅಧಿಕ ಕೊಬ್ಬು,ಅತಿಯಾದ ಸೋಡಿಯಂ ಒಳಗೊಂಡಿರುವ ಆಹಾರ,ಬೊಜ್ಜು,ವಯಸ್ಸಾಗುವಿಕೆ,ಹೃದ್ರೋಗದ ಕುಟುಂಬದ ಇತಿಹಾಸ,ಅಧಿಕ ಕೊಲೆಸ್ಟ್ರಾಲ್,ಅತಿಯಾದ ಮದ್ಯಪಾನ,ಹೆಚ್ಚು ಚಟುವಟಿಕೆಗಳಿಲ್ಲದ ಜೀವನಶೈಲಿ,ಧೂಮ್ರಪಾನ ಮತ್ತು ಇತರ ಹಲವಾರು ಕಾರಣಗಳೂ ಅಧಿಕ ರಕ್ತದೊತ್ತಡದಿಂದಾಗಿ ಹೃದಯ ವೈಫಲ್ಯ ಅಥವಾ ಪಾರ್ಶ್ವವಾಯುವಿಗೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತವೆ.

ಜೀವನ ಶೈಲಿಯಲ್ಲಿ ಬದಲಾವಣೆಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತವೆ. ಸೂಕ್ತ ಆಹಾರ ಸೇವನೆ ಮತ್ತು ದೈನಂದಿನ ವ್ಯಾಯಾಮ ಅತ್ಯುತ್ತಮ ಪರಿಣಾಮವನ್ನು ನೀಡುತ್ತವೆ. ಪ್ರತಿದಿನ ಕನಿಷ್ಠ 30ರಿಂದ 40 ನಿಮಿಷಗಳ ಕಾಲ ಬಿರುಸಿನ ನಡಿಗೆಯು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ವ್ಯಾಯಾಮವು ರಕ್ತದೊತ್ತಡವನ್ನು ಕಡಿಮೆ ಮಾಡುವ ಜೊತೆಗೆ ಹೃದಯದ ಸ್ನಾಯುವನ್ನೂ ಬಲಗೊಳಿಸುತ್ತದೆ. ದೈಹಿಕ ಚಟುವಟಿಕೆಗಳೂ ಅಪಧಮನಿಗಳ ಪೆಡಸುತನವನ್ನು ಕಡಿಮೆ ಮಾಡುತ್ತವೆ. ವ್ಯಾಯಾಮವನ್ನು ದಿನಚರಿಯಾಗಿ ಮಾಡಿಕೊಂಡರೆ ಅದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವಲ್ಲಿಯೂ ನೆರವಾಗುತ್ತದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News