ಸಾವರ್ಕರ್ ಧೋರಣೆ ಬದಲಾದದ್ದು ಹೇಗೆ?

Update: 2019-05-18 07:14 GMT

ಭಾಗ-31

ಸಾವರ್ಕರ್ ರೂಪಿಸಿದ ಸಿದ್ಧಾಂತದ ಬೀಜರೂಪವನ್ನು ಅವಲಂಬಿಸಿ ಡಾ. ಹೆಡ್ಗೆವಾರ್ ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ (ಆರೆಸ್ಸೆಸ್) ಸ್ಥಾಪನೆ ಮಾಡಿ ದ್ವಿ-ರಾಷ್ಟ್ರ ಭಾವನೆಯ ವಿಷವೃಕ್ಷವನ್ನು ಬೆಳೆಸಿದರು. ಹಿಂದೂ ಧರ್ಮದ ಶ್ರೇಷ್ಠತೆ ಆಧಾರದ ಮೇಲೆ ಹಿಂದುತ್ವ ಸಿದ್ಧಾಂತದ ಕೊಂಬೆರೆಂಬೆಗಳು ಚಿಗುರೊಡೆದವು. ಹಿಂದುತ್ವದ ಔನ್ನತ್ಯವನ್ನು ಪ್ರತಿಪಾದಿಸುತ್ತ ಆರ್ಯ ಜನಾಂಗದ ಶ್ರೇಷ್ಠತೆಯ ಕುಸುಮ ವಿಕಸನವನ್ನು ಪೋಷಿಸಿದರು. ಮನುವಾದದ ಪರಮೋಚ್ಚ ಫಲವನ್ನು ಹುಲುಸಾಗಿ ಬೆಳೆಸಿದರು.

ಹಿಂದೂಸ್ಥಾನ ಸ್ವಾತಂತ್ರ ಪಡೆಯಲು ಹಿಂದೂ-ಮುಸ್ಲಿಮರು ಒಂದಾಗಿ ಸೌಹಾರ್ದದಿಂದ ಹೆಗಲಿಗೆ ಹೆಗಲು ಕೊಟ್ಟು ದುಡಿಯಬೇಕೆಂದು ಉಗ್ರವಾಗಿ ಪ್ರತಿಪಾದಿಸಿದವರೂ ತರುವಾಯ ಕೋಮು ಆಧಾರದ ಮೇಲೆ ದ್ವಿ-ರಾಷ್ಟ್ರ ಸಿದ್ಧಾಂತವನ್ನು ರೂಪಿಸಿದವರೂ ಸಾವರ್ಕರ್‌ರೆಂಬ ಐತಿಹಾಸಿಕ ಸಂಗತಿಯನ್ನು ಸ್ಮರಿಸಲೇಬೇಕು. ‘ಭಾರತೀಯ ಸ್ವಾತಂತ್ರ ಸಂಗ್ರಾಮ -1857’ ಎಂಬ ಗ್ರಂಥದಲ್ಲಿ ಸಾವರ್ಕರ್‌ರು ಹಿಂದೂ-ಮುಸ್ಲಿಂ ಮೈತ್ರಿ, ಕೋಮು ಸೌಹಾರ್ದವನ್ನು ತುಂಬು ಮನಸ್ಸಿನಿಂದ ಸ್ಪಷ್ಟ ಮಾತುಗಳಿಂದ ಅತ್ಯಂತ ಕಳಕಳಿಯಿಂದ ಪ್ರತಿಪಾದಿಸಿದ್ದಾರೆ. ಅವರ ಮಾತುಗಳನ್ನೇ ಕೇಳೋಣ:
‘‘ಭಾರತದ ಸ್ವಾತಂತ್ರದಿಂದ ಬ್ರಿಟಿಷರಿಗಾಗಬಹುದಾದ ಅಪಾಯವನ್ನು ಮೊತ್ತಮೊದಲು ಗ್ರಹಿಸಿದವರು ಪುಣೆಯ ನಾನಾ ಫಡ್ನವೀಸ್ ಮತ್ತು ಮೈಸೂರಿನ ಹೈದರ್.’’
ನಾನಾ ಫಡ್ನವೀಸನ ಭವ್ಯ ಭಾರತ ದೃಶ್ಯವನ್ನು ಪ್ರಸ್ತಾವಿಸುತ್ತ ಸಾವರ್ಕರ್,
 ‘‘ಹಿಂದೂಸ್ಥಾನ ಎಂಬುದರ ಅರ್ಥ ಇಸ್ಲಾಂ ಮತಾವಲಂಬಿಗಳೂ ಹಿಂದೂ ಧರ್ಮಾವಲಂಬಿಗಳೂ ಒಂದಾಗಿ ಬಾಳುವ ಸಂಯುಕ್ತ ಸಂಸ್ಥಾನ. ಎಲ್ಲಿಯವರೆಗೆ ಮಹಮ್ಮದೀಯರು ಈ ದೇಶವನ್ನಾಳುವ ಪರಕೀಯರಾಗಿದ್ದರೋ, ಅಲ್ಲಿಯ ತನಕ ಅವರೊಡನೆ ಸೋದರರಂತೆ ಬದುಕುವುದು ಹಿಂದೂಗಳು ತಮ್ಮ ದೌರ್ಬಲ್ಯವನ್ನು ಅಂಗೀಕರಿಸಿದಂತೆಯೇ ಆಗಿತ್ತು. ಆದ್ದರಿಂದ ಅಲ್ಲಿಯವರೆಗೆ ಮಹಮ್ಮದೀಯರು ಪರಕೀಯರೆಂದು ಹಿಂದೂಗಳು ಭಾವಿಸಬೇಕಾದ್ದು ಅಗತ್ಯವಾಗಿತ್ತು. ಮತ್ತೆ ಮಹಮ್ಮದೀಯರ ಈ ಅರಸೊತ್ತಿಗೆ (ಆಳ್ವಿಕೆ)ಯನ್ನು ಪಂಜಾಬದಲ್ಲಿ ಗುರು ಗೋವಿಂದ ಸಿಂಗ್, ರಜಪೂತರಲ್ಲಿ ರಾಣಾಪ್ರತಾಪ್, ಬುಂದೇಲ್ ಖಂಡದಲ್ಲಿ ಛಾತ್ರಸಾಲ, ದಿಲ್ಲಿಯ ಸಿಂಹಾಸನದ ಮೇಲೆ ಸಹಿತ ಮರಾಠರು ಕುಳಿತ ಮೇಲೆ ಮಹಮ್ಮದೀಯರ ಆಳ್ವಿಕೆಯನ್ನು ಧ್ವಂಸ ಮಾಡಿದರು. ಆಗ ಮಹಮ್ಮದೀಯರೊಡನೆ ಹಿಂದೂಗಳೂ ಕೈ ಜೋಡಿಸುವುದು ರಾಷ್ಟ್ರೀಯ ಲಜ್ಜಾಸ್ಪದ ಸಂಗತಿಯಾಗಲಿಲ್ಲ. ಅದರ ಬದಲು (ಅವರೊಡನೆ ಕೈ ಜೋಡಿಸುವುದು) ಔದಾರ್ಯದ ಕಾರ್ಯವಾಯಿತು. ಆದ್ದರಿಂದ, ಈಗ ಹಿಂದೂಗಳು ಮಹಮ್ಮದೀಯರ ವೈರವನ್ನು ಭೂತಕಾಲದ ಗರ್ಭದಲ್ಲಿ ಕಟ್ಟಿ ಎಸೆಯಬೇಕು. ಇಂದಿನ ಅವರ ನಮ್ಮ ಸಂಬಂಧ, ಅವರು ಆಳುವವರು ನಾವು ಅವರ ಅಧೀನರು ಎಂಬಂತೆ ಅಲ್ಲ; ವಿದೇಶೀಯರು ಸ್ವದೇಶಿಯರಂತೆ ಮಾತ್ರ ಅಲ್ಲ. ಅವರ ನಮ್ಮ ಸಂಬಂಧ ಕೇವಲ ಸೋದರ ಸಂಬಂಧ. ಆದರೆ ವ್ಯತ್ಯಾಸವಿಷ್ಟೆ: ಧಾರ್ಮಿಕ ಭಿನ್ನತೆ. ಏಕೆಂದರೆ ಅವರಿಬ್ಬರೂ ಹಿಂದೂಸ್ಥಾನದ ಮಣ್ಣಿನ ಮಕ್ಕಳು. ಅವರ ಹೆಸರುಗಳು ಬೇರೆ ಬೇರೆ. ಆದರೆ ಅವರಿಬ್ಬರೂ ಒಬ್ಬ ತಾಯಿಯ ಮಕ್ಕಳು. ಆದ್ದರಿಂದ ಭಾರತ ಈ ಇಬ್ಬರು ಮಕ್ಕಳ ತಾಯಿ. ಅವರು ರಕ್ತ ಸಂಬಂಧಿಗಳು. ನಾನಾ ಫಡ್ನವೀಸ್, ದಿಲ್ಲಿಯ ಬಹದ್ದೂರ್ ಷಹ, ವೌಲ್ವಿ ಮುಹಮ್ಮದ್ ಷಹ, ಖಾನ್ ಬಹದ್ದೂರ ಖಾನ್ ಮುಂತಾದ ನಾಯಕರೆಲ್ಲ ಅವರ ವೈರತ್ವವನ್ನೆಲ್ಲ ಬದಿಗಿಟ್ಟು ಒಂದೇ ಧ್ವಜದಡಿಯಲ್ಲಿ ಸೇರಿದರು. ಒಂದು ಮಾತಿನಲ್ಲಿ ಹೇಳುವುದಾದರೆ ನಾನಾಸಾಹೇಬ್ ಮತ್ತು ಅಜಿಮುಲ್ಲಾ ಅವರ ಧೋರಣೆ ಏನಾಗಿತ್ತೆಂದರೆ ಹಿಂದೂಗಳು ಮತ್ತು ಮಹಮ್ಮದೀಯರು ಹೆಗಲಿಗೆ ಹೆಗಲುಕೊಟ್ಟು ತಮ್ಮ ದೇಶಕ್ಕಾಗಿ ಹೋರಾಡಬೇಕು. ಸ್ವಾತಂತ್ರಾ ನಂತರ, ಭಾರತದ ರಾಜ ಮಹಾರಾಜರ ಆಳ್ವಿಕೆಯಲ್ಲಿ ಭಾರತ ಸಂಯುಕ್ತ ಸಂಸ್ಥಾನಗಳನ್ನು ರಚಿಸುವುದೇ ಆಗಿತ್ತು.’’
United states of india- ಈ ಮಾತುಗಳನ್ನು ಸಾವರ್ಕರ್ ಬರೆಯುವಾಗ ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಸ್ವಾತಂತ್ರಾನಂತರ ಈ ದೇಶದಲ್ಲಿ ಹಿಂದೂ-ಮುಸ್ಲಿಮರು ಹೇಗೆ ಬದುಕಬೇಕು, ಎಂಥ ಸ್ವರಾಜ್ಯ ಸ್ಥಾಪನೆ ಆಗಬೇಕು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಸ್ವತಂತ್ರ ಭಾರತ ರಾಜಮಹಾರಾಜರ ಆಳ್ವಿಕೆಯಲ್ಲಿ ಬರಬೇಕು ಎಂಬುದು ಆಗ ಅವರ ಅಭಿಪ್ರಾಯವಾಗಿದ್ದಿರಬಹುದು. ಆ ಮಾತನ್ನು ಬದಿಗಿಟ್ಟು, ಭಾರತ ಭಾರತ ಸಂಯುಕ್ತ ಸಂಸ್ಥಾನಗಳ ರಾಷ್ಟ್ರವಾಗಬೇಕೆಂಬುದು ಒಪ್ಪಬಹುದಾದ ಮಾತೆ. ಅದಕ್ಕಿಂತ ಹೆಚ್ಚಾಗಿ ಹಿಂದೂ-ಮುಸ್ಲಿಮರು ಭಾರತಮಾತೆಯ ಒಬ್ಬ ತಾಯಿಯ ಮಕ್ಕಳು. ರಕ್ತ ಸಂಬಂಧಿ ಸೋದರರು ಎಂಬ ಅವರ ಭಾವನೆ ಮೆಚ್ಚತಕ್ಕ ಮಾತು! ಪ್ರಶಂಸನೀಯ ಅಮೋಘವಾಣಿ!


ಇಂತಹ ಅಮೋಘ ಅಮೂಲ್ಯ ಭಾವನೆಗಳನ್ನು ಹೊಂದಿದ್ದ ಈ ಮಹಾನುಭಾವರೇ ಮುಂದೆ ಅಂಡಮಾನ್ ದ್ವೀಪದಲ್ಲಿ ಏಕಾಂತ ತುರಂಗ ವಾಸವನ್ನು ಅನುಭವಿಸಿ ಬ್ರಿಟಿಷ್ ಸರಕಾರಕ್ಕೆ ದಯಾಭಿಕ್ಷೆ ಮನವಿಯನ್ನು ಅರ್ಪಿಸಿ ಮುಂದೆ ತಾವು ಯಾವ ರಾಜಕೀಯ ಚಟುವಟಿಕೆಯಲ್ಲೂ ಭಾಗವಹಿಸುವುದಿಲ್ಲ, ಭಾಷಣ ಮಾಡುವುದಿಲ್ಲ, ಆ ಕುರಿತು ಬರೆಯುವುದಿಲ್ಲ...ಎಂಬ ಮುಚ್ಚಳಿಕೆ ಬರೆದುಕೊಟ್ಟು ಬಿಡುಗಡೆ ಹೊಂದಿಬಂದರು. ರತ್ನಗಿರಿ ನಗರದಲ್ಲಿ ದಿಗ್ಬಂಧನದಲ್ಲಿ ಉಳಿದರು. ಬಿಡುಗಡೆ ಆಗಿ ಬಂದ ಮೇಲೆ ಅವರ ರಾಜಕೀಯ ದೃಷ್ಟಿ, ಧೋರಣೆಯೆ ಸಂಪೂರ್ಣ ಬದಲಾವಣೆ ಹೊಂದಿ, ಹಿಂದೂ -ಮುಸ್ಲಿಂ ಸೋದರ ಬಾಂಧವ್ಯ ಪ್ರತಿಪಾದನೆಗೆ ತಿಲಾಂಜಲಿ ಇತ್ತುದ್ದು ಅವರ ತ್ಯಾಗಮಯ ಜೀವನದ ದೊಡ್ಡ ದುರಂತವೆಂದೇ ಹೇಳಬೇಕು ಹಾಗೂ ಈ ದೇಶದ ದುರ್ದೈವವೆಂದೇ ಭಾವಿಸಬೇಕು. ಅವರು 1923ರಿಂದ ಪ್ರತಿಪಾದಿಸುತ್ತ ಬಂದ ಸಾಂಸ್ಕೃತಿಕ ಆಧಾರದ ರಾಷ್ಟ್ರೀಯತೆ ಹಿಂದುತ್ವದ ಹಿರಿಮೆಯ ಸಿದ್ಧಾಂತವನ್ನು ರೂಪಿಸಿ, ಎಡೆಬಿಡದೆ ಪ್ರತಿಪಾದಿಸಿ ಸಂಕುಚಿತ ಜಾತೀಯತೆಯ ಕೋಮುವಾದದ ವಿಷಬೀಜ ಬಿತ್ತುವುದಕ್ಕೆ ಕಾರಣರಾದರು. ಮುಸ್ಲಿಮರು, ಹಿಂದೂಗಳು ಯಾವ ಮಾತ್ರಕ್ಕೂ ಒಂದಾಗಿ ಬಾಳಲಾರರು ಎಂಬ ಮೂಲಭೂತವಾದ ದೃಷ್ಟಿ ಯಾಕೆ ಬೆಳೆಯಿತೋ ಹೇಳಲಾಗದು. ಕೆಲವರು ಊಹಿಸುವಂತೆ ತಾವು ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಬ್ರಿಟಿಷ್ ಸರಕಾರಕ್ಕೆ ಬರೆದುಕೊಟ್ಟ ಮುಚ್ಚಳಿಕೆಯಂತೆ ನಡೆದುಕೊಳ್ಳಲು ತಮ್ಮಲ್ಲಿ ಅದುಮಿಟ್ಟುಕೊಂಡಿದ್ದ ದೇಶಪ್ರೇಮ, ಬ್ರಿಟಿಷರ ದ್ವೇಷವನ್ನು ಮುಸ್ಲಿಂ ಜನಾಂಗದ ಮೇಲೆ ಹರಿಸಿದರು ಎಂಬುದರಲ್ಲಿ ಎಷ್ಟರ ಮಟ್ಟಿಗೆ ಸತ್ಯಾಂಶವಿದೆಯೋ ಹೇಳಲಾಗದು.
ಸಾವರ್ಕರ್ ರೂಪಿಸಿದ ಈ ಸಿದ್ಧಾಂತದ ಬೀಜರೂಪವನ್ನು ಅವಲಂಬಿಸಿ ಡಾ. ಹೆಡ್ಗೆವಾರ್ ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ (ಆರೆಸ್ಸೆಸ್) ಸ್ಥಾಪನೆ ಮಾಡಿ ದ್ವಿ-ರಾಷ್ಟ್ರ ಭಾವನೆಯ ವಿಷವೃಕ್ಷವನ್ನು ಬೆಳೆಸಿದರು. ಹಿಂದೂ ಧರ್ಮದ ಶ್ರೇಷ್ಠತೆ ಆಧಾರದ ಮೇಲೆ ಹಿಂದುತ್ವ ಸಿದ್ಧಾಂತದ ಕೊಂಬೆರೆಂಬೆಗಳು ಚಿಗುರೊಡೆದವು. ಹಿಂದುತ್ವದ ಔನ್ನತ್ಯವನ್ನು ಪ್ರತಿಪಾದಿಸುತ್ತ ಆರ್ಯ ಜನಾಂಗದ ಶ್ರೇಷ್ಠತೆಯ ಕುಸುಮ ವಿಕಸನವನ್ನು ಪೋಷಿಸಿದರು. ಮನುವಾದದ ಪರಮೋಚ್ಚ ಫಲವನ್ನು ಹುಲುಸಾಗಿ ಬೆಳೆಸಿದರು. ಅದರಲ್ಲಿ ಪರಮತ ದ್ವೇಷ, ಅನ್ಯಧರ್ಮಗಳ -ತತ್ರಾಪಿ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳ ಅಸಹಿಷ್ಣುತೆಯ ಕಹಿಫಲಗಳನ್ನು ತಿನ್ನಿಸಿದರು! ಇದರ ಫಲವಾಗಿ ಮತಾಂತರ ವಿರೋಧ, ಚರ್ಚು ಮಸೀದಿಗಳ ಧ್ವಂಸ, ಮುಸ್ಲಿಮರ ಮತ್ತು ಕ್ರಿಶ್ಚಿಯನ್ನರ ದ್ವೇಷ ಉಲ್ಬಣಿಸಿ ಅವರೂ, ಹಿಂದೂಗಳೂ ಒಂದಾಗಿ ಬಾಳಲಾರರು ಎಂಬ ನಿಲುಮೆಗೆ ಬಂದರು ಸಂಘಪರಿವಾರದ ಸದಸ್ಯರು!! ಅನ್ಯಮತೀಯರಿಂದಲೇ ತಮ್ಮ ‘ಧರ್ಮ’ ಅವನತಿ ಹೊಂದುತ್ತದೆ, ಅದನ್ನು ಎದುರಿಸಿ ತಮ್ಮ ಧರ್ಮ, ತಮ್ಮ ದೇಶವನ್ನು ಸಂರಕ್ಷಿಸಬೇಕೆಂಬ ‘ಆದರ್ಶ ರಾಷ್ಟ್ರ’ ನಿರ್ಮಾಣ ಕಾರ್ಯದಲ್ಲಿ ತೊಡಗಿದರು. ಆ ಆದರ್ಶ ಸಿದ್ಧಿ ರಾಜಕೀಯ ಬಲಸಂವರ್ಧನೆಯಿಂದಲೇ ಸಾಧ್ಯ ಎಂಬ ಸಿದ್ಧಾಂತವನ್ನು ರೂಪಿಸಿ ಹಿಂದೂ ಮಹಾಸಭೆ ಸಂಸ್ಥಾಪನೆ ಆಯಿತು! ಆರೆಸ್ಸೆಸ್‌ಗೂ ರಾಜಕಿಯಕ್ಕೂ ಸಂಬಂಧವಿಲ್ಲ ಎಂಬುದಾಗಿ ಬಹಿರಂಗವಾಗಿ ಘೋಷಿಸಿದರು. ರಾಜಕೀಯ ಚಟುವಟಿಕೆಯೇ ಅದರ ಜೀವ ಜೀವಾಳ. ಅವರ ಈ ಉದ್ದೇಶ ಹಿಂದೂ ಮಹಾಸಭೆಯ ಈಗಿನ ಅವತಾರವಾದ ಭಾರತೀಯ ಜನತಾ ಪಕ್ಷದ ಮೂಗುದಾರವನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ಆಡಿಸುತ್ತಿರುವುದೇ ಪ್ರತ್ಯಕ್ಷ ಪ್ರಮಾಣ.
ಈಗ ಹಿನ್ನೋಟ ಬೀರಿ ಗಾಂಧಿ ಹತ್ಯೆಗೆ ಏನು ಕಾರಣ? ಅದರಲ್ಲಿ ಪಾತ್ರ ವಹಿಸಿದ ಪ್ರಮುಖರು ಯಾರು? ಎಂಬುದನ್ನು ಪುನರವಲೋಕನ ಮಾಡಬೇಕು.
(ಬುಧವಾರದ ಸಂಚಿಕೆಗೆ ಮುಂದುವರಿಯುವುದು) 

Writer - ಕೋ. ಚೆನ್ನಬಸಪ್ಪ

contributor

Editor - ಕೋ. ಚೆನ್ನಬಸಪ್ಪ

contributor

Similar News

ಜಗದಗಲ
ಜಗ ದಗಲ