×
Ad

'ಸ್ವಚ್ಛ ಭಾರತ್' ಪರಿಣಾಮ ಕುರಿತ ರಿಯಾಲಿಟಿ ಚೆಕ್: ಬೆಳಕಿಗೆ ಬಂದ ಬೆಚ್ಚಿ ಬೀಳಿಸುವ ಅಂಶಗಳು

Update: 2019-05-18 09:28 IST

ಶಿಕ್ವಾರಾ, ಮೇ 18: ಹೊಸದಿಲ್ಲಿಯ ದಕ್ಷಿಣಕ್ಕೆ ಎರಡು ಗಂಟೆ ಪ್ರಯಾಣಿಸಿದರೆ ಶಿಕ್ವಾರಾ ಗ್ರಾಮ ಸಿಗುತ್ತದೆ. ನಸುಕಿನಲ್ಲೇ ಹಲವಾರು ಮಂದಿ ಇಲ್ಲಿ ಗುಂಪು ಸೇರುತ್ತಾರೆ. ಗ್ರಾಮದ ಮೂಲಕ ಹರಿಯುವ ತೊರೆಯ ದಂಡೆಯತ್ತ ಸಾಗುತ್ತಾರೆ. ಏಕೆ ಗೊತ್ತೇ? ಬಯಲುಶೌಚಕ್ಕೆ!

ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ್ ಯೋಜನೆ ಎಷ್ಟು ಫಲ ನೀಡಿದೆ ಎಂಬ ರಿಯಾಲಿಟಿ ಚೆಕ್ ವೇಳೆ ಈ ಅಂಶ ಬೆಳಕಿಗೆ ಬಂದಿದೆ. "ಶಿಕ್ವಾರಾ ಗ್ರಾಮದಲ್ಲಿ ಸುಮಾರು 1,600 ಮನೆಗಳಿವೆ. ಈ ಪೈಕಿ 400ಕ್ಕೂ ಹೆಚ್ಚು ಮನೆಗಳಿಗೆ ಇಂದಿಗೂ ಶೌಚಾಲಯ ಇಲ್ಲ" ಎಂದು ಉತ್ತರ ಹರ್ಯಾಣದ ಗ್ರಾಮ ಮಂಡಳಿ ಅಧಿಕಾರಿ ಖುರ್ಷಿದ್ ಅಹ್ಮದ್ ಹೇಳುತ್ತಾರೆ.

ಕೇಂದ್ರ ಸರ್ಕಾರದ ದಾಖಲೆಗಳ ಪ್ರಕಾರ, ಎರಡೂವರೆ ಕೋಟಿ ಜನಸಂಖ್ಯೆ ಹೊಂದಿರುವ ಹರ್ಯಾಣ ಬಯಲುಶೌಚ ಮುಕ್ತ ರಾಜ್ಯ. ವಿಶ್ವಬ್ಯಾಂಕ್ ನೆರವಿನ ರಾಷ್ಟ್ರವ್ಯಾಪಿ ಸಮೀಕ್ಷೆ ಪ್ರಕಾರ, ಶೇಕಡ 0.3ರಷ್ಟು ಮಂದಿ ಮಾತ್ರ ಹರ್ಯಾಣದ ಗ್ರಾಮೀಣ ಜನರು ಬಯಲುಶೌಚ ಮಾಡುತ್ತಾರೆ. ಆದರೆ ರಾಷ್ಟ್ರವ್ಯಾಪಿ ಸಮೀಕ್ಷೆ ಕೈಗೊಂಡ ಸಮೀಕ್ಷಾ ಅಧಿಕಾರಿಗಳನ್ನು ಮತ್ತು ಪಾಲ್ಗೊಂಡಿದ್ದ ಇಬ್ಬರು ಸಂಶೋಧಕರನ್ನು ಸಂದರ್ಶಿಸಿದಾಗ, ಸಮೀಕ್ಷೆಯ ವಿಧಾನ ಹಾಗೂ ಫಲಿತಾಂಶ ಬಗ್ಗೆಯೇ ಸಂದೇಹ ವ್ಯಕ್ತಪಡಿಸಿದರು.

ರಾಯ್ಟರ್ಸ್‌ನಲ್ಲಿ ಪ್ರಕಟವಾದ ಲೇಖನಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ಶುಕ್ರವಾರ ಹೇಳಿಕೆ ನೀಡಿ, "ಕೇವಲ ಐದು ವರ್ಷಗಳಲ್ಲಿ 55 ಕೋಟಿ ಮಂದಿಯನ್ನು ಬಯಲುಶೌಚದಿಂದ ಮುಕ್ತಗೊಳಿಸಲಾಗಿದೆ" ಎಂದು ಪ್ರತಿಪಾದಿಸಿದೆ.

ಶಿಕ್ವಾರದಲ್ಲಿ 27 ಮಂದಿಯನ್ನು ಸಂಪರ್ಕಿಸಿದಾಗ, 330 ಮನೆಗಳಿಗೆ ಇನ್ನೂ ಶೌಚಾಲಯ ಇಲ್ಲ ಎಂಬ ಅಂಶ ದೃಢಪಟ್ಟಿದೆ. ನೀರಿನ ಲಭ್ಯತೆ ಕೊರತೆ ಅಥವಾ ತಮ್ಮ ಹವ್ಯಾಸ ಬದಲಿಸಲು ಜನ ನಿರಾಕರಿಸಿರುವುದು ಇದಕ್ಕೆ ಕಾರಣ. ಒಂದು ಗಂಟೆ ಮತ್ತೆ ಪ್ರಯಾಣ ಕೈಗೊಂಡು ನಾಂಗ್ಲಾ ಕಾನ್ಪುರ ಗ್ರಾಮ ತಲುಪಿದಾಗ, ಅಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಇಂಥ ಪ್ರತ್ಯೇಕ ಘಟನೆಗಳಿಗೆ ಸ್ಪಂದಿಸುವುದು ಕಷ್ಟ ಎನ್ನುವುದು ಸಚಿವಾಲಯ ನೀಡುವ ಸಬೂಬು.

100 ಕೋಟಿ ಶೌಚಾಲಯ ನಿರ್ಮಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ನಡೆದ ಚುನಾವಣಾ ರ್ಯಾಲಿಯಲ್ಲಿ ಘೋಷಿಸಿದ್ದರು. ಫೆಬ್ರವರಿಯಲ್ಲಿ ಬಿಡುಗಡೆಯಾದ ದೇಶದ ವಾರ್ಷಿಕ ನೈರ್ಮಲ್ಯ ಸಮೀಕ್ಷೆ ವರದಿ ಪ್ರಕಾರ ಕೇವಲ 10ರಷ್ಟು ಗ್ರಾಮೀಣರು ಮಾತ್ರ ಬಯಲಲ್ಲಿ ಶೌಚಕಾರ್ಯ ಮಾಡುತ್ತಿದ್ದಾರೆ. ಆದರೆ ಸಮೀಕ್ಷಾ ವಿಧಾನದಲ್ಲೇ ಲೋಪಗಳಿವೆ ಎಂದು ಸಮೀಕ್ಷೆ ಕಾರ್ಯಯೋಜನೆ ರೂಪಿಸುವ ಸಭೆಗಳಲ್ಲಿ ಪಾಲ್ಗೊಂಡಿದ್ದ ಸಂಶೋಧಕ ನಿಖಿಲ್ ಶ್ರೀವಾಸ್ತವ ಹೇಳುತ್ತಾರೆ.

ರಾಯ್ಟರ್ಸ್‌ ರಿಯಾಲಿಟಿ ಚೆಕ್ ತಂಡ ಕರ್ನಾಟಕದ ಕೊಪ್ಪಳ ಜಿಲ್ಲೆಗೂ ಭೇಟಿ ನೀಡಿದೆ. 50 ಮಂದಿಯನ್ನು ಸಂದರ್ಶಿಸಿದಾಗ ಕನಿಷ್ಠ 150 ಮಂದಿ ಬಯಲು ಶೌಚದಲ್ಲಿ ತೊಡಗಿರುವ ಅಂಶ ಕಂಡುಬಂದಿದೆ. ಕರ್ನಾಟಕ ಕೂಡಾ ಕೇಂದ್ರದ ದಾಖಲೆಗಳ ಪ್ರಕಾರ ಬಯಲುಶೌಚ ಮುಕ್ತ ರಾಜ್ಯ. ತಾವು ಕೆಲಸ ಮಾಡುವ ಹೊಲಗಳ ಪಕ್ಕದಲ್ಲಿ ಶೌಚಾಲಯಗಳು ಇಲ್ಲದಿರುವುದು, ಕಳಪೆ ನಿರ್ಮಾಣ ಮತ್ತಿತರ ಕಾರಣದಿಂದ ಬಯಲು ಶೌಚಾಲಯವೇ ಮಿಗಿಲು ಎನ್ನುವುದು ಬಹುತೇಕ ಗ್ರಾಮೀಣರ ಅಭಿಪ್ರಾಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News