ಬಿಜೆಪಿ ವಿರೋಧಿ ಕೂಟಕ್ಕೆ ಕೆಸಿಆರ್‌ಗೂ ಮುಕ್ತ ಸ್ವಾಗತ: ನಾಯ್ಡು

Update: 2019-05-18 04:08 GMT

ಹೊಸದಿಲ್ಲಿ, ಮೇ 18: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ಬಿಜೆಪಿ ವಿರೋಧಿ ಕೂಟಕ್ಕೆ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಸೇರಿದಂತೆ ಎಲ್ಲ ಪಕ್ಷಗಳಿಗೆ ಮುಕ್ತ ಸ್ವಾಗತವಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರಕಟಿಸಿದ್ದಾರೆ.

ಬದ್ಧ ರಾಜಕೀಯ ವಿರೋಧಿ ಹಾಗೂ ನೆರೆ ರಾಜ್ಯದ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರಿಗೆ ಕೂಟಕ್ಕೆ ಆಹ್ವಾನ ನೀಡುವ ಮೂಲಕ ನಾಯ್ಡು ಅಚ್ಚರಿ ಮೂಡಿಸಿದ್ದಾರೆ. ಶುಕ್ರವಾರ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ ನಾಯ್ಡು, ಚುನಾವಣೋತ್ತರ ಮೈತ್ರಿ ಬಗ್ಗೆ ಮಾತುಕತೆ ನಡೆಸಿದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ, ಬಿಎಸ್ಪಿ ನಾಯಕಿ ಮಾಯಾವತಿಯವರನ್ನೂ ಶನಿವಾರ ಅವರು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಮೇ 23ಕ್ಕೆ ಫಲಿತಾಂಶ ಪ್ರಕಟವಾಗುವ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಕಾರ್ಯಕ್ಕೆ ನಾಯ್ಡು ಮುಂದಾಗಿದ್ದಾರೆ. ಬಿಜೆಪಿಯನ್ನು ವಿರೋಧಿಸುವ ಎಲ್ಲ ಪಕ್ಷಗಳಿಗೂ ಮಹಾಮೈತ್ರಿ ಕೂಟಕ್ಕೆ ಸ್ವಾಗತ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ಸೇತರ ಹಾಗೂ ಬಿಜೆಪಿಯೇತರ ಒಕ್ಕೂಟ ರಚನೆ ನಿಟ್ಟಿನಲ್ಲಿ ಕೆಸಿಆರ್ ಪ್ರಯತ್ನ ಆರಂಭಿಸಿದ್ದಾರೆ ಎನ್ನಲಾಗಿದೆ. ಆದರೆ ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಟಿಆರ್‌ಎಸ್ ಕಳೆದ ತಿಂಗಳು ಕಾಂಗ್ರೆಸ್ ಪಕ್ಷವನ್ನು ಸಂಪರ್ಕಿಸಿ, ಅತಂತ್ರ ಸಂಸತ್ ನಿರ್ಮಾಣವಾದಲ್ಲಿ ಎರಡೂ ಪಕ್ಷಗಳು ಪರಸ್ಪರ ಕೈಜೋಡಿಸುವ ಪ್ರಸ್ತಾಪ ಮುಂದಿಟ್ಟಿದೆ.

ಎಲ್ಲರನ್ನೂ ಭೇಟಿ ಮಾಡಿ, ಅವರ ಜತೆಗಿನ ಚರ್ಚೆ ಬಳಿಕ ಮುಂದಿನ ಕಾರ್ಯತಂತ್ರ ರೂಪಿಸುವುದಾಗಿ ನಾಯ್ಡು ಹೇಳಿದ್ದಾರೆ. ನಾಯ್ಡು ಹೇಳಿಕೆ ಬಗ್ಗೆ ಟಿಆರ್‌ಎಸ್ ಪ್ರತಿಕ್ರಿಯೆ ನೀಡಲಿಲ್ಲ. ಪಕ್ಷದ ಮುಖಂಡರನ್ನು ಸಂಪರ್ಕಿಸುವ ಪ್ರಯತ್ನ ಫಲ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News