ಪ್ರಧಾನಿ ಮೋದಿ ಪತ್ರಿಕಾಗೋಷ್ಠಿ ‘ಮನ್‌ಕೀ ಬಾತ್‌ನ ಕೊನೆಯ ಸಂಚಿಕೆ: ಅಖಿಲೇಶ್ ಯಾದವ್ ವ್ಯಂಗ್ಯ

Update: 2019-05-18 06:11 GMT

ಹೊಸದಿಲ್ಲಿ, ಮೇ 18: ಐದು ವರ್ಷಗಳಲ್ಲಿ ಮೊತ್ತ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ನಡೆಸಿದ್ದ ಪತ್ರಿಕಾಗೋಷ್ಠಿಯನ್ನು ವ್ಯಂಗ್ಯವಾಡಿದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಇದು ರೇಡಿಯೋದ ಬದಲಿಗೆ ಟಿವಿಯಲ್ಲಿ ಪ್ರಸಾರವಾದ ‘ಮನ್‌ಕೀ ಬಾತ್‌ನ ಕೊನೆಯ ಎಪಿಸೋಡ್’ನಂತೆ ಕಂಡಿತು ಎಂದು ಟ್ವೀಟ್ ಮಾಡಿದ್ದಾರೆ.

  ‘‘ಪ್ರಧಾನಿಗಳ ಮೊತ್ತ ಮೊದಲ ಪತ್ರಿಕಾಗೋಷ್ಠಿಯನ್ನು ನೋಡಿದ್ದೀರಾ? ಎಂದು ಅಭಿವೃದ್ಧಿ ಕೇಳುತ್ತಿದೆ. ಇದು ರೇಡಿಯೋ ಬದಲಿಗೆ ಟಿವಿಯಲ್ಲಿ ಪ್ರಸಾರವಾದ ಮನ್‌ಕೀ ಬಾತ್‌ನ ಕೊನೆಯ ಸಂಚಿಕೆಯಂತೆ ಕಂಡಿತು. ಮಾಧ್ಯಮ ಪ್ರತಿನಿಧಿಗೆ ಪ್ರಶ್ನೆ ಕೇಳಲು ಅವಕಾಶ ಸಿಗಲಿಲ್ಲ. ಶಿಸ್ತುಬದ್ಧ ಸೈನಿಕ (ಮೋದಿ) ವೌನಕ್ಕೆ ಶರಣಾಗಿದ್ದರು’’ಎಂದು ಯಾದವ್ ಟ್ವೀಟ್ ಮಾಡಿದ್ದಾರೆ.

ಇದು ಬಿಜೆಪಿಯ ವಿದಾಯದ ಪತ್ರಿಕಾಗೋಷ್ಠಿ ಎಂದು ಲೋಕತಾಂತ್ರಿಕ ಜನತಾದಳದ ಅಧ್ಯಕ್ಷ ಶರದ್ ಯಾದವ್  ಹೇಳಿದ್ದಾರೆ.

  ‘‘ಬಿಜೆಪಿ ಐದು ವರ್ಷಗಳ ಕಾಲ ಆಡಳಿತ ನಡೆಸಿದರೂ ಒಂದು ಬಾರಿಯೂ ಮಾಧ್ಯಮವನ್ನು ಎದುರಿಸದೇ ಇರುವುದು ದುರದೃಷ್ಟಕರ. ಇದು ಎಲ್ಲರನ್ನು ಕಾಡುತ್ತಿದ್ದ ಪ್ರಶ್ನೆಯಾಗಿತ್ತು. ಕೊನೆಯ ಹಂತದ ಲೋಕಸಭಾ ಚುನಾವಣೆಗೆ ಮೊದಲು ಪ್ರಧಾನಿ ತನ್ನ ದೇಹಭಾಷೆಯ ಮೂಲಕ ಸೋಲನ್ನು ಒಪ್ಪಿಕೊಂಡಿರುವುದು ಸ್ಪಷ್ಟವಾಗಿದೆ. ಇದು ಬಿಜೆಪಿ ಹಾಗೂ ಎನ್‌ಡಿಎ ಸರಕಾರದ ಕೊನೆಯ ಪತ್ರಿಕಾಗೊಷ್ಠಿಯಾಗಿ ಕಂಡುಬಂತು’’ ಎಂದು ಯಾದವ್ ಟ್ವೀಟ್ ಮಾಡಿದ್ದಾರೆ.

‘‘ಪತ್ರಿಕಾಗೋಷ್ಠಿಯಲ್ಲಿ ಕೇಳುವ ಪ್ರಶ್ನೆಗೆ ನಿಮ್ಮ ಪರವಾಗಿ ಬೇರೊಬ್ಬರು ಉತ್ತರಿಸಿದ್ದನ್ನು ನಾನು ಈ ತನಕ ನೋಡಿಲ್ಲ. ಪ್ರಧಾನಮಂತ್ರಿ ಕಚೇರಿಯ ಘನತೆಯನ್ನು ಇಷ್ಟೊಂದು ಕೆಳಮಟ್ಟಕ್ಕೆ ಇಳಿಸುವ ಅಗತ್ಯವಿರಲಿಲ್ಲ’’ ಎಂದು ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಹೇಳಿದ್ದಾರೆ.

 ‘‘ಇಂದು ಇಡೀ ದೇಶವೇ ಮೋದೀಜಿಯವರ ಬಾಡಿ ಲಾಂಗ್ವೇಜ್ ಹಾಗೂ ಸುದ್ದಿಗೋಷ್ಠಿಯನ್ನು ವೀಕ್ಷಿಸಿದೆ. ಮೋದೀಜಿ ಸೋಲನ್ನು ಒಪ್ಪಿಕೊಂಡಿರುವುದು ಇಡೀ ವಿಶ್ವವೇ ನೋಡಿದೆ. ಅವರು ಯಾವ ಪ್ರಶ್ನೆಗೂ ಉತ್ತರಿಸಲಿಲ್ಲ. ಯಾರೂ ಕೂಡ ಅವರನ್ನು ಪ್ರಶ್ನಿಸುವಂತಿರಲಿಲ್ಲ’’ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.

 ‘‘ಮೋದೀಜಿ ಅಭಿನಂದನೆಗಳು. ಅತ್ಯುತ್ತಮ ಪತ್ರಿಕಾಗೋಷ್ಠಿ. ಅರ್ಧಯುದ್ದವನ್ನು ತೋರಿಸಲಾಗಿದೆ. ಮುಂದಿನ ಬಾರಿ ಶಾ ನಿಮಗೆ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಅವಕಾಶ ನೀಡಬಹುದು’’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟರ್‌ನಲ್ಲಿ ಕುಟುಕಿದ್ದಾರೆ.

ಪ್ರಧಾನಿಯಾದ ಬಳಿಕ ಮೊದಲ ಬಾರಿ ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪ್ರಧಾನಿ ಮೋದಿ ಕೆಲವು ಹೊತ್ತು ಮಾತನಾಡಿದರು. ಪತ್ರಕರ್ತರು ನೇರವಾಗಿಯೇ ಅವರಿಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿ, ನಾನು ಶಿಸ್ತಿನ ಸೈನಿಕ. ಪಕ್ಷದ ಅಧ್ಯಕ್ಷರು ಎಲ್ಲ ಪ್ರಶ್ನೆಗೆ ಉತ್ತರಿಸುತ್ತಾರೆ ಎಂದು ಹೇಳಿ ಸುಮ್ಮನೆ ಕುಳಿತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News