ವಿಶ್ವಕಪ್‌ಗೆ ಕೇದಾರ್ ಜಾಧವ್ ಫಿಟ್

Update: 2019-05-18 06:45 GMT

  ಮುಂಬೈ, ಮೇ 18: ಭಾರತದ ಮಧ್ಯಮ ಕ್ರಮಾಂಕದ ದಾಂಡಿಗ ಕೇದಾರ್ ಜಾಧವ್ ಮುಂಬರುವ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸುವುದು ಅನುಮಾನವಾಗಿತ್ತು. ಇದೀಗ ಅವರು ಸಂಪೂರ್ಣ ಫಿಟ್ ಆಗಿದ್ದು ಮೇ 22 ರಂದು ಬೆಳಗ್ಗೆ ಟೀಮ್ ಇಂಡಿಯಾ ಸದಸ್ಯರೊಂದಿಗೆ ಲಂಡನ್ ವಿಮಾನ ಏರಲು ಸಜ್ಜಾಗಿದ್ದಾರೆ. ಈ ಬೆಳವಣಿಗೆ ಕೊಹ್ಲಿ ಪಡೆಗೆ ಶುಭ ಸೂಚನೆಯಾಗಿದೆ.

34ರ ಹರೆಯದ ಜಾಧವ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡಿದ್ದ ಕೊನೆಯ ಐಪಿಎಲ್ ಲೀಗ್ ಪಂದ್ಯದ ವೇಳೆ ಭುಜನೋವಿಗೆ ತುತ್ತಾಗಿದ್ದರು. ಟೀಮ್ ಇಂಡಿಯಾದ ಫಿಸಿಯೋ ಪ್ಯಾಟ್ರಿಕ್ ಫರ್ಹಟ್ ತೀವ್ರ ನಿಗಾವಹಿಸಿದ ಕಾರಣ ಜಾಧವ್ ಚೆನ್ನಾಗಿ ಚೇತರಿಸಿಕೊಂಡಿದ್ದಾರೆ. ಫಿಸಿಯೋ ಅವರು ಜಾಧವ್‌ರ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಿರುವ ವರದಿಯನ್ನು ಬಿಸಿಸಿಐಗೆ ನೀಡಿದ್ದಾರೆ.

 ಜಾಧವ್ ಹಾಗೂ ಪ್ಯಾಟ್ರಿಕ್ ಕಳೆದ ವಾರ ಪಂಚತಾರಾ ಹೊಟೇಲ್‌ನಲ್ಲಿ ಭೇಟಿಯಾಗಿದ್ದರು. ಕೆಲವು ತರಬೇತಿ ನಡೆಸಿದ ಬಳಿಕ ಗುರುವಾರ ಬೆಳಗ್ಗೆ ಫರ್ಹಟ್ ನಡೆಸಿದ ಫಿಟ್ನೆಸ್ ಪರೀಕ್ಷೆಯಲ್ಲಿ ಜಾಧವ್ ಪಾಸಾಗಿದ್ದಾರೆ.

ಜಾಧವ್ 59 ಏಕದಿನ ಪಂದ್ಯಗಳಲ್ಲಿ 43.50ರ ಸರಾಸರಿಯಲ್ಲಿ 102.50ರ ಸ್ಟ್ರೈಕ್‌ರೇಟ್‌ನಲ್ಲಿ 2 ಶತಕ ಹಾಗೂ 5 ಅರ್ಧಶತಕಗಳ ಸಹಿತ 1,174 ರನ್ ಕಲೆ ಹಾಕಿದ್ದಾರೆ.

ಉಪಯುಕ್ತ ಅರೆಕಾಲಿಕ ಬೌಲರ್ ಕೂಡ ಆಗಿರುವ ಜಾಧವ್ ಈ ತನಕ 27 ವಿಕೆಟ್‌ಗಳನ್ನು ತನ್ನ ಖಾತೆ ಸೇರಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News