ಚಂಡಮಾರುತದಿಂದ ಮನೆ ಕಳೆದುಕೊಂಡ ದಲಿತನಿಗೆ ಈಗ ಶೌಚಾಲಯವೇ ಆಸರೆ

Update: 2019-05-18 15:55 GMT

ಕೇಂದ್ರಪಾಡಾ (ಒಡಿಶಾ),ಮೇ 18:ಇತ್ತೀಚಿಗೆ ಒಡಿಶಾವನ್ನು ಅಪ್ಪಳಿಸಿದ್ದ ಫನಿ ಚಂಡಮಾರುತದ ಅಬ್ಬರಕ್ಕೆ ತನ್ನ ಗುಡಿಸಲನ್ನು ಕಳೆದುಕೊಂಡಿರುವ ಕೇಂದ್ರಪಾಡಾ ಜಿಲ್ಲೆಯ ರಘುದೇಯಿಪುರ ಗ್ರಾಮದ ದಲಿತ ವ್ಯಕ್ತಿಯೋರ್ವ ಕೇಂದ್ರ ಸರಕಾರದ ಸ್ವಚ್ಛ ಭಾರತ ಅಭಿಯಾನದಡಿ ತನಗೆ ದೊರಕಿರುವ ಶೌಚಾಯಲದಲ್ಲಿ ವಾಸವಾಗಿದ್ದಾನೆ.

 ‘‘ಚಂಡಮಾರುತ ನನ್ನ ಮನೆಯನ್ನು ಧ್ವಂಸಗೊಳಿಸಿದೆ,ಆದರೆ ಶೌಚಾಲಯ ಉಳಿದುಕೊಂಡಿದೆ. ನಾನೂ ಎಲ್ಲೂ ಹೋಗುವಂತಿಲ್ಲ. ಎರಡು ವರ್ಷಗಳ ಹಿಂದೆ ಮಂಜೂರಾಗಿದ್ದ ಶೌಚಾಲಯವೇ ಈಗ ನಮಗೆ ಮನೆಯಾಗಿದೆ. ಇಲ್ಲಿ ಎಷ್ಟು ಸಮಯ ಉಳಿಯುತ್ತೇವೆ ಎನ್ನ್ನುವುದು ಗೊತ್ತಿಲ್ಲ ’’ಎಂದು 7 ಅಡಿX6 ಅಡಿ ವಿಸ್ತೀರ್ಣದ ಶೌಚಾಲಯದಲ್ಲಿ ಪತ್ನಿ ಮತ್ತು ಇಬ್ಬರು ವಯಸ್ಕ ಪುತ್ರಿಯರ ಜೊತೆ ದಿನದೂಡುತ್ತಿರುವ ಭೂರಹಿತ ದಿನಗೂಲಿ ಕಾರ್ಮಿಕ ಖಿರೋದ್ ಜೆನಾ(58) ಹೇಳಿದರು.

ಮನೆಯನ್ನು ಪುನರ್‌ನಿರ್ಮಿಸಲು ಹಣವಿಲ್ಲದ ಜೆನಾ ಅದಕ್ಕಾಗಿ ಸರಕಾರದಿಂದ ಪರಿಹಾರ ಮಂಜೂರಾಗುವುದನ್ನು ಕಾಯುತ್ತಿದ್ದಾರೆ. ಶೌಚಾಲಯವನ್ನು ಮನೆಯನ್ನಾಗಿ ಮಾಡಿಕೊಂಡಿರುವದರಿಂದ ಈ ಕುಟುಂಬವೀಗ ಬಯಲುಶೌಚಕ್ಕೆ ಮೊರೆ ಹೋಗಿದೆ.

‘‘ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಥವಾ ಬಿಜು ಪಕ್ಕಾ ಮನೆ ಯೋಜನೆಯಡಿ ವಸತಿ ಅನುದಾನಕ್ಕೆ ಅರ್ಜಿ ಸಲ್ಲಿಸಿದ್ದೆ. ಆದರೆ ಅದು ಲಭಿಸಲಿಲ್ಲ. ನನ್ನ ಕಚ್ಚಾ ಮನೆ ಪಕ್ಕಾ ಮನೆಯ ರೂಪ ಪಡೆದುಕೊಂಡಿದ್ದರೆ ಪ್ರಾಯಶಃ ಚಂಡಮಾರುತದಲ್ಲಿ ಉಳಿದುಕೊಳ್ಳುತ್ತಿತ್ತು. ಆದರೆ ನಮ್ಮ ಹಣೆಯಲ್ಲಿ ಅದು ಬರೆದಿರಲಿಲ್ಲ ’’ ಎಂದು ಜೆನಾ ಅಳಲು ತೋಡಿಕೊಂಡರು.

ಜೆನಾ ಕುಟುಂಬ ಶೌಚಾಲಯದಲ್ಲಿ ವಾಸವಿರುವುದು ನಮ್ಮ ಗಮನಕ್ಕೆ ಬಂದಿದೆ. ಚಂಡಮಾರುತ ನಷ್ಟ ಪರಿಹಾರ ಮತ್ತು ಪ್ರತ್ಯೇಕ ವಸತಿ ಅನುದಾನವನ್ನು ಅವರಿಗೆ ಶೀಘ್ರವೇ ವಿತರಿಸಲಾಗುವುದು ಎಂದು ಜಿಲ್ಲಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News