ಪುಲ್ವಾಮಾ ಎನ್‌ಕೌಂಟರ್: ಮೂವರು ಉಗ್ರರ ಹತ್ಯೆ

Update: 2019-05-18 17:33 GMT

ಹೊಸದಿಲ್ಲಿ, ಮೇ 18: ಜಮ್ಮು ಹಾಗೂ ಕಾಶ್ಮೀರದ ಪುಲ್ವಾಮದಲ್ಲಿ ಶನಿವಾರ ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್‌ನ ಮೂವರು ಉಗ್ರರು ಹತರಾಗಿದ್ದಾರೆ.

ವಿಶ್ವಾಸಾರ್ಹ ಮಾಹಿತಿ ಆಧರಿಸಿ ಪೊಲೀಸರು ಹಾಗೂ ಭದ್ರತಾ ಪಡೆ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪುರದ ಪಂಝಗಾಂವ್ ಅನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ನಡೆಸಿತು. ಈ ಸಂದರ್ಭ ಅಡಗಿದ್ದ ಉಗ್ರರು ಗುಂಡು ಹಾರಿಸಿದರು. ಶೋಧ ತಂಡ ಸೂಕ್ತ ಪ್ರತ್ಯುತ್ತರ ನೀಡಿತು. ಈ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತರಾದರು ಎಂದು ಪೊಲೀಸರು ತಿಳಿಸಿದ್ದಾರೆ.

ಎನ್‌ಕೌಂಟರ್‌ನಲ್ಲಿ ಹತರಾದ ಉಗ್ರರನ್ನು ಆವಂತಿಪುರದ ಪಂಝಗಾಂವ್‌ನ ಶೌಕತ್ ದಾರ್, ಸೋಪೊರೆಯ ವಡೂರಾ ಪಯೀನ್‌ನ ಇರ್ಫಾನ್ ವಾರ್ ಹಾಗೂ ಪುಲ್ವಾಮಾ ತಹಾಬ್‌ನ ಮುಝಪ್ಫರ್ ಶೇಕ್ ಎಂದು ಗುರುತಿಸಲಾಗಿದೆ.

ಈ ಮೂವರು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಗೆ ಸೇರಿದವರು. ಭದ್ರತಾ ಠಾಣೆ ಮೇಲೆ ದಾಳಿ ಹಾಗೂ ನಾಗರಿಕರ ಮೇಲಿನ ದೌರ್ಜನ್ಯ ಸೇರಿದಂತೆ ಹಲವು ಭಯೋತ್ಪಾದನ ಪ್ರಕರಣಗಳಿಗೆ ಸಂಬಂಧಿಸಿ ಇವರು ಬೇಕಾದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶೌಕತ್ ದಾರ್ 2018ರಲ್ಲಿ ಸೇನಾ ಯೋಧ ಔರಂಗಜೇಬ್ ಹಾಗೂ ಪೊಲೀಸ್ ಸಿಬ್ಬಂದಿ ಅಕೀಬ್ ಅಹ್ಮದ್ ವಾಗೆ ಅವರನ್ನು ಹತ್ಯೆ ನಡೆಸಿದ ತಂಡದ ಸದಸ್ಯನಾಗಿದ್ದಾನೆ. ಆತನ ವಿರುದ್ಧ ಹಲವು ಭಯೋತ್ಪಾದನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News