ಬರ...ಬರ... : ಜನರ ಬವಣೆ ಕೇಳುವವರಿಲ್ಲ...

Update: 2019-05-19 07:31 GMT

ದಕ್ಷಿಣ ಭಾರತದ ರಾಜ್ಯಗಳಲ್ಲಿ ಲೋಕಸಭಾ ಚುನಾವಣೆ ಬಂದು, ಹೋಯಿತಾದರೂ ಅವು ಎದುರಿಸುತ್ತಿರುವ ಅತಿ ದೊಡ್ಡ ಸವಾಲುಗಳಾದ ಬರ ಹಾಗೂ ಹೆಚ್ಚುತ್ತಿರುವ ನೀರಿನ ಕೊರತೆಯ ಬಗ್ಗೆ ಯಾವುದೇ ಪಕ್ಷಗಳಾಗಲಿ, ರಾಜಕಾರಣಿಗಳಾಗಲಿ ಧ್ವನಿಯೆತ್ತಿರುವುದು ತುಂಬಾ ಕಡಿಮೆ.
ಈ ವರ್ಷದ ಆರಂಭದಿಂದಲೇ ಭಾರತವು ಹತ್ತಿರಹತ್ತಿರ ಶೇ.20ರಷ್ಟು ಮಳೆ ಕೊರತೆಯನ್ನು ಎದುರಿಸಿದೆ ಹಾಗೂ ದೇಶದ ಹಲವಾರು ರಾಜ್ಯಗಳು ನೀರಿನ ತೀವ್ರ ಅಭಾವವನ್ನು ಎದುರಿಸುತ್ತಿವೆ. ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳು ಬರದದವಡೆಗೆ ಸಿಲುಕಿವೆ. ಈ ರಾಜ್ಯಗಳ ಬಹುತೇಕ ಜಿಲ್ಲೆಗಳನ್ನು ತೀವ್ರ ಬರವನ್ನು ಸೂಚಿಸುವ ‘ಕೆಂಪು ವಲಯ’ಗಳಾಗಿ ಗುರುತು ಮಾಡಲಾಗಿದೆ.
 ಈ ವರ್ಷದ ಬರ ಪರಿಸ್ಥಿತಿಯು 2016ರಲ್ಲಿನ ಬರಕ್ಕಿಂತಲೂ ಅತ್ಯಂತ ಭೀಕರವಾದುದೆಂದು ಜಲತಜ್ಞರು ಅಭಿಪ್ರಾಯಿಸಿದ್ದಾರೆ. ನೀರಿನ ಮಟ್ಟದಲ್ಲಿ ಗಣನೀಯ ಕುಸಿತವುಂಟಾಗಿದೆ ಹಾಗೂ ನೀರು ಸಿಗಬೇಕಾದರೆ 1 ಸಾವಿರ ಅಡಿ ಅಳದವರೆಗೂ ಬೋರ್ ವೆಲ್‌ಗಳನ್ನು ತೋಡಬೇಕಾದಂತಹ ಪರಿಸ್ಥಿತಿ ಬಂದಿದೆಯೆಂದು ತಮಿಳುನಾಡಿನ ನೀರಾವರಿ ಅಧಿಕಾರಿಯೊಬ್ಬರು ಹೇಳುತ್ತಾರೆ.
ತಮಿಳುನಾಡಿನ ಜಿಲ್ಲೆಗಳಾದ ತಿರುವಲ್ಲೂರು, ಕಾಂಚಿಪುರಂ, ಧರ್ಮ ಪುರಿ, ತಿರುವನ್ನಾಮಲೈ ಹಾಗೂ ವೆಲ್ಲೂರುಗಳಲ್ಲಿಯೂ ಅಂತರ್ಜಲದ ಮಟ್ಟದಲ್ಲಿ ತೀವ್ರ ಕುಸಿತವಾಗಿದೆ. ತಮಿಳುನಾಡು ರಾಜ್ಯ ಭೂ ಹಾಗೂ ಜಲಸಂಪನ್ಮೂಲಗಳ ದತ್ತಾಂಶ ಕೇಂದ್ರದ ಪ್ರಕಾರ, ಆ ರಾಜ್ಯದ 32 ಜಿಲ್ಲೆಗಳ ಪೈಕಿ 19 ಜಿಲ್ಲೆಗಳನ್ನು ತೀವ್ರ ಬರದ ಶ್ರೇಣಿಯ ವ್ಯಾಪ್ತಿಗೆ ಒಳಪಡಿಸಲಾಗಿದೆ. ರಾಜಧಾನಿ ಚೆನ್ನೈ ಕೂಡಾ ನೀರಿನ ತೀವ್ರ ಕೊರತೆಯನ್ನು ಎದುರಿಸಲಾರಂಭಿಸಿದೆ.
ಅತ್ತ ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಸ್ವಕ್ಷೇತ್ರವಾದ ಚಿತ್ತೂರಿನಲ್ಲಿ ಜನರಿಗೆ ನೀರು ಲಭಿಸುತ್ತಿಲ್ಲ. ವಾರದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡುವ ಮೂಲಕ ಅವರು ತಮ್ಮಲ್ಲಿರುವ ನೀರನ್ನು ಕುಡಿಯಲು ಹಾಗೂ ಅಡಿಗೆಗಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಹೈದರಾಬಾದ್‌ನ ರಾಜಕೀಯ ವಿಶ್ಲೇಷಕ ತೆಲಕಪಲ್ಲಿ ರವಿ ತಿಳಿಸಿದ್ದಾರೆ.
   ರೈತರ ಗೋಳು ಆಲಿಸಲು ರಾಜಕಾರಣಿಗಳಿಗೆ ಆಸಕ್ತಿಯಿಲ್ಲ
ಬೆಂಗಳೂರಿನಿಂದ ಸುಮಾರು 70 ಕಿ.ಮೀ. ದೂರದ ತುಮಕೂರು ಜಿಲ್ಲೆಯ ಚೊಳೆೇನಹಳ್ಳಿಯಲ್ಲಿ ಕೆಂಪಮ್ಮ ತನ್ನ ದಿನನಿತ್ಯದ ಮನೆಗೆಲಸದ ನಡುವೆಯೂ, ದೌಡಾಯಿಸಿ ಸಮಯಕ್ಕೆ ಸರಿಯಾಗಿ ನೀರಿನ ಟ್ಯಾಂಕರ್ ಬರುವ ಜಾಗವನ್ನು ತಲುಪುತ್ತಾರೆ. ಒಂದು ಕೊಡ ನೀರಿಗಾಗಿ ನೆತ್ತಿಸುಡುವಂತಹ ಉರಿಬಿಸಿಲನ್ನೂ ಸಹಿಸಿಕೊಂಡು ನೀರಿನ ಟ್ಯಾಂಕರ್‌ನೆಡೆಗೆ ಧಾವಿಸುವ ರಾಜ್ಯದೆಲ್ಲೆಡೆಯ ಸಾವಿರಾರು ಮಹಿಳೆಯರಲ್ಲಿ ಆಕೆಯೂ ಒಬ್ಬಳು.
 ಕರ್ನಾಟಕ ಸರಕಾರವು ತೀವ್ರ ಬರಪೀಡಿತವೆಂದು ಘೋಷಿಸಿದ 165 ತಾಲೂಕುಗಳಲ್ಲಿ ಚೋಳೇನಹಳ್ಳಿಯೂ ಒಂದು. ‘‘ಚುನಾವಣೆ ಬಂದಾಗಲೆಲ್ಲಾ ರಾಜಕಾರಣಿಗಳು ಜಿಲ್ಲೆಯುದ್ದಕ್ಕೂ ತಿರುಗಾಡಿ ಮತ ಯಾಚಿಸುತ್ತಾರೆ ಹಾಗೂ ಕೊಳವೆಬಾವಿಗಳು, ನೀರಿನ ಪಂಪ್‌ಗಳು ಹಾಗೂ ನೀರು ಸಂಗ್ರಹದ ಟ್ಯಾಂಕ್‌ಗಳನ್ನು ನಿರ್ಮಿಸುವ ಭರವಸೆ ನೀಡುತ್ತಾರೆ. ಈಗ ಚುನಾವಣೆ ಮುಗಿದದ್ದೇ ತಡ ರೈತರ ಗೋಳನ್ನು ಆಲಿಸಲು ಅವರಿಗೆ ಆಸಕ್ತಿಯೇ ಇಲ್ಲ’’ ಎಂದು ಕೆಂಪಮ್ಮ ಹೇಳುತ್ತಾರೆ.
ಕೆಂಪಮ್ಮಳ ನೆರೆಮನೆಯವರಾದ ಶಾರದಮ್ಮ ಕೂಡಾ ಇದೇ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ‘‘ನಮ್ಮ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸಹಾಯ ಮಾಡಿ ಎಂಬುದಾಗಿ ನಾವು ಅವರಲ್ಲಿ (ರಾಜಕಾರಣಿಗಳು) ಬೇಡಿಕೊಂಡಿದ್ದೆವು. ನಮಗೆ ಕುಡಿಯಲು ನೀರು ದೊರೆಯುವುದೇ ಕಷ್ಟವಾಗುತ್ತಿದೆ. ಅವರು ತಮಗೆ ಸಾಧ್ಯವಿರುವುದೆಲ್ಲವನ್ನೂ ಮಾಡಿ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಹೇಳಿಕೊಂಡಿದ್ದರು. ಈಗ ಅವರೆಲ್ಲಾ ಎಲ್ಲಿ ಹೋಗಿದ್ದಾರೆ?. ಬರವೆಂಬುದು ಈಗ ಪ್ರತಿ ವರ್ಷವೂ ಅನುಭವಿಸುವ ವಿದ್ಯಮಾನವಾಗಿದೆ ಹಾಗೂ ಬರದಿಂದಾಗಿ ಜನರೀಗ ಸಾಯುತ್ತಿದ್ದಾರೆಂಬುದು ಅವರಿಗೆ ಈಗ ಅರಿವಾಗಬೇಕಾಗಿದೆ. ನಾವು ಕೇವಲ ಮತ ಬ್ಯಾಂಕ್ ಮಾತ್ರವೇ ಆಗಿದ್ದೇವೆಯೇ?. ಜನಪ್ರತಿನಿಧಿಗಳಾಗಿ ನಮ್ಮ ಬಗ್ಗೆ ಅವರಿಗಿರುವ ಜವಾಬ್ದಾರಿ ಈಗ ಎಲ್ಲಿ ಹೋಗಿದೆ?’’ ಎಂದು ಆಕೆ ಪ್ರಶ್ನಿಸುತ್ತಾರೆ.
    ಬರ ಯಾಕೆ ರಾಜಕೀಯ ವಿಷಯವಾಗಲಿಲ್ಲ?
ನೀರಿನ ಸಮಸ್ಯೆ ಒಂದು ಪ್ರಮುಖ ಚುನಾವಣಾ ವಿಷಯವಾಗಿರಬೇಕೆಂದು ರಾಜಕೀಯ ವಿಶ್ಲೇಷಕ ಹರೀಶ್ ರಾಮಸ್ವಾಮಿ ಪ್ರತಿಪಾದಿಸುತ್ತಾರೆ. ಆದರೆ, ಚುನಾವಣೆ ವೇಳೆ ಮತದಾರರಿಗಾಗಲಿ ಅಥವಾ ರಾಜಕೀಯ ಪಕ್ಷವಾಗಲಿ ಈ ವಿಷಯವನ್ನು ಪ್ರಸ್ತಾಪಿಸುವುದೇ ಇಲ್ಲವೆಂದು ಅವರು ವಿಷಾದಿಸುತ್ತಾರೆ.
‘‘ಇದು ಲೋಕಸಭೆಗೆ ನಡೆಯುವ ಚುನಾವಣೆಯಾಗಿದ್ದು, ಬರ ನಿರ್ವಹಣೆಯು ರಾಜ್ಯ ಸರಕಾರಕ್ಕೆ ಸಂಬಂಧಿಸಿದ ವಿಷಯವೆಂದು ಮತದಾರರು ಅಭಿಪ್ರಾಯಿಸುತ್ತಾರೆ. ನಾಯಕ ಕೇಂದ್ರಿತವಾಗಿರುವ ರಾಜಕೀಯ ಪಕ್ಷಗಳು ಕೂಡಾ ಬರದಂತಹ ಸಮಸ್ಯೆಗಳನ್ನು ಬದಿಗಿರಿಸಿ, ದೈನಂದಿನ ಬದುಕಿಗೆ ಹೊರತಾದ ವಿಷಯಗಳನ್ನು ಬಿಂಬಿಸಲು ಯತ್ನಿಸುತ್ತಿವೆ’’ ಎಂದವರು ಹೇಳುತ್ತಾರೆ.
‘‘ಚುನಾವಣೆಯನ್ನು ಗೆಲ್ಲುವ ಏಕೈಕ ಹಿತಾಸಕ್ತಿಯೊಂದಿಗೆ ಪಕ್ಷಗಳು ತಮ್ಮ ನಾಯಕರನ್ನು ಬಿಂಬಿಸುತ್ತಿವೆ ಮತ್ತು ಅವರಿಗೆ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಆಸಕ್ತಿಯಿಲ್ಲವೆಂಬುದು ಮತದಾರರಿಗೆ ಅರಿವಾಗಿರುವಂತೆ ಭಾಸವಾಗುತ್ತಿದೆ. ಸ್ಥಳೀಯ ಸಮಸ್ಯೆಗಳನ್ನು, ಸ್ಥಳೀಯ ನಾಯಕತ್ವವೇ ಬಗೆಹರಿಸಬೇಕು’’ ಎಂದವರು ಭಾವಿಸತೊಡಗಿದ್ದಾರೆಂದು ಹರೀಶ್ ರಾಮಸ್ವಾಮಿ ಹೇಳುತ್ತಾರೆ.
ಬಿಜೆಪಿಯ ಆಂಧ್ರಪ್ರದೇಶ ಉಸ್ತುವಾರಿ ಹಾಗೂ ರಾಜ್ಯಸಭಾ ಸಂಸದ ವಿ.ಮುರಳೀಧರನ್ ಕೂಡಾ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಬರದ ಸಮಸ್ಯೆಯು, ಚುನಾವಣಾ ಪ್ರಚಾರದ ಕೇಂದ್ರ ಬಿಂದುವಾಗಬಹುದಿತ್ತು ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಅದೊಂದು ಸಂಕೀರ್ಣವಾದ ವಿಷಯವೆಂದು ಅವರು ಹೇಳುತ್ತಾರೆ.
‘‘ಇಂತಹ ವಿಷಯಗಳ ಬಗ್ಗೆ ಪ್ರಬಲವಾಗಿ ಧ್ವನಿಯೆತ್ತಬೇಕೆಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಸ್ಥಳೀಯ ಮಟ್ಟದಲ್ಲಿ, ಕೆಲವು ಪ್ರದೇಶಗಳಲ್ಲಿ ಜನರು ನೀರಿನ ಕೊರತೆಯನ್ನು ಪ್ರತಿಭಟಿಸಿ ಮತದಾನದಲ್ಲಿ ಪಾಲ್ಗೊಳ್ಳಲು ನಿರಾಕರಿಸುತ್ತಿದ್ದಾರೆ. ಆದರೆ ಬರಗಾಲವು ಎಲ್ಲಾ ಪ್ರಾಂತಗಳಲ್ಲಿಯೂ ಏಕರೂಪದಲ್ಲಿ ಇಲ್ಲದೆ ಇರುವುದರಿಂದ ರಾಜ್ಯ ಮಟ್ಟದಲ್ಲಿ ಅದು ಪ್ರಮುಖ ವಿಷಯವಾಗಿ ಉಳಿದಿಲ್ಲ’’ ಎಂದು ಮುರಳೀಧರನ್ ಆನ್‌ಲೈನ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಕೆಲವೊಂದು ಪ್ರದೇಶಗಳು ನಿಜಕ್ಕೂ ಭೀಕರ ಬರಕ್ಕೆ ತುತ್ತಾಗಿವೆ ಆದರೆ ಇಲ್ಲಿರುವ ಮುಖ್ಯ ಸಮಸ್ಯೆಯೆಂದರೆ ಇದಕ್ಕಾಗಿ ನಾವು ಯಾರನ್ನು ದೂಷಿಸುವುದು?. ಯಾವ ರಾಜಕೀಯ ಪಕ್ಷಗಳೂ ಈ ಬಗ್ಗೆ ಯಾಕೆ ಧ್ವನಿಯೆತ್ತುತ್ತಿಲ್ಲ ಎಂದವರು ಪ್ರಶ್ನಿಸುತ್ತಾರೆ.
ಆದಾಗ್ಯೂ, ಜಲವಿವಾದ ಕುರಿತಾದ ಮೂರು ಪ್ರಕರಣಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಹಿರಿಯ ನ್ಯಾಯವಾದಿ ಹಾಗೂ ಕಾಂಗ್ರೆಸ್ ಪಕ್ಷದ ವಕ್ತಾರ ಬೃಜೇಶ್ ಕಾಳಪ್ಪ ಅವರು, ಕೇಂದ್ರದ ನಾಯಕತ್ವದ ಕೊರತೆಯೇ ನೀರಿನ ಸಮಸ್ಯೆಗೆ ಕಾರಣವೆಂದು ಹೇಳುತ್ತಾರೆ. ನೀರಿನ ಕೊರತೆಗೆ ಸಂಬಂಧಿಸಿ ರಾಜಕೀಯ ನಾಯಕರಲ್ಲಿ ಸ್ಪಷ್ಟತೆಯಿಲ್ಲವೆಂದು ಅವರು ಒಪ್ಪಿಕೊಳ್ಳುತ್ತಾರೆ. ಬರದ ಸಮಸ್ಯೆ ಬಗ್ಗೆ ಮಾಧ್ಯಮಗಳು ಹೆಚ್ಚು ಕವರೇಜ್ ನೀಡುತ್ತಿಲ್ಲವೆಂದೂ ಅವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
‘‘ಬರದ ಸಮಸ್ಯೆಯನ್ನು ಮಾಧ್ಯಮಗಳು ಕೆದಕುತ್ತಿಲ್ಲ. ಒಂದು ವೇಳೆ, ಬೊಫೋರ್ಸ್ ಬಗ್ಗೆ ಪ್ರಧಾನಿ ತನ್ನ ಭಾಷಣದಲ್ಲಿ ಪ್ರತಿಕ್ರಿಯೆ ನೀಡಿದಲ್ಲಿ, ಆ ಬಗ್ಗೆ ಟಿವಿವಾಹಿನಿಗಳಲ್ಲಿ ತಾಸುಗಟ್ಟಲೆ ಚರ್ಚೆಗಳನ್ನು ಮಾಡಲಾಗುತ್ತದೆ. ಇಂತಹ ಚರ್ಚೆಗಳಿಗೆ ಪ್ರತಿಕ್ರಿಯಿಸುವುದರಲ್ಲೇ ನಮ್ಮ ಸಮಯ ಕಳೆಯುತ್ತದೆ. ಆದರೆ ಬರದ ಸಮಸ್ಯೆಯನ್ನು ಕೂಡಾ ಚರ್ಚೆಯ ಮುನ್ನೆಲೆಗೆ ತರುವುದು ಮಾಧ್ಯಮಗಳ ಜವಾಬ್ದಾರಿಯಾಗಿದೆ’’ ಎಂದು ಕಲ್ಲಪ್ಪ ಹೇಳುತ್ತಾರೆ.
ಈ ಮಧ್ಯೆ ಬೆಂಗಳೂರಿನ ಸುಧಾರಿತ ಅಧ್ಯಯನಕ್ಕಾಗಿ ರಾಷ್ಟ್ರೀಯ ಸಂಸ್ಥೆಯ ಪ್ರೊಫೆಸರ್ ಆಗಿರುವ ನರೇಂದ್ರ ಪಾಣಿ ಅವರು, ಬರವನ್ನು ಬಹುತೇಕವಾಗಿ ರಾಜ್ಯಮಟ್ಟದ ಸಮಸ್ಯೆ ಹಾಗೂ ಅದನ್ನು ಸ್ಥಳೀಯ ಪ್ರತಿನಿಧಿಗಳು ನಿಭಾಯಿಸಬೇಕೆಂಬ ದೃಷ್ಟಿಯಲ್ಲಿ ನೋಡಲಾಗುತ್ತಿದೆ. ಭಾಗಶಃ ಈ ಕಾರಣದಿಂದಾಗಿಯೇ ರಾಜಕೀಯ ಪಕ್ಷಗಳಿಗೆ ಈ ವಿಷಯವನ್ನು ನಿರ್ವಹಿಸುವುದು ತೀರಾ ಕಷ್ಟಕರವಾಗಿ ಪರಿಣಮಿಸಿದೆ ಎಂದು ಅವರು ಹೇಳುತ್ತಾರೆ.
ತಮ್ಮನ್ನು ಕಾಡುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಚುನಾವಣೆಯ ಸಂದರ್ಭಗಳಲ್ಲಿ ಜನರು ನಿರ್ಧರಿಸಬೇಕಾಗುತ್ತದೆ. ಒಂದು ವೇಳೆ ಸಮಸ್ಯೆಗಳನ್ನು ನಿಭಾಯಿಸಲು ಸಾಧ್ಯವಾಗದೆ ಇದ್ದಲ್ಲಿ, ಆಡಳಿತ ವಿರೋಧಿ ಅಲೆ ಎಂದು ನಾವು ಯಾವುದನ್ನು ಕರೆಯುತ್ತೇಮೋ ಅದು ನಮಗೆ ಗೋಚರಿಸುತ್ತದೆ.

ಕೃಪೆ: theprint.in


 

Writer - ರೋಹಿಣಿ ಸ್ವಾಮಿ

contributor

Editor - ರೋಹಿಣಿ ಸ್ವಾಮಿ

contributor

Similar News

ಜಗದಗಲ
ಜಗ ದಗಲ