59 ಕ್ಷೇತ್ರಗಳಲ್ಲಿ ಮತದಾನ ಆರಂಭ: ಮೋದಿ ಭವಿಷ್ಯ ಇಂದು ನಿರ್ಧಾರ

Update: 2019-05-19 03:56 GMT

ಹೊಸದಿಲ್ಲಿ, ಮೇ 19: ಏಳು ಹಂತಗಳ ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಬೆಳಗ್ಗೆ ಆರಂಭವಾಗಿದ್ದು, ಏಳು ರಾಜ್ಯಗಳ 59 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಕರ್ನಾಟಕದ ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯೂ ಈ ಹಂತದಲ್ಲಿ ನಡೆಯುತ್ತಿದೆ. 10.01 ದಶಲಕ್ಷ ಮತದಾರರು 918 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.

ಬಿಹಾರ, ಹಿಮಾಚಲ ಪ್ರದೇಶ, ಜಾರ್ಖಂಡ್, ಮಧ್ಯಪ್ರದೇಶ, ಪಂಜಾಬ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಚಂಡೀಗಢದ 59 ಕ್ಷೇತ್ರಗಳ ಮತದಾರರು ತಮ್ಮ ಭವಿಷ್ಯದ ನಾಯಕನನ್ನು ಚುನಾಯಿಸಲಿದ್ದು, ಅಧಿಕಾರ ಸೂತ್ರ ಹಿಡಿಯುವ ನಿಟ್ಟಿನಲ್ಲಿ ಈ ಹಂತ ಎನ್‌ಡಿಎ ಹಾಗೂ ವಿರೋಧ ಪಕ್ಷಗಳಿಗೆ ಮಹತ್ವದ್ದಾಗಿದೆ.

ಬಿಹಾರದಲ್ಲಿ ಮತ ಚಲಾಯಿಸಿ ಮಾತನಾಡಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ಇಷ್ಟು ಸುದೀರ್ಘ ಅವಧಿಯಲ್ಲಿ ಅಂದರೆ ಏಳು ಹಂತಗಳಲ್ಲಿ ಮತದಾನ ನಡೆಯುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಉತ್ಸಾಹದಿಂದ ಮತ ಚಲಾಯಿಸಿ ಎಂದು ಮೋದಿ ಟ್ವೀಟ್ ಮೂಲಕ ಮನವಿ ಮಾಡಿದ್ದರೆ, ಅಭಿವೃದ್ಧಿಪರವಾಗಿ ಮತ ಚಲಾಯಿಸಿ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೋರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕಣದಲ್ಲಿರುವ ವಾರಾಣಾಸಿಯಲ್ಲಿ ಬಿಎಸ್ಪಿ ಬೆಂಬಲಿತ ಎಸ್ಪಿ ಅಭ್ಯರ್ಥಿ ಶಾಲಿನಿ ಯಾದವ್ ಹಾಗೂ ಕಾಂಗ್ರೆಸ್‌ನ ಅಜಯ್ ರಾವ್ ಸ್ಪರ್ಧೆಯಲ್ಲಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಪ್ರತಿಷ್ಠೆ ಪಣಕ್ಕಿಟ್ಟಿರುವ ಗೋರಖ್‌ಪುರ ಕೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಭೋಜಪುರಿ ಚಿತ್ರನಟ ರವಿಕಿಶನ್ ಹಾಗೂ ಎಸ್ಪಿ ಅಭ್ಯರ್ಥಿ ರಾಮಬಾಹು ನಿಶದ್, ಕಾಂಗ್ರೆಸ್‌ನ ಮಧುಸೂದನ್ ತ್ರಿಪಾಠಿ ನಡುವೆ ಹೋರಾಟ ಏರ್ಪಟ್ಟಿದೆ.

2014ರ ಚುನಾವಣೆಯಲ್ಲಿ ಪೂರ್ವ ಉತ್ತರ ಪ್ರದೇಶದ ಎಲ್ಲ ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಆದರೆ ಈ ಬಾರಿ ಎಸ್ಪಿ-ಬಿಎಸ್ಪಿ ಮೈತ್ರಿಕೂಟದಿಂದ ಕಠಿಣ ಸ್ಪರ್ಧೆ ಎದುರಾಗಿದೆ. ಬಿಜೆಪಿಯ ಮಿತ್ರ ಪಕ್ಷವಾಗಿದ್ದ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ ಮಹಾರಾಜ್‌ಗಂಜ್ ಮತ್ತು ಬನ್ಸಗಾಂವ್‌ನಲ್ಲಿ ಎಸ್ಪಿ-ಬಿಎಸ್ಪಿಗೆ ಬೆಂಬಲ ಸೂಚಿಸಿದ್ದರೆ, ಮಿರ್ಜಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದೆ. ಇದರ ಜತೆಗೆ ವಾರಣಾಸಿ ಹಾಗೂ ಗೋರಖ್‌ಪುರ ಸೇರಿ 10 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.

2014ರ ಚುನಾವಣೆಯಲ್ಲಿ 59 ಕ್ಷೇತ್ರಗಳ ಪೈಕಿ 33 ಬಿಜೆಪಿ ಪಾಲಾಗಿದ್ದವು. ಏಳು ಸ್ಥಾನಗಳು ಎನ್‌ಡಿಎ ಮಿತ್ರಪಕ್ಷಗಳ ಪಾಲಾಗಿದ್ದರೆ ಯುಪಿಎ ಕೇವಲ ಐದು ಕ್ಷೇತ್ರಕ್ಕೆ ತೃಪ್ತಿಪಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News