ಫಲಿತಾಂಶಕ್ಕೆ ಮುನ್ನವೇ ಒಡಿಶಾ ವಿಧಾನಸಭೆ ವಿಸರ್ಜನೆಗೆ ಶಿಫಾರಸು

Update: 2019-05-19 03:59 GMT

ಭುವನೇಶ್ವರ, ಮೇ 19: ಫನಿ ಚಂಡಮಾರುತದ ಅಬ್ಬರದಿಂದ ತತ್ತರಿಸಿದ ಒಡಿಶಾ ಕರಾವಳಿಯಲ್ಲಿ ಪುನರ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುವ ನಡುವೆಯೇ ರಾಜ್ಯ ವಿಧಾನಸಭೆ ವಿಸರ್ಜನೆಗೆ ಸಚಿವ ಸಂಪುಟ ಶಿಫಾರಸು ಮಾಡಿದೆ.

ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಸಚಿವ ಸಂಪುಟ ಸಭೆ ಈ ನಿರ್ಧಾರ ಕೈಗೊಂಡಿದೆ. ರಾಜ್ಯ ವಿಧಾನಸಭೆಯ ಅವಧಿ ಜೂನ್ 11ರವರೆಗೆ ಇದೆ.

ಸಂವಿಧಾನಾತ್ಮಕವಾಗಿ, ಚುನಾವಣಾ ಫಲಿತಾಂಶ ಘೋಷಣೆಯ ಬಳಿಕ ರಾಜ್ಯ ಸಚಿವ ಸಂಪುಟ, ವಿಧಾನಸಭೆ ವಿಸರ್ಜಿಸುವ ನಿರ್ಣಯವನ್ನು ಕೈಗೊಳ್ಳಬೇಕು. ಸಚಿವ ಸಂಪುಟ ಹಾಗೂ ಮುಖ್ಯಮಂತ್ರಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ನೀಡಿ ಹೊಸ ವಿಧಾನಸಭೆ ರಚನೆಗೆ ಅವಕಾಶ ಮಾಡಿಕೊಡಬೇಕು.

ಈ ಶಿಫಾರಸನ್ನು ರಾಜ್ಯಪಾಲರು ಅನುಮೋದಿಸಿ ಅಧಿಸೂಚನೆ ಹೊರಡಿಸಿದ ಬಳಿಕವಷ್ಟೇ ವಿಧಾನಸಭೆ ವಿಸರ್ಜನೆಯಾಗುತ್ತದೆ ಎಂದು ಮುಖ್ಯ ಕಾರ್ಯದರ್ಶಿ ಎ.ಪಿ.ಪಧಿ ಹೇಳಿದ್ದಾರೆ.

ಚಂಡಮಾರುತ ಪರಹಾರ ಕಾರ್ಯಗಳಿಗೆ ಮತ್ತು ಪುನರ್ ನಿರ್ಮಾಣ ಕಾಮಗಾರಿಗಳಿಗೆ ಹಣಕಾಸು ನೆರವು ಬಿಡುಗಡೆ ಮಾಡುವ ಪ್ರಸ್ತಾವವನ್ನೂ ಸಚಿವ ಸಂಪುಟ ಅನುಮೋದಿಸಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News