ಪ್ರಧಾನಿ ಒಂದು ರಾತ್ರಿ ಕಳೆದ ಗುಹೆಯಲ್ಲಿದೆ ಹಾಸಿಗೆ, ಶೌಚಾಲಯ, ಸಿಸಿಟಿವಿ!

Update: 2019-05-19 05:51 GMT

  ಡೆಹ್ರಾಡೂನ್,ಮೇ 19: ಸಮುದ್ರಮಟ್ಟದಿಂದ 12,000 ಅಡಿ ಎತ್ತರದಲ್ಲಿರುವ ಕೇದಾರನಾಥ್ ದೇವಾಲಯದ ಸಮೀಪವಿರುವ ಗುಹೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ರಾತ್ರಿ ಕಳೆದಿದ್ದಾರೆ. ಅಂದಹಾಗೆ ಈ ಗುಹೆ ಸಾಮಾನ್ಯ ರೀತಿಯಲ್ಲಿಲ್ಲ. ಇದನ್ನು ಪ್ರಧಾನಿಗೆ ನೆಲೆಸಲು ಸೂಕ್ತವಾಗುವ ಹಾಗೆ ಸಂಪೂರ್ಣ ಮಾರ್ಪಡಿಸಲಾಗಿದೆ. ಶೌಚಾಲಯ, ಸಿಸಿಟಿವಿ ಅಳವಡಿಸಲಾಗಿದೆ.

ಕಲ್ಲುಗಳನ್ನು ಕತ್ತರಿಸುವ ಮೂಲಕ ನಿರ್ಮಿಸಲಾಗಿರುವ ನೈಸರ್ಗಿಕ ಗುಹೆ ಮುಖ್ಯ ದೇವಾಲಯಕ್ಕಿಂತ ಒಂದು ಕಿ.ಮೀ. ಮೊದಲೇ ಸಿಗುತ್ತದೆ. ಈ ಗುಹೆಯೊಳಗೆ ಕೊಠಡಿಯಿದ್ದು, ಅದಕ್ಕೆ ಹೊಂದಿಕೊಂಡಂತೆ ವಾಶ್‌ರೂಮ್ ಇದೆ ಹಾಗೂ ಹತ್ತು ಅಡಿ ಎತ್ತರದ ಛಾವಣಿಯಲ್ಲಿ ಒಂದು ಬೆಳಕಿನ ಕಿಂಡಿ ಇದೆ. ಈ ಗುಹೆಯಿಂದ ಪುರಾತನ ದೇವಾಲಯದ ಚಿತ್ತಾಕರ್ಷಕ ನೋಟವನ್ನು ವೀಕ್ಷಿಸಬಹುದು.

ಶನಿವಾರ ಕೇದಾರ್‌ನಾಥ್‌ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಅಲ್ಲಿ ನಡೆಯುತ್ತಿರುವ ಪುನರ್‌ನಿರ್ಮಾಣ ಕಾರ್ಯದ ಮೇಲ್ವಿಚಾರಣೆ ನಡೆಸಿದರು. ಆ ಬಳಿಕ ತನಗೆ ಧ್ಯಾನ ಮಾಡಲು ಅಗತ್ಯವಿರುವ ಗುಹೆಗೆ ತೆರಳಿ ಒಂದು ರಾತ್ರಿ ಅಲ್ಲೆ ಕಳೆದಿದ್ದಾರೆ.

‘‘ಪ್ರಧಾನಿ ಭೇಟಿಗೆ ಮೊದಲೇ ಗುಹೆಯನ್ನು ಸಿದ್ಧಗೊಳಿಸಲಾಗಿತ್ತು. ವಿದ್ಯುತ್ ಹಾಗೂ ನೀರು ಸಹಿತ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿತ್ತು. ತಿಂಗಳ ಕಾಲ ಬಂಡೆ ಹಾಗೂ ಕಲ್ಲುಗಳನ್ನು ಕತ್ತರಿಸಿ ಗುಹೆ ನಿರ್ಮಿಸಲಾಗಿದ್ದು, ಕಳೆದ ವರ್ಷವೇ ಇದು ಪೂರ್ಣಗೊಳಿಸಿ ಲಾಕ್ ಮಾಡಲಾಗಿತ್ತು. ದೇವಾಲಯದ ಸುತ್ತಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಗುಹೆಯಲ್ಲೂ ಸಿಸಿಟಿವಿ ಅಳವಡಿಸಲಾಗಿದೆ'' ಎಂದು ನೆಹರೂ ಪರ್ವತಾರೋಹಣ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗುಹೆಯಲ್ಲಿ ಒಂದು ಹಾಸಿಗೆಯ ಕೊಠಡಿಯಿದೆ. ನೆಲದ ಮೇಲೆ ಕುಳಿತು ಧ್ಯಾನ ಮಾಡಲು ಮುಕ್ತ ಸ್ಥಳವಿದೆ ಎಂದು ಇನ್ನೋರ್ವ ಅಧಿಕಾರಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News