ಹಿಂದೂ ದೇವರ ಚಿತ್ರಗಳ ಮೈಯೊರೆಸುವ ಬಟ್ಟೆ ಮಾರಾಟ: ಆನ್‌ಲೈನ್ ಮಾರಾಟ ಸಂಸ್ಥೆ ‘ವೇಫೇರ್’ ವಿರುದ್ಧ ದೂರು

Update: 2019-05-19 16:56 GMT

ವಾಶಿಂಗ್ಟನ್, ಮೇ 19: ಹಿಂದೂ ದೇವತೆಗಳ ಚಿತ್ರಗಳನ್ನು ಒಳಗೊಂಡ ಮೈಯೊರೆಸುವ ಬಟ್ಟೆಗಳನ್ನು ಮಾರಾಟ ಮಾಡುತ್ತಿರುವುದಕ್ಕಾಗಿ ಅಮೆರಿಕದ ಆನ್‌ಲೈನ್ ಮಾರಾಟ ಸಂಸ್ಥೆ ‘ವೇಫೇರ್’ ಸಮಸ್ಯೆಗೆ ಸಿಲುಕಿಕೊಂಡಿದೆ. ಹಿಂದೆ ಆನ್‌ಲೈನ್ ಮಾರಾಟ ಸಂಸ್ಥೆ ‘ಅಮೆಝಾನ್’ ಕೂಡ ಇಂಥದೇ ವಸ್ತುಗಳನ್ನು ಮಾರಾಟ ಮಾಡಿ ಹಿಂದೂಗಳ ಆಕ್ರೋಶವನ್ನು ಎದುರಿಸಿತ್ತು.

ಮನೆ ಸಾಮಗ್ರಿಗಳನ್ನು ಮಾರಾಟ ಮಾಡುವ ಬೋಸ್ಟನ್‌ನ ‘ವೇಫೇರ್’, ಹಿಂದೂ ದೇವತೆಗಳಾದ ಗಣೇಶ ಮತ್ತು ಶಿವನ ಚಿತ್ರಗಳನ್ನು ಒಳಗೊಂಡ ಮೈಯೊರೆಸುವ ಬಟ್ಟೆಗಳನ್ನು ದಾಸ್ತಾನು ಇಡುತ್ತಿದೆ ಎಂದು ‘ಅಮೆರಿಕನ್ ಬಝಾರ್’ ಶನಿವಾರ ವರದಿ ಮಾಡಿದೆ.

ಈ ಬಟ್ಟೆಗಳನ್ನು ‘ಈಸ್ಟ್ ಅರ್ಬನ್ ಹೋಮ್‌ನ ಮೂರನೇ ಕಣ್ಣುಳ್ಳ ಏಶ್ಯದ ಯೋಗ ದೇವರ ಮೈಯೊರೆಸುವ ಬಟ್ಟೆ’ ಮತ್ತು ‘ಏಶ್ಯದ ಆನೆ ಮುಖದ ದೇವರ ಮೈಯೊರೆಸುವ ಬಟ್ಟೆ’ ಎಂಬುದಾಗಿ ಬಣ್ಣಿಸಲಾಗಿದೆ. ಈ ಬಟ್ಟೆಗಳ ಬೆಲೆ 38 ಡಾಲರ್ (2673 ರೂಪಾಯಿ)ಗಳಿಂದ ಆರಂಭವಾಗುತ್ತವೆ.

ಹಿಂದೆಯೂ, ‘ವೇಫೇರ್’ ಹಿಂದೂ ದೇವರ ಚಿತ್ರಗಳನ್ನು ಹೊಂದಿದ ಮೈಯೊರೆಸುವ ಬಟ್ಟೆಗಳನ್ನು ಮಾರುತ್ತಿದ್ದ ಬಗ್ಗೆ ದೂರುಗಳಿದ್ದವು.

ಕಳೆದ ವರ್ಷ ಗಣೇಶ ದೇವರ ಚಿತ್ರವನ್ನು ಹೊಂದಿದ ಮಣೆಗಳನ್ನು ಅದು ಹಿಂದಕ್ಕೆ ಪಡೆದುಕೊಂಡಿತ್ತು.

ಗಣೇಶ ದೇವರ ಚಿತ್ರಗಳನ್ನು ಒಳಗೊಂಡ ಮೈಯೊರೆಸುವ ಬಟ್ಟೆಗಳು, ನೆಲಹಾಸುಗಳು ಮತ್ತು ಶೌಚಾಲಯದ ಮುಚ್ಚಳಗಳನ್ನು ಮಾರಾಟ ಮಾಡುತ್ತಿರುವುದಕ್ಕಾಗಿ ಕಳೆದ ವಾರ ಅಮೆಝಾನ್ ವಿರುದ್ಧ ಆನ್‌ಲೈನ್ ದೂರೊಂದನ್ನು ಆರಂಭಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News