737 ಮ್ಯಾಕ್ಸ್ ವಿಮಾನದ ತರಬೇತಿ ಸಾಫ್ಟ್‌ವೇರ್‌ನಲ್ಲಿ ದೋಷ: ಒಪ್ಪಿಕೊಂಡ ಬೋಯಿಂಗ್

Update: 2019-05-19 17:03 GMT

ನ್ಯೂಯಾರ್ಕ್, ಮೇ 19: ಪೈಲಟ್‌ಗಳಿಗೆ ತರಬೇತಿ ನೀಡಲು ಬಳಸಲಾಗುವ 737 ಮ್ಯಾಕ್ಸ್ ವಿಮಾನದ ಮಾದರಿ (ಸಿಮ್ಯುಲೇಟರ್) ಸಾಫ್ಟ್‌ವೇರ್‌ನ ದೋಷಗಳನ್ನು ಸರಿಪಡಿಸಬೇಕಾಗಿದೆ ಎನ್ನುವುದನ್ನು ವಿಮಾನ ನಿರ್ಮಾಣ ಕಂಪೆನಿ ಬೋಯಿಂಗ್ ಶನಿವಾರ ಒಪ್ಪಿಕೊಂಡಿದೆ.

ಈ ಮಾದರಿಯ ಎರಡು ವಿಮಾನಗಳು ಪತನಗೊಂಡ ಹಿನ್ನೆಲೆಯಲ್ಲಿ ನಡೆದ ವಿಶ್ಲೇಷಣೆಯ ಬಳಿಕ ಈ ಕ್ರಮಕ್ಕೆ ಬೋಯಿಂಗ್ ಮುಂದಾಗಿದೆ. ಈ ಅವಳಿ ವಿಮಾನಾಪಘಾತಗಳಲ್ಲಿ ಒಟ್ಟು 346 ಮಂದಿ ಮೃತಪಟ್ಟಿದ್ದಾರೆ.

‘‘737 ಮ್ಯಾಕ್ಸ್ ಸಿಮ್ಯುಲೇಟರ್ ಸಾಫ್ಟ್‌ವೇರ್‌ಗೆ ಬೋಯಿಂಗ್ ತಿದ್ದುಪಡಿಗಳನ್ನು ಮಾಡಿದೆ ಹಾಗೂ ಎಲ್ಲ ಹಾರಾಟ ಪರಿಸ್ಥಿತಿಗಳಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಪೈಲಟ್‌ಗಳಿಗೆ ಸಾಧ್ಯವಾಗುವಂತೆ ಅದು ವಿಮಾನಗಳ ನಿರ್ವಾಹಕರಿಗೆ ಹೆಚ್ಚುವರಿ ಮಾಹಿತಿಗಳನ್ನು ಒದಗಿಸಿದೆ’’ ಎಂದು ಬೋಯಿಂಗ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಈ ಸಮಸ್ಯೆ ಯಾವಾಗ ಮೊದಲು ಅರಿವಿಗೆ ಬಂತು ಎಂಬುದನ್ನು ಕಂಪೆನಿ ತಿಳಿಸಿಲ್ಲ.

ತನ್ನ 737 ಮ್ಯಾಕ್ಸ್ ವಿಮಾನದ ಸಾಫ್ಟ್‌ವೇರ್‌ನಲ್ಲಿ ದೋಷವಿದೆ ಎನ್ನುವುದನ್ನು ಈ ಮೂಲಕ ಬೋಯಿಂಗ್ ಮೊದಲ ಬಾರಿಗೆ ಒಪ್ಪಿಕೊಂಡಿದೆ. ಇಥಿಯೋಪಿಯನ್ ಏರ್‌ಲೈನ್ಸ್‌ಗೆ ಸೇರಿದ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನ ಪತನಕ್ಕೆ ಅದರ ಎಂಸಿಎಎಸ್ ಆ್ಯಂಟಿ-ಸ್ಟಾಲ್ ಸಾಫ್ಟ್‌ವೇರ್ ಕಾರಣ ಎಂಬುದಾಗಿ ದೂರಲಾಗಿದೆ.

ಹೊಸ ಸಾಫ್ಟ್‌ವೇರ್‌ನಿಂದ ಪರಿಣಾಮಕಾರಿ ನಿರ್ವಹಣೆ

ಇಥಿಯೋಪಿಯನ್ ಏರ್‌ಲೈನ್ಸ್ ವಿಮಾನ ಮಾರ್ಚ್‌ನಲ್ಲಿ ಪತನಗೊಂಡರೆ, ಇಂಡೋನೇಶ್ಯದ ಲಯನ್ ಏರ್ ವಿಮಾನ ಅಕ್ಟೋಬರ್‌ನಲ್ಲಿ ಜಾವಾ ಸಮುದ್ರದಲ್ಲಿ ಪತನಗೊಂಡಿತ್ತು.

ಈ ಎರಡು ವಿಮಾನಗಳು ಪತನಗೊಂಡ ಸಂದರ್ಭದಲ್ಲಿ ಇದ್ದ ಸ್ಥಿತಿಗತಿಗಳಿಗೆ ಸಮಾನವಾದ ಸ್ಥಿತಿಗತಿಗಳನ್ನು ಮರುಸೃಷ್ಟಿಸಲು ಸಿಮ್ಯುಲೇಟರ್ ಸಾಫ್ಟ್‌ವೇರ್‌ಗೆ ಸಾಧ್ಯವಾಗಿರಲಿಲ್ಲ ಎಂದು ಬೋಯಿಂಗ್ ಹೇಳಿದೆ.

‘‘ಇತ್ತೀಚಿಗೆ ಮಾಡಲಾಗಿರುವ ಬದಲಾವಣೆಗಳಿಂದಾಗಿ ಹೆಚ್ಚು ನಿಖರ ತದ್ರೂಪಿ ಸ್ಥಿತಿಗತಿಗಳನ್ನು ನಿರ್ಮಿಸಲು ಸಿಮ್ಯುಲೇಟರ್ ಸಾಫ್ಟ್‌ವೇರ್‌ಗೆ ಸಾಧ್ಯವಾಗುತ್ತದೆ’’ ಎಂದು ಅದು ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News