ಬಂಗಾಳದ ಮುಂದಿನ ದಾರಿ ಯಾವುದು?

Update: 2019-05-19 18:30 GMT

ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಮೋದಿಯವರ ಅಸಲಿ ಮುಖ ಮತ್ತೆ ಮತ್ತೆ ಬಯಲಾಗುತ್ತಾ ಬಂದಿದೆ. ಚುನಾವಣಾ ಆಯೋಗ ಸೇರಿದಂತೆ ಬಹುತೇಕ ಸಾಂವಿಧಾನಿಕ ಸಂಸ್ಥೆಗಳು ಆಳುವ ಪಕ್ಷದ ವಿಶೇಷವಾಗಿ ಪ್ರಧಾನ ಸೇವಕರ ಕಾಲೊರೆಸುವ ಮ್ಯಾಟ್‌ನಂತಾಗಿವೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಅವು ಯಾವ ಪ್ರಪಾತಕ್ಕೆ ಹೋಗಿ ಬೀಳುತ್ತದೆ ಎಂದು ಊಹಿಸುವುದೂ ಕಷ್ಟ.


ಭವಿಷ್ಯದ ಭಾರತದ ದಿಕ್ಕನ್ನು ನಿರ್ಧರಿಸಲಿರುವ ಲೋಕಸಭಾ ಚುನಾವಣೆ ಫಲಿತಾಂಶ ಹೊರಬೀಳಲು ಇನ್ನು ನಾಲ್ಕು ದಿನ ಬಾಕಿ ಉಳಿದಿದೆ. ಈ ಬಾರಿ ಬಿಜೆಪಿ ಬರುವುದಿಲ್ಲ, ಮೋದಿ ಪ್ರಧಾನಿಯಾಗುವುದಿಲ್ಲ ಎಂದು ಕೆಲ ರಾಜಕೀಯ ವಿಶ್ಲೇಷಕರು ಅಂದಾಜು ಮಾಡುತ್ತಿದ್ದಾರೆ. ಇನ್ನು ಕೆಲವರು ಅದೇ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ. ಆದರೆ, ಮುಂಚಿನಷ್ಟು ಸ್ಥಾನಗಳು ಬರುವುದಿಲ್ಲ. ಇತರ ಪಕ್ಷಗಳ ಬೆಂಬಲದಿಂದ ಆಡಳಿತ ಸೂತ್ರ ಹಿಡಿಯುತ್ತದೆ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಬಿಜೆಪಿ ಮೂಲಗಳೂ ಇದೇ ಆಶಾ ಭಾವನೆ ಹೊಂದಿವೆ.

ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಮೋದಿಯವರ ಅಸಲಿ ಮುಖ ಮತ್ತೆ ಮತ್ತೆ ಬಯಲಾಗುತ್ತಾ ಬಂದಿದೆ. ಚುನಾವಣಾ ಆಯೋಗ ಸೇರಿದಂತೆ ಬಹುತೇಕ ಸಾಂವಿಧಾನಿಕ ಸಂಸ್ಥೆಗಳು ಆಳುವ ಪಕ್ಷದ ವಿಶೇಷವಾಗಿ ಪ್ರಧಾನ ಸೇವಕರ ಕಾಲೊರೆಸುವ ಮ್ಯಾಟ್‌ನಂತಾಗಿವೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಅವು ಯಾವ ಪ್ರಪಾತಕ್ಕೆ ಹೋಗಿ ಬೀಳುತ್ತದೆ ಎಂದು ಊಹಿಸುವುದೂ ಕಷ್ಟ.

ಈವರೆಗೆ ಉತ್ತರ ಭಾರತದ ರಾಜ್ಯಗಳಲ್ಲಿ ಪ್ರಾಬಲ್ಯ ಹೊಂದಿದ್ದ ಬಿಜೆಪಿ ಈಗ ದಕ್ಷಿಣ ಭಾರತದ ರಾಜ್ಯಗಳಲ್ಲೂ ತನ್ನ ಪ್ರಭಾವ ವಿಸ್ತರಿಸಿಕೊಂಡಿದೆ. ಒಂದು ಕಾಲದ ಕಮ್ಯುನಿಸ್ಟರ ಕೆಂಪು ಕೋಟೆಗಳಾದ ಕೇರಳ, ತ್ರಿಪುರಾ, ಪಶ್ಚಿಮ ಬಂಗಾಳಗಳನ್ನು ವಶ ಪಡಿಸಿಕೊಳ್ಳಲು ಅದು ಮುಂದಾಗಿದೆ. ಈಗಾಗಲೇ ತ್ರಿಪುರಾವನ್ನು ಗೆದ್ದುಕೊಂಡಿದೆ.

ಬಿಜೆಪಿ ಅಂದರೆ ಬರೀ ಒಂದು ರಾಜಕೀಯ ಪಕ್ಷವಲ್ಲ. ಅದು ಆರೆಸ್ಸೆಸ್‌ನ ರಾಜಕೀಯ ಮುಖ. ಜಾತ್ಯತೀತ ಜನತಾಂತ್ರಿಕ ಭಾರತವನ್ನು ಸನಾತನ ಮನುವಾದಿ ಹಿಂದೂರಾಷ್ಟ್ರವನ್ನಾಗಿ ಮಾಡಲು ಆರೆಸ್ಸೆಸ್ ಷಡ್ಯಂತ್ರ ರೂಪಿಸಿದೆ. ಆ ಗುರಿ ಸಾಧಿಸಲು ಬಿಜೆಪಿಯೂ ಒಂದು ಅಸ್ತ್ರ.

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಕೋಲಾಹಲ ದೇಶದ ಮಾತ್ರವಲ್ಲ ಜಗತ್ತಿನ ಗಮನ ಸೆಳೆದಿದೆ. ನವ ಬಂಗಾಳದ ಹರಿಕಾರ ಈಶ್ವರಚಂದ್ರ ವಿದ್ಯಾಸಾಗರ ಅವರ 200 ವರ್ಷಗಳ ಕಾಲ ಅಚಲವಾಗಿ ನಿಂತಿದ್ದ ಪ್ರತಿಮೆಯನ್ನು ಬಿಜೆಪಿಯವರು ಅಂದರೆ ಸಂಘ ಪರಿವಾರದವರು ಕ್ಷಣಾರ್ಧದಲ್ಲಿ ಒಡೆದು ನೆಲಕ್ಕೆ ಕೆಡವಿದರು. ಇದರಲ್ಲಿ ಟಿಎಂಸಿ ಕೈವಾಡವಿದೆ ಎಂದು ಪ್ರಧಾನ ಸೇವಕರು ಹೇಳಿದರೂ ಇದನ್ನು ಧ್ಬಂಸಗೊಳಿಸಿದವರು ಯಾರೆಂಬುದು ಈಗ ಎಲ್ಲರಿಗೂ ಗೊತ್ತಾಗಿದೆ. ಸಂಘ ಪರಿವಾರದ ಧ್ವಂಸ ಪಡೆಗಳೇ ಈ ಮೂರ್ತಿಯನ್ನು ಒಡೆದು ಹಾಕಿದ್ದು ಎಂಬುದು ಬಂಗಾಳದ ಬಹುತೇಕ ಉದಾರವಾದಿ ಚಿಂತಕರ ಅಭಿಪ್ರಾಯ. ಇದರಲ್ಲಿ ಆರೆಸ್ಸೆಸ್ ವಿದ್ಯಾರ್ಥಿ ವಿಭಾಗವಾದ ಎಬಿವಿಪಿ ಕೈವಾಡವಿರುವುದು ಬಯಲಾಗಿದೆ. ಆ ದಿನ ಅಮಿತ್‌ಶಾ ರೋಡ್ ಶೋ ನಲ್ಲಿ ಮುಂಚೂಣಿಯಲ್ಲಿದ್ದ ಎಬಿವಿಪಿ ಕಾರ್ಯಕರ್ತರು ತೃಣಮೂಲ ಕಾಂಗ್ರೆಸ್‌ನ ವಿದ್ಯಾರ್ಥಿ ವಿಭಾಗವಾದ ಛಾತ್ರ ಪರಿಷತ್ ಸದಸ್ಯರೊಂದಿಗೆ ಬೀದಿ ಕಾಳಗ ನಡೆಸಿ ನಂತರ ಕಾಲೇಜು ರಸ್ತೆಯಲ್ಲಿರುವ ವಿದ್ಯಾಸಾಗರ ಅವರ ಹೆಸರಿನಲ್ಲಿರುವ ಕಾಲೇಜಿಗೆ ನುಗ್ಗಿ ಪ್ರತಿಮೆಯನ್ನು ಒಡೆದು ಹಾಕಿದರು. ಇದು ಆಕಸ್ಮಿಕವಲ್ಲ. ವ್ಯವಸ್ಥಿತವಾಗಿ ಈ ಭಗ್ನ ಕಾರ್ಯಾಚರಣೆ ನಡೆದಿದೆ.

ಆರೆಸ್ಸೆಸ್ ಕಟ್ಟ ಹೊರಟಿರುವುದು 19ನೇ ಶತಮಾನದ ಮುಂಚಿನ ಒಡೆದು ಚೂರು ಚೂರಾಗಿದ್ದ ಮನುವಾದಿ ರಾಷ್ಟ್ರವನ್ನು. ತಮ್ಮ ಕನಸಿನ ರಾಷ್ಟ್ರವನ್ನು ಹಿಂದುತ್ವದ ಅಡಿಪಾಯದಲ್ಲಿ ಕಟ್ಟಲು ಅವರು ಹೊರಟಿದ್ದಾರೆ. ಅವರ ಕಲ್ಪನೆಯ ಹಿಂದೂ ರಾಷ್ಟ್ರಕ್ಕೆ ನಮ್ಮ ದೇಶದ ಸಂವಿಧಾನ ಮುಖ್ಯ ಅಡ್ಡಿಯಾಗಿದೆ. ಅದಷ್ಟೆ ಅಲ್ಲ ಈ ನೆಲದ ಉದಾರವಾದಿ ಚಿಂತನೆ ಅಡ್ಡಿಯಾಗಿದೆ. ಬಂಗಾಳದಲ್ಲಿ ಸೌಹಾರ್ದ ಮತ್ತು ಸುಧಾರಣೆಯ ದೊಡ್ಡ ಪರಂಪರೆ ಇದೆ. ಸತಿ ಸಹಗಮನ ಪದ್ಧತಿ ವಿರುದ್ಧ ರಾಜಾರಾಮ್ ಮೋಹನರಾಯ್ ನಡೆಸಿದ ಹೋರಾಟ. ಅದಕ್ಕೆ ಮಣಿದು ಅಂದಿನ ಬ್ರಿಟಿಷ್ ಸರಕಾರ ಸತಿ ಸಹಗಮನ ಪದ್ಧ್ದತಿ ನಿಷೇಧಿಸುವ ಕಾನೂನು ತಂದಿತು. ಅದೇ ರೀತಿ ಈಶ್ವರಚಂದ್ರ ವಿದ್ಯಾಸಾಗರ ಅವರು ವಿಧವೆಯರು ಮರು ಮದುವೆಯಾಗುವ ಶಾಸನ ಬರಲು ಕಾರಣರಾದರು. ಇವೆಲ್ಲ ಸಂಘ ಪರಿವಾರದ ಕಲ್ಪನೆಯ ಹಿಂದುತ್ವಕ್ಕೆ ವಿರುದ್ಧವಾದ ಸಂಗತಿಗಳು. ಸತಿ ಸಹಗಮನ ಪದ್ಧ್ದತಿಯನ್ನು ಸಂಘವಾಗಲಿ ಅಥವಾ ವಿಶ್ವ ಹಿಂದೂ ಪರಿಷತ್ತಾಗಲಿ ವಿರೋಧಿಸುವುದಿಲ್ಲ. ವಿಎಚ್‌ಪಿ ನಾಯಕಿಯಾಗಿದ್ದ ರಾಜಮಾತಾ ವಿಜಯರಾಜೇ ಸಿಂಧಿಯಾ ಬಹಿರಂಗವಾಗಿ ಸತಿ ಸಹಗಮನ ಪದ್ಧ್ದತಿಯನ್ನು ಸಮರ್ಥಿಸುತ್ತಿದ್ದರು. ಇಂಥವರಿಗೆ ಆಧುನಿಕ ಬಂಗಾಳದ ಅಸ್ಮಿತೆಯಾದ ರಾಜಾರಾಮ್ ಮೋಹನರಾಯ್, ಈಶ್ವರಚಂದ್ರರ ವಿದ್ಯಾಸಾಗರ, ರವೀಂದ್ರನಾಥ ಟಾಗೋರ್ ಅವರನ್ನು ಕಂಡರೆ ಆಗುವುದಿಲ್ಲ.

ತಮಗೆ ಅಡ್ಡಿಯಾದವರ ನೆನಪುಗಳನ್ನು, ಸ್ಮಾರಕಗಳನ್ನು, ಮೂರ್ತಿಗಳನ್ನು ನಾಶ ಮಾಡುವುದು ಇವರ ಅಜೆಂಡಾ. ಬಂಗಾಳದ ಐಕಾನ್‌ಗಳ ಬಗ್ಗೆ ಹೊಸ ಪೀಳಿಗೆಯ ಯುವಕರಿಗೆ ಸರಿಯಾಗಿ ಗೊತ್ತಿಲ್ಲ. ಅಂತಲೇ ಈ ಐಕಾನ್‌ಗಳ ನೆನಪುಗಳನ್ನು ಅಳಿಸಿ ಹಾಕಿ ಹಿಂದುತ್ವದ ಹೊಸ ಐಕಾನ್‌ಗಳನ್ನು ಬಂಗಾಳದ ಮೇಲೆ ಹೇರಲು ಸಂಘ ಪರಿವಾರ ಯತ್ನಿಸುತ್ತಿದೆ. ಈಗ ರಾಜಾರಾಮ್ ಮೋಹನರಾಯ್, ಈಶ್ವರಚಂದ್ರರ ಬಗ್ಗೆ ಅನೇಕರಿಗೆ ಗೊತ್ತಿಲ್ಲ, ಇಂಥ ಹೊಸ ಪೀಳಿಗೆಯ ತಲೆಯಲ್ಲಿ ದ್ವೇಷದ ಹಿಂದುತ್ವವನ್ನು ತುಂಬಿ ಈಗ ಅವರಿಗೆ ಜೈಶ್ರೆರಾಮ್ ಎಂಬ ಹೊಸ ಐಕಾನನ್ನು ಸೃಷ್ಟಿಸಲಾಗಿದೆ. ಈ ಪ್ರಯೋಗ ಬಂಗಾಳದಲ್ಲೂ ಯಶಸ್ವಿಯಾದಂತೆ ಕಾಣುತ್ತಿದೆ. ರಾಜ್ಯಕ್ಕೆ ಪಕ್ಕದ ಬಾಂಗ್ಲಾದೇಶದಿಂದ ವಲಸೆ ಬಂದ ಲಕ್ಷಾಂತರ ಜನರಲ್ಲಿ ಹಿಂದೂ, ಮುಸ್ಲಿಂ ಎಂದು ವಿಭಜನೆ ಮಾಡಲಾಗಿದೆ. ಹೊರಗಿನಿಂದ ಬಂದ ಮುಸಲ್ಮಾನರನ್ನು ಅತಿಕ್ರಮಣಕಾರರು ಎಂದು ಅದೇ ರೀತಿ ಬಂದ ಹಿಂದೂಗಳನ್ನು ವಲಸೆಗಾರರೆಂದು ಕರೆದು ಇವರು ನಮ್ಮವರು ಅವರು ನಮ್ಮವರಲ್ಲ ಎಂದು ವಿಭಜನೆ ಮಾಡಲಾಗಿದೆ.

ವಲಸೆಗಾರರನ್ನು ಹಿಂದೂ-ಮುಸ್ಲಿಂ ಎಂದು ವಿಭಜಿಸಿ ಹಿಂದೂಗಳನ್ನು ವಲಸೆಗಾರರೆಂದು ಕರೆದು ಅವರಿಗೆ ಪೌರತ್ವದ ಹಕ್ಕು ನೀಡುವ, ಮುಸಲ್ಮಾನರನ್ನು ಅತಿಕ್ರಮಣಕಾರರೆಂದು ಕರೆದು ಅವರನ್ನು ಹೊರದಬ್ಬುವ, ನಾಗರಿಕ ಹಕ್ಕು ನಿರಾಕರಿಸುವ ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರಕಾರದ ಕ್ರಮ ಅತ್ಯಂತ ಅಪಾಯಕಾರಿಯಾಗಿದೆ.

ಇದಕ್ಕೆ ಪೂರಕವೆಂಬಂತೆ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ರಾಜ್ಯದಲ್ಲಿ ಭಿನ್ನಮತ ಬೆಳೆಯಲು ಬಿಡಲಿಲ್ಲ. ರಾಜಕೀಯ ಎದುರಾಳಿಗಳನ್ನು ಹಿಂಸೆಯ ಮೂಲಕ ಹತ್ತಿಕ್ಕುತ್ತ ಬಂತು. ಈ ಆರೋಪ ಈ ರಾಜ್ಯವನ್ನು ಮೂರು ದಶಕಗಳ ಕಾಲ ಆಳಿದ ಸಿಪಿಎಂ ಮೇಲೂ ಇದೆ. ಹಿಂಸೆ ಬಂಗಾಳಕ್ಕೆ ಹೊಸದಲ್ಲ. ಅದು ಸಿದ್ಧಾರ್ಥ ಶಂಕರರಾಯ ಮುಖ್ಯಮಂತ್ರಿಯಾದ ಕಾಲದಿಂದಲೂ ಇದೆ. ಸಾವಿರಾರು ಸಿಪಿಎಂ ಕಾರ್ಯಕರ್ತರೂ ಹಿಂಸೆಗೆ ಬಲಿಯಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ರಾಜಕೀಯ ಘರ್ಷಣೆ, ಹಿಂಸಾಚಾರಗಳು ನಡೆದಿವೆ. ಆದರೆ ಆ ಘರ್ಷಣೆಗಳಲ್ಲಿ ಕೋಮು ದ್ವೇಷವಿರಲಿಲ್ಲ. ಬಿಜೆಪಿಯ ಪ್ರವೇಶದ ನಂತರ ರಾಜ್ಯದಲ್ಲಿ ಕೋಮು ದ್ವೇಷ ಹೆಡೆಯಾಡುತ್ತಿದೆ. ರಾಜಕೀಯ ಘರ್ಷಣೆಗಳು ತಾತ್ಕಾಲಿಕವಾಗಿ ನಡೆದು ತಣ್ಣದಾಗುತ್ತಿದ್ದವು. ಆದರೆ, ಬಿಜೆಪಿ ಬಂಗಾಳಕ್ಕೆ ಪರಿಚಯಿಸುತ್ತಿರುವುದು ಎಂದೂ ತಣ್ಣಗಾಗದ ಕೋಮು ವೈರತ್ವವನ್ನು. ಇದು ಅತ್ಯಂತ ಅಪಾಯಕಾರಿಯಾಗಿದೆ.

ಪಶ್ಚಿಮ ಬಂಗಾಳ ಈಗ ಮುಂಚಿನಂತಿಲ್ಲ. ವಿಶ್ವಹಿಂದೂ ಪರಿಷತ್ ಗ್ರಾಮೀಣ ಬಂಗಾಳಕ್ಕೂ ವ್ಯಾಪಿಸಿದೆ. ಶಾಲೆ, ಕಾಲೇಜು, ಆಸ್ಪತ್ರೆಗಳನ್ನು ನಡೆಸುತ್ತಿದೆ. ದೇಶದಲ್ಲಿ ಆರೆಸ್ಸೆಸ್ ನಡೆಸುವ 85,000 ಶಾಲೆಗಳಲ್ಲಿ ಬಂಗಾಳದಲ್ಲೇ 3600 ಶಾಲೆಗಳು ತಲೆ ಎತ್ತಿವೆ. ದಲಿತ, ಆದಿವಾಸಿ ಮಕ್ಕಳು ಗಾಯತ್ರಿ ಮಂತ್ರ ಪಠಿಸುತ್ತಿದ್ದಾರೆ. ರಾಜಕೀಯವಾಗಿ ಇದರ ಲಾಭ ಬಿಜೆಪಿಗೆ ಆಗುತ್ತದೆ.

ಬಂಗಾಳ ಬದಲಾಗುತ್ತಿದೆ. ಅದು ಮತ್ತೆ ಹಳಿಗೆ ಬರುವುದು ಕಷ್ಟ. ಮಮತಾ ಬ್ಯಾನರ್ಜಿ ಮೇಲಿನ ಕೋಪದಿಂದ ಅನೇಕ ಸಿಪಿಎಂ ಕಾರ್ಯಕರ್ತರು ಬಿಜೆಪಿ ಪರವಾಗಿ ಮತದಾನ ಮಾಡಿದ ವದಂತಿ ಇದೆ. ಅಂತಲೇ ಹಿರಿಯ ಸಿಪಿಎಂ ನಾಯಕ ಮಾಜಿ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಎಚ್ಚರಿಕೆ ನೀಡುತ್ತ ಬಾಣಲೆಯಿಂದ ಬೆಂಕಿಗೆ ಬೀಳಬೇಡಿ ಎಂದಿದ್ದಾರೆ.

ಈಗ ಬರುತ್ತಿರುವ ವಿಶ್ಲೇಷಣೆಗಳ ಪ್ರಕಾರ, ಬಿಜೆಪಿ ಮೇಲುಗೈ ಸಾಧಿಸಬಹುದು. ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ಕಳೆದುಕೊಳ್ಳಲಿರುವ ಸ್ಥಾನಗಳನ್ನು ಬಿಜೆಪಿ ಇಲ್ಲಿ ಪಡೆಯಬಹುದು. ಆದರೆ ಶತಮಾನಗಳ ಕಾಲ ಆಧುನಿಕತೆ, ವೈಚಾರಿಕತೆ ಮೈಗೂಡಿಸಿಕೊಂಡು ಬಂದ ಬಂಗಾಳ ಬಿಜೆಪಿ ಬುಟ್ಟಿಗೆ ಬೀಳುವುದು ಅಂದುಕೊಂಡಷ್ಟು ಸುಲಭವಲ್ಲ.

ಈ ಲೋಕಸಭಾ ಚುನಾವಣೆಯಲ್ಲಿ ಅಮರ್ ಸೋನಾರ ಬಂಗಾಲ ಸುರಕ್ಷಿತವಾಗಿ ಉಳಿಯುತ್ತದೋ ಇಲ್ಲ ಕೋಮು ದ್ವೇಷದ ದಳ್ಳುರಿಯನ್ನು ಆಯ್ಕೆ ಮಾಡಿಕೊಳ್ಳುತ್ತದೊ ಕಾಯ್ದು ನೋಡಬೇಕು.

ಇಷ್ಟೆಲ್ಲ ಬರೆಯುವಾಗ ನನಗೆ ಈಗಲೂ ಒಂದು ಪ್ರಶ್ನೆ ಕಾಡುತ್ತಲೇ ಇದೆ. ಮೂರುವರೆ ದಶಕಗಳ ಕಾಲ ಈ ರಾಜ್ಯವನ್ನು ಆಳಿದ ಕಮ್ಯುನಿಸ್ಟರು ರಾಜ್ಯದಲ್ಲಿ ಪರ್ಯಾಯವಾದ ವೈಚಾರಿಕವಾದ ಸಂಸ್ಕೃತಿಯನ್ನು ಯಾಕೆ ನಿರ್ಮಿಸಲಿಲ್ಲ? ಬರೀ ಭೂಮಿ ಹಂಚಿದರೆ ಸಾಕೇ? ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ವಾತಾವರಣದಲ್ಲಿ ಬದಲಾವಣೆ ತರಬೇಕಾಗಿತ್ತಲ್ಲ. ಅಧಿಕಾರಕ್ಕೆ ಬಂದಾಗ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಪರ್ಯಾಯವಾದ ಶೈಕ್ಷಣಿಕ ಸಂಸ್ಥೆಗಳನ್ನು ಕಟ್ಟಿಕೊಳ್ಳಬೇಕಾಗಿತ್ತು. ಹೊಸ ಪೀಳಿಗೆಯ ಯುವಕರು ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳ ಬಲೆಗೆ ಬೀಳದಂತೆ ನೋಡಿಕೊಳ್ಳಬೇಕಾಗಿತ್ತು. ಅದೇಕೆ ಆಗಲಿಲ್ಲ? ಈ ಬಗ್ಗೆಯೂ ಪರಾಮರ್ಶೆ ನಡೆಯಬೇಕು. ಹೀಗೆ ಮಾಡದಿರಲು ಬಂಡವಾಳಶಾಹಿ ಹುನ್ನಾರ, ತೃಣಮೂಲ ದೌರ್ಜನ್ಯ, ನಂದಿಗ್ರಾಮ ವೈಫಲ್ಯ ಮುಂತಾದ ಕಾರಣ ನೀಡಬಹುದು ಆದರೂ ಆತ್ಮಾವಲೋಕನ ಅಗತ್ಯ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News