ರೊನಾಲ್ಡೊಗೆ ಇಟಲಿಯ ವರ್ಷದ ದೇಶೀಯ ಆಟಗಾರ ಪ್ರಶಸ್ತಿ

Update: 2019-05-19 18:37 GMT

ರೋಮ್, ಮೇ 19: ಜುವೆಂಟಸ್‌ನ ಸ್ಟಾರ್ ಸ್ಟ್ರೈಕರ್ ಕ್ರಿಸ್ಟಿಯಾನೊ ರೊನಾಲ್ಡೊ ಶನಿವಾರ ಇಟಾಲಿಯನ್ ಸೀರೀ ಎ ವರ್ಷದ ಅಟಗಾರ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. ಇಟಲಿಯಲ್ಲಿ ತನ್ನ ಮೊದಲ ವರ್ಷದಲ್ಲೇ ಈ ಪ್ರಶಸ್ತಿಯನ್ನು ಜಯಿಸಿರುವುದು ಪೋರ್ಚುಗಲ್ ಆಟಗಾರನ ಮಹತ್ವದ ಸಾಧನೆಯಾಗಿದೆ. ರೊನಾಲ್ಡೊ ರವಿವಾರ ಅಟ್ಲಾಂಟ ವಿರುದ್ಧ ಜುವೆಂಟಸ್ ಪರ ಪಂದ್ಯಕ್ಕಿಂತ ಮೊದಲು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ .

ರೊನಾಲ್ಡೊ ಈ ಗೆಲುವಿನೊಂದಿಗೆ ಇಂಗ್ಲೆಂಡ್, ಸ್ಪೇನ್ ಹಾಗೂ ಇಟಲಿಯಲ್ಲಿ ದೇಶೀಯ ಆಟಗಾರ ಪ್ರಶಸ್ತಿ ಜಯಿಸಿದ ಹಿರಿಮೆಗೆ ಪಾತ್ರರಾದರು. ರೊನಾಲ್ಡೊ ಈಗಾಗಲೇ ಐದು ಬಾರಿ ಪ್ರತಿಷ್ಠಿತ ಬ್ಯಾಲನ್ ಡಿೞಒರ್ ಪ್ರಶಸ್ತಿ ಜಯಿಸಿ ಪ್ರತಿಸ್ಪರ್ಧಿ ಲಿಯೊನೆಲ್ ಮೆಸ್ಸಿ ಅವರೊಂದಿಗೆ ಸಮಬಲ ಸಾಧಿಸಿದ್ದಾರೆ. ರೊನಾಲ್ಡೊ ಇಂಗ್ಲೆಂಡ್, ಸ್ಪೇನ್ ಹಾಗೂ ಇಟಲಿಯಲ್ಲಿ ಲೀಗ್ ಚಾಂಪಿಯನ್‌ಶಿಪ್‌ನ್ನು ಜಯಿಸಿದ್ದಾರೆ. 34ರ ಹರೆಯದ ಸ್ಟ್ರೈಕರ್ ರೊನಾಲ್ಡೊ 2018ರಲ್ಲಿ ಜುವೆಂಟಸ್ ಫುಟ್ಬಾಲ್ ಕ್ಲಬ್‌ನ್ನು ಸೇರ್ಪಡೆಯಾಗಿದ್ದಾರೆ. ಸಾರ್ವಕಾಲಿಕ ಶ್ರೇಷ್ಠ ಗೋಲ್‌ಸ್ಕೋರರ್ ಎನಿಸಿಕೊಳ್ಳುವುದರೊಂದಿಗೆ ರಿಯಲ್ ಮ್ಯಾಡ್ರಿಡ್ ತಂಡವನ್ನು ತೊರೆದಿದ್ದರು. ಮ್ಯಾಡ್ರಿಡ್ ಪರ ಸತತ ಮೂರು ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.

ರೊನಾಲ್ಡೊ ಈ ಋತುವಿನಲ್ಲಿ ಜುವೆಂಟಸ್ ಎಫ್‌ಸಿ ಪರ 21 ಗೋಲುಗಳನ್ನು ಗಳಿಸಿ ಅಮೋಘ ಪ್ರದರ್ಶನ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News