ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಬೆಚ್ಚಿಬೀಳಿಸುವ ಸತ್ಯ ಬಹಿರಂಗಪಡಿಸಿದ ಅಭಿಸಾರ್ ಶರ್ಮಾ

Update: 2019-05-20 10:54 GMT

ನಿನ್ನೆ ಹೊರಬಿದ್ದಿರುವ ಚುನಾವಣೋತ್ತರ ಸಮೀಕ್ಷೆಗಳು ಎನ್ ಡಿಎ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದೆ. ಬಹುತೇಕ ಎಲ್ಲಾ ಸಮೀಕ್ಷೆಗಳಲ್ಲಿ ಬಿಜೆಪಿ 300ರ ಗಡಿಯನ್ನು ದಾಟಿದೆ. ಆದರೆ ಸಮೀಕ್ಷೆಗಳನ್ನು ನಡೆಸುವ ಏಜೆನ್ಸಿಗಳ ಬಗ್ಗೆ ಪತ್ರಕರ್ತ ಅಭಿಸಾರ್ ಶರ್ಮಾ ನೀಡಿರುವ ಮಾಹಿತಿಯೊಂದು ಈ ಸಮೀಕ್ಷೆಗಳ ಹಿಂದಿರುವ ‘ಲಾಭಿ’ಯ ಬಗ್ಗೆ ಮತ್ತು ‘ಬಾಹ್ಯ ಒತ್ತಡ’ದ ಬಗ್ಗೆ ಬೆಳಕು ಚೆಲ್ಲಿದೆ.

newsclick.in ನಡೆಸಿರುವ ಕಾರ್ಯಕ್ರಮದಲ್ಲಿ ಪತ್ರಕರ್ತ ಊರ್ಮಿಲೇಶ್ ಜೊತೆ ಅಭಿಸಾರ್ ಶರ್ಮಾ ಭಾಗವಹಿಸಿ ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಮಾತನಾಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಊರ್ಮಿಲೇಶ್, ಇದುವರೆಗೆ ಹಲವು ಬಾರಿ ಮತದಾನೋತ್ತರ ಸಮೀಕ್ಷೆಗಳು ಸುಳ್ಳಾಗಿವೆ. 50 ಶೇ. ಸಮೀಕ್ಷೆಗಳು ಸರಿಯಾಗಿಲ್ಲ ಎಂದಿದ್ದಾರೆ.

ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಕುತೂಹಲಕಾರಿ ಮಾಹಿತಿಗಳನ್ನು ಇದೇ ಸಂದರ್ಭ ಅಭಿಸಾರ್ ಶರ್ಮಾ ತೆರೆದಿಟ್ಟಿದ್ದಾರೆ. “ಪ್ರಮುಖ ಮಾಧ್ಯಮಗಳ ಮೂಲಕ ಹರಡುವ ಷಡ್ಯಂತ್ರ ಸಫಲವಾಗಿವೆ. ಮಾಧ್ಯಮಗಳ ಮೂಲಕ ಹರಡುವ ಷಡ್ಯಂತ್ರಗಳು ಪ್ರತಿ ಮನೆ ಬಾಗಿಲಿಗೆ ತಲುಪಿವೆ. ಸರಕಾರದ ಬಗ್ಗೆ ವಾಸ್ತವಾಂಶವನ್ನು ತೆರೆದಿಡುವ newsclick.inನಂತಹ ಪ್ಲಾಟ್ ಫಾರಂಗಳಿಗೆ ಮಿತಿಯಿದೆ. ಪ್ರಮುಖ ಮಾಧ್ಯಮಗಳ ವೀಕ್ಷಕರಿಗೆ ಪ್ರಧಾನಿ ಯಾವುದೇ ತಪ್ಪನ್ನು ಮಾಡದವರಾಗಿದ್ದಾರೆ. ಆದರೆ ಅವರೇನು ಮಾಡುತ್ತಿದ್ದಾರೆ ಎನ್ನುವುದು ನಮಗೆ ತಿಳಿದಿದೆ. ಅವರು ಧರ್ಮ, ರಾಷ್ಟ್ರವಾದ, ಸೇನೆಗಳನ್ನು ತನ್ನ ಸ್ವಾರ್ಥಕ್ಕಾಗಿ ಹೇಗೆ ಬಳಸಿಕೊಂಡಿದ್ದಾರೆ ಎನ್ನುವ ಬಗ್ಗೆ ನಮಗೆ ಅರಿವಿದೆ” ಎನ್ನುತ್ತಾರೆ.

ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಅಭಿಸಾರ್ ಶರ್ಮಾ ತೆರೆದಿಟ್ಟ ಸತ್ಯಾಂಶಗಳಿವು...

“ಚುನಾವಣೋತ್ತರ ಸಮೀಕ್ಷೆಗಳ ವಿಷಯದಲ್ಲಿ ಮಾಧ್ಯಮಗಳ ಮೇಲೆ ಹೇಗೆ ಒತ್ತಡವಿದೆ ಎನ್ನುವ ಬಗ್ಗೆ ನಾನು ನಿಮಗೆ ಕೆಲ ವಿಚಾರಗಳನ್ನು ಹೇಳುತ್ತೇನೆ.  ಮೊದಲನೆಯದಾಗಿ, ಪ್ರಧಾನಿ ಕಾರ್ಯಾಲಯದಿಂದ ಪ್ರತಿ ಚುನಾವಣೋತ್ತರ ಸಮೀಕ್ಷಾ ಏಜೆನ್ಸಿಗಳಿಗೆ ವಿಪಕ್ಷಗಳ ನಂಬರ್ ಗಳನ್ನು (ಗೆಲ್ಲುವ ಸ್ಥಾನಗಳನ್ನು) ಕಡಿಮೆ ಮಾಡಬೇಕು ಎನ್ನುವ ಸೂಚನೆ ಸಿಕ್ಕಿದೆ. ಇದಕ್ಕೆ ಉದಾಹರಣೆಯೆಂಬಂತೆ ಬಿಜೆಪಿಗೆ 180 ಸೀಟುಗಳನ್ನು ತೋರಿಸಿದ್ದ ಚಾನೆಲ್ ಒಂದು ಇದ್ದಕ್ಕಿದ್ದಂತೆ ಈ ಸಂಖ್ಯೆಯನ್ನು 250ಕ್ಕೆ ಹೆಚ್ಚಿಸಿತು".

"2 ಏಜೆನ್ಸಿಗಳಲ್ಲಿ ಒಂದು ಏಜೆನ್ಸಿಯು 300 ಸೀಟುಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದಿದೆ.  ಈ ಏಜೆನ್ಸಿ ಮತ್ತು ಇನ್ನೊಂದು ಏಜೆನ್ಸಿ ಬಿಜೆಪಿಗಾಗಿ ಗ್ರೌಂಡ್ ವರ್ಕ್ ಮಾಡುವ ಏಜನ್ಸಿಗಳಾಗಿವೆ. ಇದನ್ನು ಹೊರತುಪಡಿಸಿ ಮತ್ತೊಂದು ಏಜೆನ್ಸಿಯು ಬೆಟ್ಟಿಂಗ್ ದಂಧೆಯಲ್ಲಿ ಹಣ ಹೂಡಿದೆ. ಈ ಚುನಾವಣೋತ್ತರ ಸಮೀಕ್ಷೆಗಳ ನಂತರ ಹಲವರು ಶ್ರೀಮಂತರಾಗಲಿದ್ದಾರೆ. ಈ ಆಟವು ಬೆಟ್ಟಿಂಗ್ ದಂಧೆಯದ್ದಾಗಿದೆ".

"ಆದರೆ ಒಂದು ವೇಳೆ ಮೇ 23ರಂದು ಸಮೀಕ್ಷೆಗಳ ಪ್ರಕಾರವೇ ಬಿಜೆಪಿ ಸೀಟು ಗಳಿಸಿದರೆ, ಇದು ಇವಿಎಂ ಕೈಚಳಕ ಎಂದು ವಿಪಕ್ಷಗಳು ಆರೋಪಿಸಬಹುದು. ಆದರೆ ಈ ಆರೋಪಗಳನ್ನು ನಾನು ನಂಬುವುದಿಲ್ಲ. ಏಕೆಂದರೆ ದೇಶದ ಜನರ ಮನಸ್ಥಿತಿಯನ್ನು ಮಾಧ್ಯಮಗಳು ಬದಲಿಸಿವೆ. ಮೋದಿಜಿ ಇಲ್ಲದಿದ್ದರೆ ಮುಸ್ಲಿಮರು ತಲೆಯ ಮೇಲೆ ಹತ್ತಿ ಕುಳಿತುಕೊಳ್ಳುತ್ತಾರೆ, ಮೋದಿಜಿ ಇಲ್ಲದಿದ್ದರೆ ಕಷ್ಟಸಾಧ್ಯವಾಗಬಹುದು ಎನ್ನುವ ಮನಸ್ಥಿತಿಯನ್ನು ಹರಡಲಾಗುತ್ತಿದೆ" ಎಂದು ಅಭಿಸಾರ್ ಶರ್ಮಾ ಹೇಳುತ್ತಾರೆ.

ಇದೇ ಸಂದರ್ಭ ಮತ್ತೊಂದು ಮಾಹಿತಿಯನ್ನು ಊರ್ಮಿಲೇಶ್ ನೀಡುತ್ತಾರೆ. ಕಾರ್ಯಕ್ರಮದಲ್ಲಿ ಮಾತನಾಡುವ ಅವರು, “ಮತದಾನೋತ್ತರ ಸಮೀಕ್ಷೆ ನಡೆಸುವ ಏಜೆನ್ಸಿಗಳ ಬಗ್ಗೆ ನ್ಯೂಸ್ ಎಕ್ಸ್ ಪ್ರೆಸ್ ಕುಟುಕು ಕಾರ್ಯಾಚರಣೆಯೊಂದನ್ನು ಈ ಹಿಂದೆ ನಡೆಸಿತ್ತು. ಹಲವು ಕಂಪೆನಿಗಳು ಹಣ ಪಡೆದುಕೊಂಡು ಸಮೀಕ್ಷೆಗಳನ್ನು ನಡೆಸುತ್ತಿತ್ತು ಎನ್ನುವುದು ಬಯಲಾಗಿತ್ತು. ಈ ಸಂದರ್ಭ ನಾನು ನ್ಯೂಸ್ ರೂಂನಲ್ಲಿದ್ದೆ. ಅಂದು ಕುಟುಕು ಕಾರ್ಯಾಚರಣೆಯಲ್ಲಿ ಯಾವೆಲ್ಲಾ ಏಜೆನ್ಸಿಗಳ ಹೆಸರು ಕೇಳಿಬಂದಿತ್ತೋ, ಆ ಎಲ್ಲಾ ಹೆಸರುಗಳ ಸಮೀಕ್ಷೆಗಳು ಇಂದಿಗೂ ಟಿವಿ ಸ್ಕ್ರೀನ್ ಗಳಲ್ಲಿವೆ” ಎಂದು ಮಾಹಿತಿ ನೀಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News